ಮಂಗಳವಾರ, ಜೂನ್ 22, 2021
27 °C

ಕುಟುಂಬ ‘ಕುಡಿ’ಗಳದೇ ದರ್ಬಾರ್!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಹೊಸತೇನೂ ಅಲ್ಲ. ಈಗಂತೂ ಅದು ಮಾಮೂಲು. ಯಶಸ್ವಿ ರಾಜಕಾರಣಿಗಳ ಮಕ್ಕಳು ಅದು ತಮ್ಮ ಹಕ್ಕು ಎಂದೇ ಭಾವಿಸಿದಂತಿದೆ. ಅಪ್ಪನಿಗೂ ತನ್ನ ಮಕ್ಕಳು ರಾಜಕೀಯ ಮಾಡಬೇಕು ಎಂಬ ಬಯಕೆ. ಅವರಿಗೆ ಸೂಕ್ತ ಅಡಿಪಾಯ ಹಾಕಿಕೊಡುವ ತವಕ. ಮಕ್ಕಳಿಗೂ ಅಪ್ಪನ ಜನಪ್ರಿಯತೆ ಬಳಸಿಕೊಂಡು ರಾಜಕೀಯದಲ್ಲಿ ಮೇಲೇರುವ ಆತುರ.

2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡದಿಂದ ತಮ್ಮ ಪುತ್ರನಿಗೆ ಟಿಕೆಟ್‌ ಕೊಡಿಸುವಲ್ಲಿ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಕೊನೆಗೂ ಯಶಸ್ವಿಯಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಅವರು ಯತ್ನ ನಡೆಸಿದ್ದರು.ಆದರೆ ಈ ಬಾರಿ ತಮ್ಮ ಕುಡಿಗಳಿಗೆ ಟಿಕೆಟ್‌ ಕೊಡಿಸಲು ಮಾರ್ಗರೆಟ್‌ ಆಳ್ವ (ಇವರು ಸಂಸದೆಯಾಗಿದ್ದರು, ಈಗ ರಾಜ್ಯ­ಪಾಲೆ. ಇವರ ಮಾವ ಜೋಕಿಂ ಆಳ್ವ ಕೂಡ ಸಂಸದರಾಗಿದ್ದವರು), ಗುರುಪಾದಪ್ಪ ನಾಗಮಾರಪಲ್ಲಿ ಮತ್ತು ಕಾನೂನು ಸಚಿವ ಟಿ.ಬಿ.­ ಜಯಚಂದ್ರ ಅವರು ವಿಫಲರಾಗಿದ್ದಾರೆ. ಶಿವಮೊಗ್ಗದಲ್ಲಿ ಕಳೆದ ಬಾರಿ ಪಟ್ಟು ಹಿಡಿದು ತಮ್ಮ ಪುತ್ರನಿಗೆ ಟಿಕೆಟ್‌ ಕೊಡಿಸಿದ್ದ ಬಿ.ಎಸ್‌.­ಯಡಿಯೂರಪ್ಪ ಈ ಬಾರಿ ತಾವೇ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಯಡಿಯೂರಪ್ಪ ಅವರ ಬೀಗರಾದ ಎಸ್‌.ಐ. ಚಿಕ್ಕನಗೌಡ ಅವರೂ ಶಾಸಕರಾಗಿದ್ದರು.ಕರ್ನಾಟಕದ ಮಟ್ಟಿಗೆ ಕುಟುಂಬ ರಾಜಕಾರಣದಲ್ಲಿ ಮೂರು ವಿಧ­ವಿದೆ. ಯಶಸ್ವಿ ರಾಜಕಾರಣಿಯೊಬ್ಬ ತಾನು ಸಕ್ರಿಯ ರಾಜಕಾರ­ಣ­ದಲ್ಲಿ ಇರುವಾಗಲೇ ತನ್ನ ಮಕ್ಕಳಿಗೆ  ಅವಕಾಶವನ್ನು ಕಲ್ಪಿಸುವುದು ಒಂದು ಬಗೆಯಾದರೆ, ಯಶಸ್ವಿ ರಾಜಕಾರಣಿ ಮರಣ ಹೊಂದಿದ ನಂತರ ಅನುಕಂಪದ ಮತವನ್ನು ಪಡೆಯಲು ಆತನ ಪತ್ನಿ ಅಥವಾ ಮಕ್ಕಳಿಗೆ ಟಿಕೆಟ್‌ ನೀಡುವುದು ಇನ್ನೊಂದು ಬಗೆ. ಮತ್ತೊಂದು ಬಗೆಯೂ ಇದೆ. ಅದೆಂದರೆ ಯಶಸ್ವಿ ರಾಜಕಾರಣಿ ಮರಣ ಹೊಂದಿದ ಎಷ್ಟೋ ಕಾಲದ ನಂತರ ಅವರ ಪುತ್ರ– ಪುತ್ರಿಯರು ರಾಜಕೀಯಕ್ಕೆ ಬಂದಿರುವುದು.ಈ ಮೂರೂ ವಿಧಕ್ಕೂ ರಾಜ್ಯದಲ್ಲಿ ಸಾಕಷ್ಟು ಉದಾಹರಣೆ­ಗಳಿವೆ. ತಾವು ಬದುಕಿರುವವರೆಗೂ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಬರಲು ಬಿಡದ ರಾಜಕಾರಣಿ­ಗಳೂ ಇದ್ದಾರೆ. ದೇವರಾಜ ಅರಸು ಅವರಿಗಿಂತ ಮೊದಲು ಯಾವುದೇ ರಾಜಕಾರಣಿ ತಮ್ಮ ಮಕ್ಕಳು ಅಥವಾ ಸಂಬಂಧಿಗಳು ರಾಜಕಾರಣದಲ್ಲಿ ತಲೆ ಹಾಕಲು ಬಿಡುತ್ತಿರ­ಲಿಲ್ಲ. ಅರಸು ಬದುಕಿದ್ದಾಗ ಅವರ ಸಂಬಂಧಿಗಳು ಚುನಾವಣಾ ರಾಜ­ಕೀಯಕ್ಕೆ ಬರಲಿಲ್ಲ (ಆದರೆ ಅರಸು ಅವರ ಅಳಿಯ ಡಾ. ಎಂ.ಡಿ. ನಟರಾಜ್‌ ರಾಜಕೀಯದಲ್ಲಿ ಸಕ್ರಿಯರಾಗಿದ್ದರೂ ಯಾವುದೇ ಚುನಾವಣೆಗೆ ಸ್ಪರ್ಧಿಸಿರಲಿಲ್ಲ). ಅರಸು ನಿಧನದ ನಂತರ ಅವರ ಪುತ್ರಿ ಚಂದ್ರಪ್ರಭಾ ಅರಸು ಸಕ್ರಿಯ ರಾಜಕಾರಣಕ್ಕೆ ಬಂದರು.ರಾಮಕೃಷ್ಣ ಹೆಗಡೆ, ಜೆ.ಎಚ್‌. ಪಟೇಲ್‌ ಮುಂತಾದವರು ತಮ್ಮ ಜೀವಿತದ ಅವಧಿಯಲ್ಲಿ ಮಕ್ಕಳನ್ನು ರಾಜಕಾರಣಕ್ಕೆ ತರಲಿಲ್ಲ. ನಂತರ ಹೆಗಡೆ ಅವರ ಪುತ್ರಿ ಮಮತಾ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡರೂ ಯಶಸ್ವಿಯಾಗಲಿಲ್ಲ. ರಾಮಕೃಷ್ಣ ಹೆಗಡೆ ಅವರ ಅಣ್ಣ ಗಣೇಶ ಹೆಗಡೆ ಮೊಮ್ಮಗ ಶಶಿಭೂಷಣ ಹೆಗಡೆ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದರೂ ಯಶಸ್ವಿಯಾಗಲಿಲ್ಲ. ಜೆ.ಎಚ್‌.­ಪಟೇಲರ ಪುತ್ರ ಮಹಿಮ ಪಟೇಲ್‌ ಅಪ್ಪನ ನಿಧನದ ನಂತರ ಸಕ್ರಿಯ ರಾಜಕಾರಣದಲ್ಲಿದ್ದಾರೆ.ಎಸ್‌.ಆರ್‌.­ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಈಗ ಅವರು ಶಾಸಕರಾಗಿದ್ದಾರೆ. ಗುಂಡೂ­ರಾವ್‌ ಅವರ ನಿಧನದ ನಂತರ ಅವರ ಪುತ್ರ ದಿನೇಶ್‌ ಗುಂಡೂರಾವ್‌ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡು ಯಶಸ್ವಿಯಾಗಿದ್ದಾರೆ. ಈಗ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು. ಆದರೆ ಇನ್ನೊಬ್ಬ ಮಗ ರಾಜೇಶ್‌ ರಾಜಕಾರಣ­ದಲ್ಲಿ ಯಶಸ್ಸು ಕಾಣಲಿಲ್ಲ. ಅದೇ ರೀತಿ ಸಿ.ಬೈರೇಗೌಡ ಅವರ ಪುತ್ರ ಕೃಷ್ಣ ಬೈರೇಗೌಡ ಕೂಡ ಈಗ ಸಚಿವರಾಗಿದ್ದಾರೆ. ಜನತಾ ಪರಿವಾರದ ಹಿರಿಯ ರಾಜಕಾರಣಿಯಾಗಿದ್ದ ಎಂ.ಪಿ.ಪ್ರಕಾಶ್‌ ಅವರ ಪುತ್ರ ಎಂ.ಪಿ.ರವೀಂದ್ರ ಈಗ ಶಾಸಕ.ಕುಟುಂಬ ರಾಜಕಾರಣದ ವಿಷಯ ಬಂದಾಗಲೆಲ್ಲಾ ಅತ್ಯಂತ ಟೀಕೆಗೆ ಒಳಗಾಗುವ ಕುಟುಂಬ ಎಂದರೆ ಎಚ್‌.ಡಿ.­­ದೇವೇಗೌಡರದು. ಅವರು ಮುಖ್ಯ­ಮಂತ್ರಿ ಮತ್ತು ಪ್ರಧಾನಿ ಹುದ್ದೆಗೂ ಏರಿದ್ದರು. ಅವರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಮುಖ್ಯ­­ಮಂತ್ರಿಯಾಗಿದ್ದರು. ಇನ್ನೊಬ್ಬ ಪುತ್ರ ಎಚ್‌.ಡಿ.ರೇವಣ್ಣ ಬಹಳ ಹಿಂದೆಯೇ ರಾಜಕಾರಣಕ್ಕೆ ಬಂದಿದ್ದು ಸಚಿವರೂ ಆಗಿದ್ದರು. ಸೊಸೆ ಅನಿತಾ ಕುಮಾರಸ್ವಾಮಿ ಶಾಸಕಿ­ಯಾಗಿದ್ದರು. ಜಾತ್ಯತೀತ ಜನತಾ ದಳವನ್ನು ‘ಅಪ್ಪ–ಮಕ್ಕಳ’ ಪಕ್ಷ ಎಂದು ಟೀಕಿಸುವಷ್ಟು ಅದು ಖ್ಯಾತಿ ಪಡೆದಿದೆ.ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಹಿರಿಯ ರಾಜ­ಕಾ­ರ­ಣಿ. ಅವರ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ ಬಹಳ ಹಿಂದೆಯೇ ಸಚಿವರಾಗಿದ್ದರು. ಈಗಲೂ ಅವರು ಶಾಸಕರು. ಅಲ್ಲದೆ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ­ದ್ದಾರೆ. ದೊಡ್ಡಮಗ ಬಕ್ಕೇಶ್‌ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾ­ಗಿ­ದ್ದರು. ಜಿ. ಮಲ್ಲಿಕಾರ್ಜುನಪ್ಪ ಅವರು ಎರಡು ಬಾರಿ ದಾವಣಗೆರೆ­ಯಿಂದ ಲೋಕಸಭಾ ಸದಸ್ಯರಾಗಿದ್ದರು. ಅವರ ಪುತ್ರ ಜಿ.ಎಂ.­ಸಿದ್ದೇಶ್ವರ ಈಗ ಲೋಕಸಭಾ ಸದಸ್ಯ. ಈಗಲೂ ಅವರೇ ಬಿಜೆಪಿ ಅಭ್ಯರ್ಥಿ. ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಚಂದ್ರಶೇಖರ ಪಾಟೀಲ ರೇವೂರ  ನಿಧನರಾದ ನಂತರ ಅವರ ಪತ್ನಿ ಅರುಣಾ ಪಾಟೀಲ್‌ ಉಪ ಚುನಾವಣೆಯಲ್ಲಿ ಗೆದ್ದರು. ಈಗ ಅವರ ಮಗ ದತ್ತಾತ್ರೇಯ ಪಾಟೀಲ್‌ ಶಾಸಕರಾಗಿದ್ದಾರೆ.ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ನಾಗಪ್ಪ ಸಚಿ­ವರೂ ಆಗಿದ್ದರು. ಅವರ ನಿಧನದ ನಂತರ  ಪತ್ನಿ ಪರಿಮಳಾ ನಾಗಪ್ಪ ಶಾಸಕಿಯಾದರು. ಇದೇ ಕ್ಷೇತ್ರದಲ್ಲಿ ರಾಜೂ ಗೌಡ  ಶಾಸಕರಾ­ಗಿ­ದ್ದರು.  ಸಚಿವರಾಗಿದ್ದರು. ಈಗ ಅವರ ಪುತ್ರ ಆರ್‌.ನರೇಂದ್ರ ಶಾಸಕ­ರಾಗಿದ್ದಾರೆ. ಸಂತೇಮರಹಳ್ಳಿ ಕ್ಷೇತ್ರ ಪ್ರತಿನಿಧಿಸಿ  ಮಂತ್ರಿ, ರಾಜ್ಯಪಾಲರಾಗಿದ್ದ ಬಿ.ರಾಚಯ್ಯ ನಿಧನಾ ನಂತರ ಅವರ ಪುತ್ರ ಎ.ಆರ್‌.ಕೃಷ್ಣಮೂರ್ತಿ ಶಾಸಕರಾದರು. ಈಗ ಅವರೇ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಮೈಸೂರಿನಲ್ಲಿ ಕಾಂಗ್ರೆಸ್‌ನ ಹಿರಿಯ ರಾಜಕಾರಣಿಯಾಗಿದ್ದ ಅಜೀಜ್‌ ಸೇಠ್‌ ಅವರ ಪುತ್ರ ತನ್ವೀರ್‌ ಸೇಠ್‌  ಸಚಿವರಾಗಿದ್ದರು. ಈಗಲೂ ಅವರು ಮೈಸೂರು ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್‌ ಶಾಸಕ.ಮಂಡ್ಯ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣದ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್‌ ಪಕ್ಷದ ಹಿರಿಯ ರಾಜಕಾರಣಿ ಜಿ.­ಮಾದೇಗೌಡ ಅವರ ಪುತ್ರ ಮಧು ಮಾದೇಗೌಡ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಎಸ್‌.ಎಂ.ಕೃಷ್ಣ ಅವರ ಸಹೋದರ ಎಸ್‌.ಎಂ.­ಶಂಕರ್‌ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಅವರ ಸಹೋದರನ ಮಗ ಗುರುಚರಣ್‌ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದರು.ನಿತ್ಯಸಚಿವ ಎಂಬ ಬಿರುದು ಪಡೆದುಕೊಂಡಿದ್ದ ಶಂಕರೇಗೌಡ ಅವರ ಪುತ್ರ ಕೆ.ಎಸ್‌.­ಸಚ್ಚಿದಾನಂದ ಮೇಲ್ಮನೆ ಸದಸ್ಯರಾಗಿದ್ದರು. ಲೋಕಸಭಾ ಸದಸ್ಯರಾಗಿದ್ದ ಶಿವನಂಜಪ್ಪ ಅವರ ಪುತ್ರ ಎಂ.ಎಸ್‌.­ಆತ್ಮಾನಂದ ಅವರು ರಾಜ್ಯದಲ್ಲಿ ಸಚಿವರಾಗಿದ್ದರು. ಶಿವನಂಜಪ್ಪ ಅವರ ಪತ್ನಿ ಲೀಲಮ್ಮ ಮೇಲ್ಮನೆ ಸದಸ್ಯರಾಗಿದ್ದರು. ಸಚಿವರಾಗಿದ್ದ ಕೆ.ಎನ್‌.ನಾಗೇಗೌಡ ಅವರ ನಿಧನದ ನಂತರ ಅವರ ಪತ್ನಿ ನಾಗಮಣಿ ನಾಗೇಗೌಡ ಶಾಸಕಿಯಾಗಿದ್ದರು. ಮದ್ದೂರಿ­ನಲ್ಲಿ ಶಾಸಕರಾಗಿದ್ದ ಸಿದ್ದರಾಜು ಅವರ ನಿಧನದ ನಂತರ ಅವರ ಪತ್ನಿ ಕಲ್ಪನಾ ಸಿದ್ದರಾಜು ಶಾಸಕಿಯಾಗಿದ್ದರು.ಶ್ರೀರಂಗಪಟ್ಟಣದಲ್ಲಿ ಎರಡು ಕುಟುಂಬಗಳ ನಡುವೆ ರಾಜಕೀಯ ಯುದ್ಧ ನಡೆಯುತ್ತಲೇ ಇರುತ್ತದೆ. ಏಳು ಬಾರಿ ಚುನಾವಣೆಗೆ ಸ್ಪರ್ಧಿಸಿ ಒಮ್ಮೆಯೂ ಗೆಲ್ಲಲು ಸಾಧ್ಯವಾಗದೇ ಇರುವ ಶ್ರೀಕಂಠಯ್ಯ ಅವರ ಪತ್ನಿ ಒಮ್ಮೆ ಜಯ ಗಳಿಸಿದ್ದರು. ಅವರ ಪುತ್ರ ರವೀಂದ್ರ ಶ್ರೀಕಂಠಯ್ಯ ಅವರೂ ಶಾಸಕರಾಗಿದ್ದರು. ಈ ಕುಟುಂಬದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿರುವ ಎ.ಬಿ.ಬಂಡೀಸಿದ್ದೇಗೌಡ ಅವರ ಕುಟುಂಬ ಕೂಡ ಕೆಲವು ಬಾರಿ ಯಶಸ್ವಿಯಾಗಿದೆ. ಬಂಡೀ­ಸಿದ್ದೇಗೌಡ ನಿಧನದ ನಂತರ ಅವರ ಪತ್ನಿ ವಿಜಯಲಕ್ಷ್ಮಿ  ಶಾಸಕಿ­ಯಾ­ಗಿದ್ದರು. ಈಗ ಅವರ ಪುತ್ರ ರಮೇಶ ಬಾಬು ಶಾಸಕರಾಗಿದ್ದಾರೆ.ಕಳೆದ 10 ವರ್ಷಗಳಲ್ಲಿ ಬಳ್ಳಾರಿಯಲ್ಲಿ ಕುಟುಂಬ ರಾಜಕಾರಣ ಸಾಕಷ್ಟು ನಡೆದಿದೆ. ಜಿ.ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಅವರು ಶಾಸಕ­ರಾಗಿದ್ದರು. ಇಬ್ಬರು ಸಹೋದ­ರರು ಸಚಿವರೂ ಆಗಿದ್ದರು. ಇವರ ಆಪ್ತ ಬಿ.­ಶ್ರೀರಾಮುಲು ಸಚಿವ­ರಾಗಿದ್ದರು. ಶ್ರೀರಾಮುಲು ಸಹೋದರಿ ಜೆ.ಶಾಂತಾ ಲೋಕಸಭಾ ಸದಸ್ಯರಾಗಿದ್ದರು. ಈಗ ಅವರು ಸಹೋದರನಿಗೆ ಅವಕಾಶ ಮಾಡಿ­ಕೊಟ್ಟಿ­ದ್ದಾರೆ. ಬಳ್ಳಾರಿಯಿಂದ ಈಗ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ. ಶ್ರೀರಾಮುಲು ಸಂಬಂಧಿಗಳಾದ ಸುರೇಶ್‌ ಬಾಬು ಶಾಸಕ­ರಾಗಿದ್ದಾರೆ, ಸಣ್ಣ ಫಕೀರಪ್ಪ ಲೋಕಸಭಾ ಸದಸ್ಯ. ಇದೇ ರೀತಿ ಗೋಕಾಕ್‌ ಸಹೋದರರೂ ಸಕ್ರಿಯ ರಾಜಕಾರಣ­ದಲ್ಲಿದ್ದಾರೆ. ಸತೀಶ್‌ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ ಈ ಮೂವರೂ ಶಾಸಕರಾಗಿದ್ದಾರೆ. ಸತೀಶ್‌ ಈಗ ಸಚಿವರು.  ಉಮೇಶ ಕತ್ತಿ, ರಮೇಶ ಕತ್ತಿ ಎಂಬ ಸಹೋ­­­ದ­­ರರೂ ರಾಜಕೀಯದಲ್ಲಿದ್ದಾರೆ. ಒಬ್ಬರು ಶಾಸಕರಾದರೆ ಇನ್ನೊಬ್ಬರು ಲೋಕಸಭಾ ಸದಸ್ಯರು. ಇವರ ತಂದೆ ವಿಶ್ವನಾಥ ಕತ್ತಿ ಶಾಸಕರಾಗಿದ್ದರು.

ಹಾವೇರಿಯಲ್ಲಿ ಸಿ.ಎಂ.ಉದಾಸಿ ಶಾಸಕರಾಗಿ ಗೆದ್ದು ಸಚಿವರಾದ­ವರು. ಅವರ ಪುತ್ರ ಶಿವಕುಮಾರ ಲೋಕಸಭೆ ಸದಸ್ಯರಾಗಿದ್ದಾರೆ. ಈಗ ಮತ್ತೊಮ್ಮೆ ಸ್ಪರ್ಧಿಸಿದ್ದಾರೆ. ರಾಜ್ಯದಲ್ಲಿ ಈಗ ಜಲಸಂಪ­ನ್ಮೂಲ ಸಚಿವ­ರಾ­ಗಿ­ರುವ ಎಂ.ಬಿ.ಪಾಟೀಲ ಅವರು ವಿಜಾಪುರದ ಪ್ರಮುಖ ರಾಜಕಾರಣಿ ಬಿ.ಎಂ.­ಪಾಟೀಲರ ಪುತ್ರ.ಗದಗ ಮತ್ತು ಹುಬ್ಬಳ್ಳಿ­ಯ ಪ್ರಮುಖ ರಾಜಕಾರಣಿ ಕೆ.ಎಚ್‌.­ ಪಾಟೀಲ ಅವರ ಪುತ್ರ ಎಚ್‌.ಕೆ. ಪಾಟೀಲ ಈಗ ಗ್ರಾಮೀಣಾಭಿ­ವೃದ್ಧಿ ಸಚಿವ. ಅವರ ಸೋದರ ಸಂಬಂಧಿ ಡಿ.ಆರ್‌.­ಪಾಟೀಲ ಕೂಡ ಸಕ್ರಿಯ ರಾಜಕಾರಣಿ. ಹುಬ್ಬಳ್ಳಿಯ ಡಿ.ಕೆ.ನಾಯ್ಕರ್‌ ಅವರ ಪುತ್ರ ಲೋಹಿತ್‌ ಕೂಡ ರಾಜಕೀಯದಲ್ಲಿದ್ದಾರೆ.ರಾಜ್ಯಸಭಾ ಸದಸ್ಯ, ಬೆಳಗಾವಿಯ ಪ್ರಭಾಕರ ಕೋರೆ ಮತ್ತು ಅವರ ಪುತ್ರ ಅಮಿತ್‌ ಕೋರೆ ಸಕ್ರಿಯ ರಾಜಕಾರಣದಲ್ಲಿ ತೊಡಗಿ­ದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಎಸ್.ಬಂಗಾರಪ್ಪ ಅವರ ನಂತರ ಪುತ್ರ ಕುಮಾರ್‌ ಬಂಗಾರಪ್ಪ ಶಾಸಕ,  ಸಚಿವರೂ ಆದರು. ಈಗ ಮತ್ತೊಬ್ಬ ಪುತ್ರ ಮಧು ಬಂಗಾರಪ್ಪ ಶಾಸಕರಾಗಿ­ದ್ದಾರೆ. ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಈಗ ಲೋಕಸಭೆಗೆ ಸ್ಪರ್ಧಿಸಿದ್ದಾರೆ.ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಕೂಡ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಬಯಸಿ­ದ್ದರು. ಆದರೆ ಅವರ ಯತ್ನ ಸಫಲವಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್‌ ರಾಜಕೀ­ಯ­ದಲ್ಲಿ ಸಕ್ರಿಯವಾಗಿ­ದ್ದಾರೆ. ಇನ್ನೂ ಚುನಾವಣಾ ಕಣಕ್ಕೆ ಇಳಿದಿಲ್ಲ. ಆದರೆ ಕಣಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ.ಚಿಂತಾಮಣಿ ಕ್ಷೇತ್ರವನ್ನು  ಆಂಜನೇಯ ರೆಡ್ಡಿ, ಅವರ ಪುತ್ರ ಚೌಡ-­­ರೆಡ್ಡಿ, ಮೊಮ್ಮಗ ಎಂ.ಸಿ.ಸುಧಾಕರ್‌ ಪ್ರತಿನಿಧಿಸಿದ್ದಾರೆ. ಚಿಕ್ಕೋಡಿಯಲ್ಲಿ ದಾಖಲೆ ಸ್ಥಾಪಿಸಿದ ಬಿ.­ ಶಂಕರಾ­ನಂದ ಅವರ ಪುತ್ರ ಓಂ­ಪ್ರಕಾಶ್ ಸಚಿವರೂ ಆಗಿದ್ದರು. ಕೇಂದ್ರ ಸಚಿವರಾಗಿದ್ದ ಸಿ.ಕೆ.­ಜಾಫರ್‌ ಷರೀಫ್‌ ಅವರ ಅಳಿಯ ಮಹ್ಮದ್ ಯಾಸಿನ್‌ ಶಾಸಕ­ರಾಗಿದ್ದರೆ, ಮೊಮ್ಮಗ ಸಕ್ರಿಯ ರಾಜಕಾರಣದಲ್ಲಿದ್ದಾರೆ.ಭೀಮಣ್ಣ ಖಂಡ್ರೆ ಮತ್ತು ಅವರ ಇಬ್ಬರು ಮಕ್ಕಳು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಹಾಗೂ ಲೋಕ­ಸಭಾ ಸದಸ್ಯ ಧರ್ಮ­ಸಿಂಗ್ ಅವರ ಪುತ್ರ ಡಾ.ಅಜಯ್‌ಸಿಂಗ್ ಹಾಲಿ ಶಾಸಕರು. ಬೆಂಗಳೂರಲ್ಲಿ ಕೃಷ್ಣಪ್ಪ ಮತ್ತು ಅವರ ಪುತ್ರ ಪ್ರಿಯಕೃಷ್ಣ ಇಬ್ಬರೂ ಶಾಸಕರು. ಜೆಡಿಎಸ್‌ ಅಧ್ಯಕ್ಷ ಎ.ಕೃಷ್ಣಪ್ಪ ಅವರ ಮಗಳು ಬಿಬಿಎಂಪಿ ಸದಸ್ಯೆ. ಶಾಸಕ ಬೈರತಿ ಬಸವರಾಜ್ ಮತ್ತು ಅವರ ಸಹೋದರ ಬೈರತಿ ಸೋಮಶೇಖರ್‌ ರಾಜಕೀಯದಲ್ಲಿದ್ದಾರೆ.ಹಿರಿಯ ರಾಜಕಾರಣಿ ಎಚ್‌.ಎಂ. ಚನ್ನಬಸಪ್ಪ ಅವರ ಪುತ್ರಿ ರಾಣಿ ಸತೀಶ್‌­ಸಚಿವ­ರಾಗಿದ್ದರು. ನಾಗಪ್ಪ ಆಳ್ವ– ಜೀವರಾಜ ಆಳ್ವ, ವೈ. ಸಂಪಂಗಿ ಮತ್ತು ಅವರ ತಾಯಿ ರಾಮಕ್ಕ, ವೀರೇಂದ್ರ ಪಾಟೀಲ, ಅವರ ಮಗ ಕೈಲಾಶನಾಥ ಪಾಟೀಲ, ಅಳಿಯ ಬಿ.ಜಿ. ಜವಳಿ ಇವರೆಲ್ಲ ರಾಜಕಾರಣ ಪ್ರವೇಶಿಸಿ ಅಧಿಕಾರ ಅನುಭವಿಸಿದವರೇ. ತುಮಕೂರು ಈಗಿನ ಶಾಸಕ ರಫೀಕ್‌ ಅಹ್ಮದ್‌ ಅವರ ಮಾವ ಶಫಿ ಅಹ್ಮದ್‌ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ. ಕುಣಿಗಲ್‌ ಶಾಸಕ ನಾಗರಾಜಯ್ಯ ಅವರ ಪುತ್ರ ಡಾ.ರವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದರು.ಕಾರವಾರ ಶಾಸಕರಾಗಿದ್ದ ದಿ. ವಸಂತ ಅಸ್ನೋಟಿಕರ ಅವರ ಪತ್ನಿ ಶುಭ­ಲತಾ ವಿಧಾನ ಪರಿಷತ್‌ ಸದಸ್ಯೆಯಾಗಿದ್ದರು. ಮಗ ಆನಂದ ಅಸ್ನೋಟಿಕರ್‌ ಮಂತ್ರಿಯಾದರು. ಕುಮಟಾ ಶಾಕರಾಗಿದ್ದ ಮೋಹನ ಶೆಟ್ಟಿ ನಿಧನದ ನಂತರ ಪತ್ನಿ ಶಾರದಾ ಶೆಟ್ಟಿ ಈಗ ಶಾಸಕಿ.

ಲೆಕ್ಕ ಹಾಕುತ್ತಾ ಹೋದರೆ ಅಯ್ಯೋ ಅದು ಮುಗಿಯುವುದೇ ಇಲ್ಲ.ಹೋಗ್ರೋ ಆಚೆಗೆ!

ಜೆ.ಎಚ್‌.ಪಟೇಲ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಊರಾದ ಕಾರಿಗನೂರಿನಿಂದ ಬಂದ ಕೆಲವು ಜನ ‘ನಿಮ್ಮ ಮಗ ತ್ರಿಶೂಲಪಾಣಿ  ಉತ್ತಮ ಸಂಘಟಕ. ಒಳ್ಳೆಯ ರಾಜ­ಕಾರ­ಣಿ­­ಯಾಗುವ ಲಕ್ಷಣಗಳು ಇವೆ. ಆತನನ್ನು ಎಂಎಲ್‌ಸಿ ಮಾಡಿ’ ಎಂದು ಬೇಡಿಕೆ ಮುಂದಿಟ್ಟರು. ಅದಕ್ಕೆ ಪಟೇಲರು ‘ಹೌದಾ, ನನ್ನ ಮಗ­ನಿಗೆ ಒಳ್ಳೆಯ ರಾಜಕಾರಣಿಯಾಗುವ ಲಕ್ಷಣ ಇದೆಯಾ? ಆತ ಮೊದಲು ಒಳ್ಳೆಯ ರಾಜಕಾರಣಿಯಾಗಲಿ. ಆಮೇಲೆ ಅವ­ನನ್ನು ಮೇಲ್ಮನೆ ಸದಸ್ಯನನ್ನಾಗಿ ಮಾಡೋಣ’ ಎಂದರಂತೆ. ಆದರೂ ಕೆಲವರು ತಮ್ಮ ವರಾತವನ್ನು ಮುಂದುವರಿಸಿದಾಗ ‘ನನ್ನ ಮಗ ಏನು ಅಂತಾ ನನಗೇ ಹೇಳ್ತಿರೇನೂ? ಹೋಗ್ರೊ ಆಚೆಗೆ’ ಎಂದು ಎಲ್ಲರನ್ನೂ ಹೊರಕ್ಕೆ ಕಳುಹಿಸಿದರಂತೆ.

ವಿಧಾನಸೌಧದಲ್ಲಿ ಕಾಲಿಡಬೇಡಿ!

‘ನಾನು ಮುಖ್ಯಮಂತ್ರಿಯಾಗಿರುವ ತನಕ ವಿಧಾನಸೌಧದಲ್ಲಿ ಕಾಲಿಡಬೇಡಿ. ವಿಧಾನಸೌಧಕ್ಕೆ ಬಂದರೆ ಜೋಕೆ. ಯಾವು­ದಾ­ದರೂ ಅಧಿಕಾರಿಯನ್ನು ಭೇಟಿ ಮಾಡುವುದು ಸಲ್ಲ. ನೀವು ಯಾವುದೇ ವ್ಯವಹಾರ ಮಾಡಿ. ಆದರೆ ಅದಕ್ಕೆ ಸರ್ಕಾರದ ನೆರವು ಪಡೆಯಬೇಡಿ’.

ಹೀಗೆಂದು ತಮ್ಮ ತಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ­ಯಾಗಿ­ದ್ದಾಗ ಕಟ್ಟಾಜ್ಞೆ ಮಾಡಿದ್ದರು ಎಂದು ಅವರ ಪುತ್ರಿ ಮಮತಾ ನಿಚಾನಿ ನೆನಪಿಸಿಕೊಳ್ಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.