`ಕುಟುಂಬ ಯೋಜನೆ- ಗೊಂದಲ ನಿವಾರಣೆ ಅಗತ್ಯ'

7

`ಕುಟುಂಬ ಯೋಜನೆ- ಗೊಂದಲ ನಿವಾರಣೆ ಅಗತ್ಯ'

Published:
Updated:

ಬೆಂಗಳೂರು: `ಕುಟುಂಬ ಯೋಜನೆ ಕಾರ್ಯಕ್ರಮಗಳ ವಿಷಯವಾಗಿ ಜನರಲ್ಲಿ ಇರುವ ಅನಗತ್ಯ ಗೊಂದಲ ಹೋಗಲಾಡಿಸಲು ಸರಿಯಾದ ಮಾಹಿತಿ ನೀಡಿದಲ್ಲಿ ಜನಸಂಖ್ಯಾ ಸ್ಥಿರತೆಯನ್ನು ಸಾಧಿಸಲು ಸಾಧ್ಯ' ಎಂದು ರಾಜ್ಯ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.ಬುಧವಾರ ಏರ್ಪಡಿಸಲಾಗಿದ್ದ ಕುಟುಂಬ ಕಲ್ಯಾಣ ಯೋಜನೆಗಳ ಕುರಿತ ಪ್ರಾಂತೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

`ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ ಉತ್ತಮವಾಗಿದೆ. ಅದರಲ್ಲೂ ಕರ್ನಾಟಕದ ಸಾಧನೆ ತೃಪ್ತಿಕರವಾಗಿದೆ' ಎಂದು ತಿಳಿಸಿದರು.`ರಾಜ್ಯದಲ್ಲಿ ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳಿಗಿಂತ ಶಾಶ್ವತ ವಿಧಾನಗಳ ಅಳವಡಿಕೆಗೆ ಜನರು ಹೆಚ್ಚು ಒಲವು ತೋರುತ್ತಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ' ಎಂದು ಇಲಾಖೆಯ ನಿರ್ದೇಶಕ ಧನ್ಯಕುಮಾರ್ ತಿಳಿಸಿದರು.ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಮದನಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉಪ ಆಯುಕ್ತ ಡಾ.ಎಸ್.ಕೆ. ಸಿಕ್ದರ್ ಕಾರ್ಯಾಗಾರದ ಹಿನ್ನೆಲೆ ಹಾಗೂ ಉದ್ದೇಶ ವಿವರಿಸಿದರು.

ಕಾರ್ಯಾಗಾರದಲ್ಲಿ ಆಂಧ್ರ ಪ್ರದೇಶ, ಗೋವಾ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪಾಂಡಿಚೇರಿ ಹಾಗೂ ಲಕ್ಷದ್ವೀಪದ ಆರೋಗ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳದ ಬಿಬಿಎಂಪಿ- ಲಿಂಬಾವಳಿ ಅಸಮಾಧಾನ

ಬೆಂಗಳೂರು: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಳೆದ ಆರು ತಿಂಗಳಿಂದ ಕಸ ಹಾಕಲು ಜಾಗ ಹುಡುಕುವುದು ಮತ್ತು ಕೋರ್ಟ್‌ಗೆ ಮಾಹಿತಿ ನೀಡುವುದು ಇವೇ ಕೆಲಸಗಳಲ್ಲಿ ಕಾಲಹರಣ ಮಾಡಿದೆಯೇ ಹೊರತು ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಅಸಮಾಧಾನ ವ್ಯಕ್ತಪಡಿಸಿದರು.ಬುಧವಾರ ಏರ್ಪಡಿಸಲಾಗಿದ್ದ ಕುಟುಂಬ ಕಲ್ಯಾಣ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅವರು, ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.`ಮಂಡೂರಿನಲ್ಲಿ ಕಸ ತಂದು ಸುರಿಯಲು ನಮ್ಮ ವಿರೋಧವಿದೆ. ಅಲ್ಲಿಗೆ ಕಸ ಬರುವುದು ಇಂದಲ್ಲ, ನಾಳೆಯಾದರೂ ನಿಲ್ಲಲೇ ಬೇಕು. ಬಿಬಿಎಂಪಿ ಮಂಡೂರನ್ನು ಕಸದ ತೊಟ್ಟಿ ಮಾಡಿಕೊಂಡಿದೆಯೇ ಹೊರತು ಅಲ್ಲಿ ತಂದು ಹಾಕಿದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿಲ್ಲ. ಹೀಗಾಗಿ ಮಂಡೂರು ಸುತ್ತಲಿನ ಜನ ಅನಾರೋಗ್ಯದಿಂದ ಬಳಲುವಂತಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.`ಕಾಲಹರಣ ಮಾಡದೆ ತಕ್ಷಣ ನಾಲ್ಕಾರು ಕಡೆ ಕಸದ ಸಂಗ್ರಹಕ್ಕೆ ಜಾಗ ಪತ್ತೆ ಮಾಡಬೇಕು. ಅದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು. ಕೇವಲ ಕಸ ಸಂಗ್ರಹಿಸದೆ ಅದರ ವಿಲೇವಾರಿಗೂ ಕ್ರಮ ಕೈಗೊಳ್ಳಬೇಕು' ಎಂದು ಅವರು ಆಗ್ರಹಿಸಿದರು.`ಉಪ ಮುಖ್ಯಮಂತ್ರಿ ಆರ್. ಅಶೋಕ ಮತ್ತು ನನ್ನ ನಡುವೆ ಯಾವುದೇ ಶೀತಲ ಸಮರ ಇಲ್ಲ. ಆದರೆ, ಮಂಡೂರಿನಲ್ಲಿ ಕಸ ಹಾಕುವ ವಿಷಯವಾಗಿ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ' ಎಂದು ಸ್ಪಷ್ಟಪಡಿಸಿದರು.`ಜಿಲ್ಲಾ ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವರು ಮತ್ತು ಮೇಯರ್ ಒಟ್ಟಾಗಿ ಕುಳಿತು ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು' ಎಂದು ಸಲಹೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry