ಕುಟುಂಬದ ಆಧಾರ ಈ ಅಂದಪ್ಪ

7

ಕುಟುಂಬದ ಆಧಾರ ಈ ಅಂದಪ್ಪ

Published:
Updated:
ಕುಟುಂಬದ ಆಧಾರ ಈ ಅಂದಪ್ಪ

ಗಜೇಂದ್ರಗಡ: ಸಾಮಾನ್ಯವಾಗಿ ಅಂಗವಿಕಲರಿಗೆ ಇಡೀ ಕುಟುಂಬ ಬೆನ್ನೆಲುಬಾಗಿ ನಿಂತಿರುತ್ತದೆ. ಆದರೆ, ಇಲ್ಲೊಬ್ಬ ಅಂಗವಿಕಲ ಯುವಕನೊಬ್ಬ ತನ್ನ ಕಠಿಣ ಪರಿಶ್ರಮದ ದುಡಿಮೆಯ ಮೂಲಕ ಕುಟುಂಬ ನಿರ್ವಹಣೆಯ ಜವಾಬ್ದಾರಿಯ ನೊಗ ಹೊತ್ತು ಅಂಗವಿಕಲ ಸಮೂಹಕ್ಕೆ ಆದರ್ಶರಾಗಿದ್ದಾರೆ.ಹೌದು, ಗದಗ ಜಿಲ್ಲೆ ರೋಣ ತಾಲ್ಲೂಕಿನ ಗಜೇಂದ್ರಗಡ ಪಟ್ಟಣದ ಜನತಾ ಪ್ಲಾಟ್‌ನ ಇಪ್ಪತ್ತೆರಡು ವರ್ಷದ ಯುವ ಅಂಗವಿಕಲ ಚೇತನ ಅಂದಪ್ಪ ಗಿಡ್ಡಪ್ಪ ಗುಡೂರ ವಿಶಿಷ್ಟ ವ್ಯಕ್ತಿತ್ವದ ರೂವಾರಿ.ಸ್ವಾಭಿಮಾನಿ ಸಾವಲಂಬಿ ಬದುಕಿಗೆ ಶ್ರಮಿ ಸುತ್ತಿರುವವರ ಸಂಖ್ಯೆ ತೀರಾ ವಿರಳ. ಆದರೆ, ಅಂಗವಿಕಲ ಯುವಕ ಅಂದಪ್ಪ ಮಾತ್ರ ದಿನದ12 ಗಂಟೆಗಳ ಕಾಲ ಶ್ರಮವಹಿಸಿ ದುಡಿದು ಕುಟುಂಬ ನಿರ್ವಹಣೆಗೆ ಮುಂದಾಗಿರುವುದು ಅಂಗವಿಕಲರು ಅಸಹಾಯಕರಲ್ಲ, ಎಂತಹ ಕಠಿಣ ಪರಿಶ್ರಮದಲ್ಲೂ ಜೀವನ ಸಾಗಿಸಬಹುದು ಎಂಬುದನ್ನು ರುಜುವಾತು ಪಡಿಸಿದ್ದಾರೆ.ಹುಟ್ಟಿನಿಂದಲೇ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ಅಂದಪ್ಪನಿಗೆ ವೈಕಲ್ಯದಿಂದ ಮುಕ್ತಿ ಕೊಡಿಸಲು ಪಾಲಕರು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದವು. ಕಟ್ಟಡ ನಿರ್ಮಾಣ ಕಾರ್ಯದ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಅಂದಪ್ಪನ ತಂದೆ-ತಾಯಿಗಳಿಗೆ ದುಬಾರಿ ಮೊತ್ತದ ಹಣ ನೀಡಿ ಚಿಕಿತ್ಸೆ ಕೊಡಿಸುವ ಸಾಮರ್ಥ್ಯ ಇಲ್ಲದ್ದರಿಂದ  ಜಲ್ಲಿಕಲ್ಲು ತಯಾರಿಕೆ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪಾಲಕರ ಸಂಕಷ್ಟ ನಿವಾರಿಸುವಲ್ಲಿ ಸಹಾಯಕರಾಗಿದ್ದಾರೆ. ಜಲ್ಲಿಕಲ್ಲು ತಯಾರಿಕೆಯಲ್ಲಿ  ಅಂದಪ್ಪ ನಿತ್ಯ ಕನಿಷ್ಠ 10ಗಂಟೆ ಜಲ್ಲಿಕಲ್ಲು ತಯಾರಿಸುತ್ತಾರೆ.ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ ವಾರಿಕಲ್ ಗ್ರಾಮದಲ್ಲಿ ಹೇರಳವಾಗಿ ದೊರೆಯುವ ಚಿಂಚ್ ಕಲ್ಲನ್ನು ಟ್ರ್ಯಾಕ್ಟರ್ ಒಂದಕ್ಕೆ (ಬಾಡಿಗೆ ಸಹಿತ) 2,000 ರೂಪಾಯಿ ನೀಡಿ ಕಲ್ಲುಗಳನ್ನು ಖರೀದಿಸಿ, ಅವುಗಳನ್ನು 1.5 ಇಂಚಿನ ಸೈಜಿನಲ್ಲಿ ಸುತ್ತಿಗೆಯಿಂದ ಹೊಡೆದು ಸಣ್ಣಗಾಗಿಸಬೇಕು. ಹೀಗೆ ಗಾಳಿ, ಮಳೆ, ಬಿಸಿಲು, ಚಳಿ ಲೆಕ್ಕಿಸದೇ ತಯಾರಿಸಿದ ಜಲ್ಲಿಕಲ್ಲನ್ನು ಟ್ರ್ಯಾಕ್ಟರ್‌ಗೆ 2,500 ದರದಂತೆ ಮಾರಾಟ ಮಾಡಲಾಗುತ್ತದೆ. ಟ್ರ್ಯಾಕ್ಟರ್ ಜಲ್ಲಿಕಲ್ಲು ತಯಾರಿಸಲು ಕನಿಷ್ಠ 5 ರಿಂದ 8 ದಿನಗಳ ಶ್ರಮವಿರುತ್ತದೆ. ಬೆಳಗ್ಗೆಯಿಂದ ಸಂಜೆವರೆಗೂ ಸುತ್ತಿಗೆಯಿಂದ ಕಲ್ಲುಗಳನ್ನು ಒಡೆಯುವ ಸದ್ದಿಗೆ ಕಿವಿಗಳ ಶ್ರವಣ ಶಕ್ತಿ ಕುಗಿದೆ ಎಂದು ಅಂದಪ್ಪ `ಪ್ರಜಾವಾಣಿ' ಎದುರು ತಮ್ಮ ಪರಿಶ್ರಮದ ಬದುಕಿನ ಸಮಗ್ರತೆಯನ್ನು ವಿವರಿಸಿದರು.ಕಣ್ಣು, ಕಿವಿಗಳಲ್ಲಿ ಹುಳು, ಹರಳು, ಕಸ ಇತ್ಯಾದಿಗಳು ಮನುಷ್ಯನ ಕಣ್ಣುಗಳಲ್ಲಿ ಸೇರಿಕೊಂಡರೆ, ಜಾಣ್ಮೆಯಿಂದ ಅವುಗಳನ್ನು ತೆರವುಗೊಳಿಸುವ ಕೌಶಲವನ್ನು ಕರಗತ ಮಾಡಿಕೊಂಡಿದ್ದಾನೆ.`ಓಣಿಯ ಯಲ್ಲಪ್ಪ ಗೊಂದಳೆ ಎಂಬುವವರಿಂದ ಕಣ್ಣು, ಕಿವಿಗಳಲ್ಲಿ ಸೇರಿಕೊಂಡಿರುವ ಹರಳು, ಕಸ ತೆಗೆಯುತ್ತಿದ್ದರು. ಬಾಲ್ಯದಿಂದಲೂ ಅವರನ್ನು ಅನುಕರಣೆ ಮಾಡಿದ್ದರಿಂದ ಈ ಕಲೆ ನನಗೆ ಬಳುವಳಿಯಾಗಿ ಬಂದಿದೆ. ಈ ಕಲೆಯಿಂದಲೇ ನಿತ್ಯ 200 ರಿಂದ 300 ರೂ. ಸಂಪಾದಿಸುತ್ತೇನೆ' ಎನ್ನುತ್ತಾರೆ ಅಂದಪ್ಪ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry