ಬುಧವಾರ, ನವೆಂಬರ್ 20, 2019
21 °C

ಕುಟುಂಬ ರಾಜಕಾರಣದ ಜಿದ್ದಾಜಿದ್ದಿ

Published:
Updated:

ಚಾಮರಾಜನಗರ: ಜಿಲ್ಲೆಯ ಹನೂರು ಪಟ್ಟಣಕ್ಕೆ ಈಗ ತಾಲ್ಲೂಕು ಕೇಂದ್ರದ ಸ್ಥಾನಮಾನ ಲಭಿಸಿದೆ. ಈ ಭಾಗದ ಜನರ ಹಲವು ದಶಕದ ಬೇಡಿಕೆಯೂ ಈಡೇರಿದೆ. ಇದರ ಬೆನ್ನಲ್ಲೇ ತಾಲ್ಲೂಕು ಕೇಂದ್ರದ ಘೋಷಣೆಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ತಂತ್ರಗಾರಿಕೆ ಹೆಣೆಯುತ್ತಿವೆ.ಈ ಹಿಂದೆ ಹನೂರು ವಿಧಾನಸಭಾ ಕ್ಷೇತ್ರ ಕೊಳ್ಳೇಗಾಲ ತಾಲ್ಲೂಕಿಗೆ ಸೇರಿತ್ತು. ಜಿಲ್ಲೆಯಲ್ಲಿಯೇ ಕುಟುಂಬ ರಾಜಕಾರಣಕ್ಕೆ ಪ್ರಸಿದ್ಧಿ ಪಡೆದಿರುವ ಏಕೈಕ ವಿಧಾನಸಭಾ ಕ್ಷೇತ್ರವೂ ಹೌದು. ಎರಡು ಕುಟುಂಬಗಳೇ ಚುನಾವಣೆಗಳಲ್ಲಿ ಹಿಡಿತ ಸಾಧಿಸುತ್ತಿರುವುದು ಈ ಕ್ಷೇತ್ರದ ವೈಶಿಷ್ಟ್ಯ. ಗಂಡ-ಹೆಂಡತಿ, ಅಪ್ಪ-ಮಗ, ಅಣ್ಣ-ತಮ್ಮನ ನಡುವೆ ಕ್ಷೇತ್ರದ ಅಧಿಕಾರ ಹಂಚಿಕೆಯಾಗಿದೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ.1956ಕ್ಕೂ ಮೊದಲು ಕೊಳ್ಳೇಗಾಲ ತಾಲ್ಲೂಕು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಗೆ ಸೇರಿತ್ತು. ಹೀಗಾಗಿ, 1952ರ ಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಹಾಗೂ ಹನೂರು ಕ್ಷೇತ್ರ ಇರಲಿಲ್ಲ. ರಾಜ್ಯಗಳ ಪುನರ್ ವಿಂಗಡಣೆ ನಂತರ ಕೊಳ್ಳೇಗಾಲ ಆಗಿನ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿತು.1957ರ ಚುನಾವಣೆ ವೇಳೆಗೆ ಹನೂರು ಭಾಗದಲ್ಲಿ `ಪಾಳ್ಯ' ಹೆಸರಿನಡಿ ವಿಧಾನಸಭಾ ಕ್ಷೇತ್ರ ರಚಿಸಲಾಯಿತು. 1967ರ ಚುನಾವಣೆಯಲ್ಲಿ `ಪಾಳ್ಯ' ಹೆಸರು ಬದಲಾಯಿಸಿ ಹನೂರು ವಿಧಾನಸಭಾ ಕ್ಷೇತ್ರವೆಂದು ನಾಮಕರಣ ಮಾಡಲಾಯಿತು.ಈ ಕ್ಷೇತ್ರವು ಒಟ್ಟು 12 ಚುನಾವಣೆ ಕಂಡಿದೆ. ಇದರಲ್ಲಿ ಮಾಜಿ ಸಚಿವ ದಿ.ಜಿ. ರಾಜೂಗೌಡ ಕುಟುಂಬವೇ 7 ಬಾರಿ ಹಿಡಿತ ಸಾಧಿಸಿದೆ. 3 ಬಾರಿ ಮಾಜಿ ಸಚಿವ ದಿ.ಎಚ್. ನಾಗಪ್ಪ ಕುಟುಂಬ ಗೆಲುವು ಕಂಡಿದೆ. 1972ರಲ್ಲಿ ಆರ್. ರಾಚೇಗೌಡ ಹಾಗೂ 1983ರಲ್ಲಿ ಕೆ.ಪಿ. ಶಾಂತಮೂರ್ತಿ ಅವರನ್ನು ಹೊರತುಪಡಿಸಿದರೆ ಉಳಿದ ಎಲ್ಲ ಚುನಾವಣೆಯಲ್ಲೂ ಈ ಎರಡು ಕುಟುಂಬದ ಸದಸ್ಯರೇ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.1957 ಮತ್ತು 1962ರಲ್ಲಿ ಜಿ. ವೆಂಕಟೇಗೌಡ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. 1967ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದ ಎಚ್. ನಾಗಪ್ಪ ಮೊದಲ ಬಾರಿಗೆ ಜಯಭೇರಿ ಬಾರಿಸಿ ಶಾಸನಸಭೆ ಪ್ರವೇಶಿಸಿದರು. 1978ರ ಚುನಾವಣೆಯಲ್ಲಿ ಜಿ. ವೆಂಕಟೇಗೌಡ ಅವರ ಸಹೋದರ ಜಿ. ರಾಜೂಗೌಡ ಕಾಂಗ್ರೆಸ್-ಇಂದಿರಾ ಪಕ್ಷದಿಂದ ಅಖಾಡಕ್ಕೆ ಇಳಿದು ಗೆಲುವಿನ ನಗೆ ಬೀರಿದರು. ನಂತರ 1985, 1989 ಹಾಗೂ 1999ರ ಚುನಾವಣೆಯಲ್ಲೂ ರಾಜೂಗೌಡ ಗೆಲುವಿನ ಓಟ ಮುಂದುವರಿಸಿದರು. 1994ರ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಎಚ್. ನಾಗಪ್ಪ ಜಯಗಳಿಸಿದರು.ಈ ಇಬ್ಬರು ನಾಯಕರ ನಿಧನದ ನಂತರ ಅವರ ಕುಟುಂಬದ ಸದಸ್ಯರ ನಡುವೆ ರಾಜಕೀಯ ಜಿದ್ದಾಜಿದ್ದಿ ಮುಂದುವರಿಯಿತು. 2004ರ ಚುನಾವಣೆಯಲ್ಲಿ ಎಚ್. ನಾಗಪ್ಪ ಅವರ ಪತ್ನಿ ಪರಿಮಳಾ ನಾಗಪ್ಪ(ಜೆಡಿಎಸ್) ಜಯಗಳಿಸಿ ಶಾಸನಸಭೆ ಪ್ರವೇಶಿಸಿದರು. ಪ್ರತಿಸ್ಪರ್ಧಿಯಾಗಿದ್ದ ರಾಜೂಗೌಡ ಅವರ ಪುತ್ರ ಆರ್. ನರೇಂದ್ರ ಸೋಲುಂಡರು.

2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದ ಆರ್. ನರೇಂದ್ರ ಜಯಗಳಿಸಿದರು. ಅವರ ವಿರುದ್ಧ ಬಹುಜನ ಸಮಾಜ ಪಕ್ಷದಿಂದ ಸ್ಪರ್ಧಿಸಿದ್ದ ಪರಿಮಳಾ ನಾಗಪ್ಪ ಸೋಲು ಅನುಭವಿಸಿದರು. ಈ ಇಬ್ಬರೂ ಈಗ ಅದೃಷ್ಟ ಪರೀಕ್ಷೆಗೆ ಮತ್ತೆ ಸಜ್ಜಾಗಿದ್ದಾರೆ.

ಪ್ರತಿಕ್ರಿಯಿಸಿ (+)