ಗುರುವಾರ , ಆಗಸ್ಟ್ 5, 2021
22 °C

ಕುಟುಂಬದ ಹಸ್ತಕ್ಷೇಪ ಬೇಡ: ಸಚಿವರಿಗೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಯ ಕಸರತ್ತಿಗೆ ಕೈಹಾಕಿರುವ ಬಿಜೆಪಿ, ತಮ್ಮ ಕಾರ್ಯವೈಖರಿಯಲ್ಲಿ ಗಣನೀಯ ಸುಧಾರಣೆ ತರುವಂತೆ ಎಲ್ಲ ಸಚಿವರಿಗೆ ಸೂಚನೆ ನೀಡಿದೆ. ಅಲ್ಲದೇ, ಆಡಳಿತ ನಿರ್ವಹಣೆಯಲ್ಲಿ ಕುಟುಂಬದ ಸದಸ್ಯರ ಹಸ್ತಕ್ಷೇಪಕ್ಕೆ ಅವಕಾಶ ನೀಡದಂತೆ ತಾಕೀತು ಮಾಡಿದೆ.ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಖಾಸಗಿ ನಿವಾಸದಲ್ಲಿ ಸೋಮವಾರ ನಡೆದ ಸಚಿವರ ಸಭೆಯಲ್ಲಿ ಪಕ್ಷದ ವರ್ಚಸ್ಸು ವೃದ್ಧಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಯಿತು. ಜನರ ಮನಸ್ಸಿನಲ್ಲಿ ಪಕ್ಷದ ಕುರಿತ ಅಭಿಪ್ರಾಯವನ್ನು ಸಂಪೂರ್ಣವಾಗಿ ಬದಲಿಸುವುದು ಮತ್ತು ವರ್ಚಸ್ಸು ಕುಗ್ಗಿಸುವಂತಹ ಘಟನೆಗಳನ್ನು ನಿಯಂತ್ರಿಸುವ ಬಗ್ಗೆ ಸಚಿವರ ಜೊತೆ ನೇರ ಸಮಾಲೋಚನೆ ನಡೆಸಲಾಗಿದೆ.ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಈ ಸಭೆ ಮೊದಲು ನಿಗದಿಯಾಗಿತ್ತು. ಬಳಿಕ ಸೋಮವಾರ ಮಧ್ಯಾಹ್ನ ಹಠಾತ್ ಸಭೆಯ ಸ್ಥಳವನ್ನು ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ಖಾಸಗಿ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಸಂಜೆ ನಾಲ್ಕು ಗಂಟೆಗೆ ಆರಂಭವಾದ ಸಚಿವರ ಸಭೆ ತಡರಾತ್ರಿಯವರೆಗೂ ಮುಂದುವರಿಯಿತು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಸಭೆಯಲ್ಲಿ ಪಾಲ್ಗೊಂಡು, ಪಕ್ಷ ಮತ್ತು ಸರ್ಕಾರದ ನಡುವಿನ ಸಮನ್ವಯ ಕುರಿತು ಚರ್ಚೆ ನಡೆಸಿದರು. ಸರ್ಕಾರ ಮತ್ತು ಪಕ್ಷದ ಕಾರ್ಯಕ್ರಮಗಳ ನಡುವೆ ನೇರವಾದ ಸಮನ್ವಯ ಇರಬೇಕು. ಈ ದಿಸೆಯಲ್ಲಿ ಪಕ್ಷದ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.ನಾಲ್ಕು ದಿನ ವಿಧಾನಸೌಧದಲ್ಲಿ

ಸೋಮವಾರದಿಂದ ಗುರುವಾರದವರೆಗೆ ವಿಧಾನಸೌಧದಲ್ಲೇ ಕುಳಿತು ಕಾರ್ಯನಿರ್ವಹಿಸುವಂತೆ ಎಲ್ಲ ಸಚಿವರಿಗೆ ಯಡಿಯೂರಪ್ಪ ತಾಕೀತು ಮಾಡಿದ್ದಾರೆ. ಈ ಅವಧಿಯಲ್ಲಿ ತಾವು ಕೂಡ ವಿಧಾನಸೌಧದಲ್ಲೇ ಕುಳಿತು ಆಡಳಿತ ನಡೆಸುವುದಾಗಿ ತಿಳಿಸಿದ್ದಾರೆ. ಉಳಿದ ಮೂರು ದಿನಗಳನ್ನು ಪ್ರವಾಸಕ್ಕೆ ಬಳಸಿಕೊಳ್ಳಲು ಸೂಚಿಸಲಾಗಿದೆ.ಸಂಪುಟ ಸಭೆಗಳ ಹೊರತಾಗಿ ಪ್ರತಿ ಬುಧವಾರ ಸಚಿವರ ಸಭೆಯನ್ನು ನಡೆಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಸರ್ಕಾರದ ಕಾರ್ಯವೈಖರಿಯಲ್ಲಿ ಬದಲಾವಣೆ ತರಲು ಈ ಸಭೆಗಳನ್ನು ನಡೆಸಲು ಉದ್ದೇಶಿಸಿದ್ದು, ಅನಿವಾರ್ಯ ಇದ್ದಲ್ಲಿ ಬುಧವಾರದಂದು ಯಾವುದೇ ಸಚಿವರು ನೇರವಾಗಿ ತಮ್ಮನ್ನು ಭೇಟಿ ಮಾಡಿ ಮುಖಾಮುಖಿ ಚರ್ಚಿಸಲು ಅವಕಾಶ ನೀಡುವ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹಸ್ತಕ್ಷೇಪಕ್ಕೆ ತಡೆ

ಸಚಿವ ರೇವುನಾಯಕ್ ಬೆಳಮಗಿ ಅವರ ಪುತ್ರ ಗ್ರಂಥಾಲಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಘಟನೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಘಟನೆಯ ಬಗ್ಗೆ ಈಶ್ವರಪ್ಪ ತೀವ್ರ ಅಸಮಾಧಾನ ಹೊರಹಾಕಿದ್ದು, ‘ಯಾವುದೇ ಸಚಿವರು ನಿಮ್ಮ ಕುಟುಂಬದ ಸದಸ್ಯರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಡಿ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೆ ಪಕ್ಷದ ಘನತೆಗೆ ಕಳಂಕ ತಗಲುತ್ತದೆ’ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ಜನಾಂದೋಲನ ನಡೆಸಲು ಮುಂದಾಗಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ವಿರೋಧ ಪಕ್ಷಗಳ ಟೀಕೆಗೆ ಸಾರ್ವಜನಿಕ ಸಭೆಗಳ ಮೂಲಕವೇ ಉತ್ತರ ನೀಡಬೇಕು. ವಿರೋಧ ಪಕ್ಷಗಳನ್ನು ಟೀಕಿಸುವುದಕ್ಕಿಂತಲೂ, ಮೂರು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ಜನಪರ ಕಾರ್ಯಕ್ರಮಗಳು ಮತ್ತು ಜಾರಿಗೊಳಿಸಿರುವ ಪ್ರಮುಖ ಯೋಜನೆಗಳ ವಿಚಾರವನ್ನು ಮುಂದಿಟ್ಟುಕೊಂಡೇ ಪ್ರತಿಪಕ್ಷಗಳಿಗೆ ಉತ್ತರ ನೀಡಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.‘ಇನ್ನು ಎರಡು ವರ್ಷ ಮಾತ್ರ ಉಳಿದಿದೆ. ಈ ಪೈಕಿ ಒಂದೂವರೆ ವರ್ಷವನ್ನು ಪಕ್ಷದ ವರ್ಚಸ್ಸು ವೃದ್ಧಿಗೆ ಬಳಸಿಕೊಳ್ಳಬೇಕು. ಈ ಅವಧಿಯಲ್ಲಿ ಸಚಿವರ ವರ್ತನೆಯೂ ಸೇರಿದಂತೆ ಸಂಪೂರ್ಣ ಕಾರ್ಯವೈಖರಿ ಬದಲಾಗಬೇಕು. ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಗೊತ್ತಾಗಿದೆ.ಮೇ 30ಕ್ಕೆ ಬಿಜೆಪಿ ಸರ್ಕಾರ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ  ಬೃಹತ್ ಸಮಾವೇಶಗಳನ್ನು ನಡೆಸುವ ಬಗ್ಗೆಯೂ ಸಮಾಲೋಚನೆ ನಡೆದಿದೆ. ರಾಜ್ಯದ ಕಂದಾಯ ವಿಭಾಗಗಳಲ್ಲಿ ಬೃಹತ್ ಸಮಾವೇಶ ನಡೆಸುವುದು, ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸಮಾವೇಶ ನಡೆಸುವುದು ಮತ್ತಿತರ ಅಭಿಪ್ರಾಯಗಳನ್ನು ಹಲವು ಸಚಿವರು ಪ್ರಸ್ತಾಪಿಸಿದ್ದಾರೆ. ಆದರೆ ಈ ವಿಷಯದಲ್ಲಿ ಸಭೆಯಲ್ಲಿ ಯಾವುದೇ ಅಂತಿಮ ನಿರ್ಣಯ ಕೈಗೊಂಡಿಲ್ಲ.ರೆಡ್ಡಿ ಸಹೋದರರು ಗೈರು

ಸಚಿವರಾದ ಜಿ.ಜನಾರ್ದನ ರೆಡ್ಡಿ, ಜಿ.ಕರುಣಾಕರ ರೆಡ್ಡಿ, ಬಿ.ಶ್ರೀರಾಮುಲು ಮತ್ತು ಎಸ್.ಎ.ರವೀಂದ್ರನಾಥ್ ಸಭೆಗೆ ಗೈರು ಹಾಜರಾಗಿದ್ದರು. ನಾಲ್ವರು ಸಚಿವರೂ ಪೂರ್ವಾನುಮತಿ ಪಡೆದೇ ಸಭೆಯಿಂದ ದೂರ ಉಳಿದಿದ್ದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾರೂ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.