ಸೋಮವಾರ, ಅಕ್ಟೋಬರ್ 14, 2019
29 °C

ಕುಟುಂಬದಲ್ಲಿ ಒಂದೇ ಗಂಡು ಮಗುವಿದ್ದರೆ ಕಂಟಕ....!

Published:
Updated:

ಗಂಗಾವತಿ: ಕುಟುಂಬದಲ್ಲಿ ಒಂದೇಗಂಡು ಮಗುವಿದ್ದರೆ ಕೂಡಲೆ ಹೆಣ್ಣು ದೇವತೆಯ ದೇವಸ್ಥಾನಕ್ಕೆ ತೆರಳಿ ಅಕ್ಕಿ, ಬೆಲ್ಲ, ಬೇಳೆ, ಹಣ್ಣು-ಕಾಯಿ ಮತ್ತು ಕಾಣಿಕೆ ನೀಡಬೇಕು, ಇಲ್ಲವೇ ಅರಳಿ ಮರಕ್ಕೆ ಎಣ್ಣೆ ಅರ್ಪಿಸಬೇಕು, ಇಲ್ಲವಾದಲ್ಲಿ ಮಗುವಿಗೆ ಕಂಟಕ ಕಾಡುತ್ತದೆ.....ಹೀಗೊಂದು ಸುದ್ದಿ ನಗರದಲ್ಲಿ ಕಳೆದ ಒಂದು ವಾರದಿಂದ ಹರಿದಾಡುತ್ತಿದೆ. ಅದು ವಿಶೇಷವಾಗಿ ನಗರದ ಕೊಳಚೆ ಪ್ರದೇಶ, ಅನಕ್ಷರಸ್ಥರು ಹೆಚ್ಚಿರುವ ವಾರ್ಡ್‌ಗಳಲ್ಲಿ ಇಂತಹ ಸುದ್ದಿ ಹರಡಿದ್ದು, ಅಮಾಯಕ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.ಗಂಡು ಮಕ್ಕಳಿಗೆ ಏನು ಆಗದಿದ್ದರೆ ಸಾಕು ಎಂಬ ಧಾವಂತದಲ್ಲಿ ಪಾಲಕರು ಎದ್ದು-ಬಿದ್ದು ಹತ್ತಿರ ಇರುವ ಹೆಣ್ಣು ದೇವಿಯರು ನೆಲೆಸಿರುವ ಗುಡಿ-ಗುಂಡಾರಗಳಿಗೆ ತೆರಳಿ ಹರಕೆ ಸಲ್ಲಿಸಿ ನೆಮ್ಮದಿ ನಿಟ್ಟುಸಿರು ಬಿಟ್ಟು ಬರುತ್ತಿರುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿದೆ.ದೇವಿಯ ಮುನಿಸು: ಕಳೆದ 56 ವರ್ಷದ ಬಳಿಕ ಇತ್ತೀಚೆಗಷ್ಟೆ ಗಂಗಾವತಿ ಗ್ರಾಮದ ದೇವತೆ ದುರ್ಗಮ್ಮಳ ಜಾತ್ರೆಯನ್ನು ಎಲ್ಲ ಸಮಾಜ ಬಾಂಧವರು ಸೇರಿ ಅದ್ದೂರಿಯಾಗಿ ಆಚರಿಸಿದರು. ಆದರೆ `ದೇವಿಗೆ ಬಲಿ ನೈವೇದ್ಯ ಅರ್ಪಿಸುವ ಸಂದರ್ಭದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ.ಇದರಿಂದಾಗಿ ದೇವಿ ಮುನಿಸಿಕೊಂಡಿದ್ದು, ಗಂಡು ಮಕ್ಕಳು ಅದರಲ್ಲೂ ಕುಟುಂಬದಲ್ಲಿ ಏಕೈಕ ಗಂಡು ಸಂತಾನವಿದ್ದರೆ, ಆ ಮಗುವಿನ ಮೇಲೆ ದೇವಿ ಮುನಿಸಿಕೊಂಡು ಕಾಡುತ್ತಾಳೆ~ ಎಂಬ ತಳಬುಡವಿಲ್ಲದ ವದಂತಿಯನ್ನು ನಗರದಲ್ಲಿ ಹಬ್ಬಿಸಲಾಗಿದೆ.ದೇವಿಯನ್ನು ಸಂತುಷ್ಟಗೊಳಿಸಲು ಪಾಲಕರು ದೇವಸ್ಥಾನಕ್ಕೆ ತೆರಳಿ ಹಣ್ಣು-ಕಾಯಿ, ಕಾಣಿಕೆ ನೀಡಬೇಕು. ಅಶ್ವತ್ಥ ವೃಕ್ಷಕ್ಕೆ ಹರಳೆಣ್ಣೆ ಹಾಕಬೇಕೆಂಬ ಇತ್ಯಾದಿ ವದಂತಿ ಹಬ್ಬಿಸಲಾಗಿದೆ. `ಇದೊಂದು ಪುರೋಹಿತ ಶಾಹಿ ತಂತ್ರವಾಗಿರಬಹುದು~ ಎಂದು ವಿಜ್ಞಾನ ಶಿಕ್ಷಕ ಗುರುಪ್ರಸಾದ ದೂರುತ್ತಾರೆ.ಆತಂಕ ಬೇಡ: `ಯಾವ ದೇವರಿದ್ದರೂ ತನ್ನನ್ನು ಸಂತೃಪ್ತ ಪಡಿಸಲು ಇಂತಹದ್ದೇ ವಸ್ತು ಮುಡುಪಿಡು ಎಂದು ಭಕ್ತರನ್ನು ಒತ್ತಾಯಿಸುವುದಾಗಲಿ, ಬಲಿಯಾಗಲಿ ಬೇಡುವುದಿಲ್ಲ~ ಎಂದು ಹುಲಿಹೈದರದ ಅರ್ಚಕ, ಹಾಗೂ ಜ್ಯೋತಿಷ್ಯಕಾರ ತಿರಪತಿ ಆಚಾರ ಹೇಳಿದ್ದಾರೆ.ಈ ಬಗ್ಗೆ ಮಂಗಳವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು `ಪೂಜೆ ಸರಿಯಾದರೆ ದೇವತೆಯರು ತೃಪ್ತರಾಗುತ್ತಾರೆ. ದುರ್ಗಮ್ಮ ಜಾತ್ರೆ ಸಂಪ್ರದಾಯ ಬದ್ಧವಾಗಿ. ಯಾವ ಮಗುವಿಗೂ ತೊಂದರೆ ಇಲ್ಲ. ಪಾಲಕರು ಆತಂಕಪಡುವ ಅಗತ್ಯ ಇಲ್ಲ~ ಎಂದು ಹೇಳಿದರು.

Post Comments (+)