ಭಾನುವಾರ, ಮೇ 16, 2021
22 °C

`ಕುಟುಂಬ ಜೀವನ ಬಿಂಬಿಸುವ ಕೃತಿ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `ಕೌಟುಂಬಿಕ ಬದುಕು ಕುರಿತ ಕೃತಿಗಳ ರಚನೆ ಕನ್ನಡದಲ್ಲಿ ಅಷ್ಟಾಗಿ ಆಗಿಲ್ಲ. ಈ ನಿಟ್ಟಿನಲ್ಲಿ ವಿಜಯಕುಮಾರಿ ಎಸ್. ಕರಿಕಲ್ ಅವರ `ಗಂಧ ತೀಡಿದ್ಹಂಗ' ಕೃತಿ ವಿಶಿಷ್ಟವಾಗಿದೆ. ಕೌಟುಂಬಿಕ ಬದುಕು ಅಪಸ್ವರದಲ್ಲಿರುವ ಇಂದಿನ ಆಧುನಿಕ ದಿನಮಾನದಲ್ಲಿ ಇಂತಹ ಕೃತಿಗಳ ರಚನೆ ಅಗತ್ಯ' ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅಭಿಪಾಯಪಟ್ಟರು.ನಗರದ ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಿದ್ದಪ್ಪ ಶಿ. ಕರಿಕಲ್ ಸ್ಮರಣಾರ್ಥ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಜಯಕುಮಾರಿ ಎಸ್. ಕರಿಕಲ್ ಅವರ `ಗಂಧ ತೀಡಿದ್ಹಂಗ' ಹಾಗೂ `ನಿರ್ವಚನ' ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

`ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳು ತಂದೆ ತಾಯಿಯರ ನೆನಪಿನಿಂದ ದೂರ ಸರಿಯುತ್ತಿರುವಾಗ ವಿಜಯಕುಮಾರಿ ಅವರು ಈ ಕೃತಿಯ ಮೂಲಕ ಕೌಟುಂಬಿಕ ಜೀವನದ ಮಹತ್ವವನ್ನು ಸಾರಿದ್ದಾರೆ ಎಂದರು.ಕನ್ನಡ ಸಾಹಿತ್ಯವನ್ನು ಪ್ರಾಚೀನ, ಮಧ್ಯಕಾಲೀನ, ಆಧುನಿಕ ಎಂದು ಬಿಡಿ ಬಿಡಿಯಾದ ದೃಷ್ಟಿಕೋನದಿಂದ ನೋಡುವ ಬದಲು ಇಡಿಯಾದ ಹೊಸ ದೃಷ್ಟಿಕೋನದಿಂದ ನೋಡುವ ಮೂಲಕ ವಿಜಯಕುಮಾರಿ ಅವರ `ನಿರ್ವಚನ' ಕೃತಿ ಮುಖ್ಯವೆನಿಸಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಈ.ಟಿ. ಪುಟ್ಟಯ್ಯ,  `ವಿಜಯಕುಮಾರಿ ಅವರು ಮೈಸೂರು ವಿ.ವಿ. ಪ್ರಾಧ್ಯಾಪಕರಾಗಿದ್ದರೂ ತಮ್ಮ ಕೃತಿಯನ್ನು ಅಲ್ಲಿ ಬಿಡುಗಡೆಗೊಳಿಸದೆ ಗುಲ್ಬರ್ಗದಲ್ಲಿಯೇ ಲೋಕಾರ್ಪಣೆಗೊಳಿಸಿದ್ದು ಅವರಿಗೆ ಗುಲ್ಬರ್ಗದ ಬಗ್ಗೆ ಇರುವ ಪ್ರೀತಿಯನ್ನು ತೋರಿಸುತ್ತದೆ' ಎಂದರು.`ಯಾವುದೇ ಕೃತಿಯಾಗಲಿ ಓದುಗನ ಚಿತ್ತ ಭಿತ್ತಿಯಲ್ಲಿ ಅಚ್ಚಳಿಯದೆ ನಿಲ್ಲುವಂತಿರಬೇಕು. ಈ ಕೃತಿಗಳು ಲೇಖಕಿಯ ಅನುಭವದ ಮೂಸೆಯಲ್ಲಿ ಹುಟ್ಟಿದ ಕೃತಿಗಳಾದ್ದರಿಂದ ಇವು ಸರ್ವ ಕಾಲಕ್ಕೂ ಓದುಗನ ಮನಗೆಲ್ಲುವವು' ಎಂದರು. ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಅ. ಮಾನಕರ ಮುಖ್ಯ ಅತಿಥಿಯಾಗಿದ್ದರು.ಗುಲ್ಬರ್ಗ ವಿ.ವಿ. ಪ್ರಾಧ್ಯಾಪಕ ಡಾ. ವಿ.ಜಿ. ಪೂಜಾರ `ಗಂಧ ತೀಡಿದ್ಹಂಗ' ಕೃತಿಯ ಕುರಿತು ಹಾಗೂ ಡಾ. ನಾಗಾಬಾಯಿ ಬುಳ್ಳಾ `ನಿರ್ವಚನ' ಕೃತಿಯ ಕುರಿತು ಮಾತನಾಡಿದರು. ಲೇಖಕಿ ವಿಜಯಕುಮಾರಿ ಎಸ್. ಕರಿಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಕುಮಾರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪ್ರಭುದೇವ ಎಸ್.ಕರಿಕಲ್ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.