ಕುಡಿತದ ಕೆಡುಕುಗಳು ಮತ್ತು ಗೋಲ್‌ಮಾಲ್!

7

ಕುಡಿತದ ಕೆಡುಕುಗಳು ಮತ್ತು ಗೋಲ್‌ಮಾಲ್!

Published:
Updated:

ನಿರ್ದೇಶಕ ಸಾಯಿ ಪ್ರಕಾಶ್ ಮುಖದಲ್ಲಿ ನಗು ಮನೆ ಮಾಡಿತ್ತು. ಇದುವರೆಗೂ ರೀಲ್‌ನಲ್ಲಿಯೇ ಸಿನಿಮಾ ಸುತ್ತಿರುವ ಅವರಿಗೆ ಡಿಜಿಟಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸುವ ವಿಧಾನ ಹೊಸತು. ಹೊಸ ತಂತ್ರಜ್ಞಾನವನ್ನು ತಿಳಿದುಕೊಳ್ಳಬೇಕೆಂಬ ಹಂಬಲದಲ್ಲಿಯೇ ಸಾಯಿಪ್ರಕಾಶ್ ಅದನ್ನು ಸಾಧಿಸಿದ್ದಾರೆ.

 

`ಸಂಸಾರದಲ್ಲಿ ಗೋಲ್‌ಮಾಲ್~ ಅವರು ಡಿಜಿಟಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿರುವ ಮೊದಲ ಸಿನಿಮಾ. ತಮ್ಮ ಹೊಸ ತಾಂತ್ರಿಕ ಅನುಭವಗಳನ್ನು ಹಂಚಿಕೊಂಡ ಅವರು- ಚಿತ್ರದಲ್ಲಿ ಹಳೆಯ ತಂಡ ಉಳಿಸಿಕೊಂಡು, ಹೊಸಬರಿಗೂ ಅವಕಾಶ ನೀಡಿರುವ ವಿವರ ನೀಡಿದರು.`ಚಿತ್ರೀಕರಣ ಫೆಬ್ರುವರಿ ತಿಂಗಳಲ್ಲಿಯೇ ಪೂರ್ಣಗೊಂಡಿತು. ಮೊದಲು ಬಂದ ಪ್ರತಿ ಇಷ್ಟವಾಗಲಿಲ್ಲ. ನಂತರ ತೃಪ್ತಿಕರವಾದ ಪ್ರಥಮ ಪ್ರತಿ ಸಿದ್ಧವಾಯಿತು. ಅದರಿಂದಲೇ ತಡವಾಯಿತು~ ಎಂದರು. ಕೋಮಲ್ ನಿರ್ಮಿಸುತ್ತಿರುವ `ನಂದೀಶ~ ಚಿತ್ರವನ್ನೂ ಡಿಜಿಟಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸುತ್ತಿರುವ ಖುಷಿ ಅವರದು.ಇಪ್ಪತ್ತೊಂದು ವರ್ಷಗಳ ತಮ್ಮ ನಿರ್ದೇಶನದ ಯಾನದಲ್ಲಿ ಜೊತೆಗಿದ್ದ ಬಹುತೇಕ ಎಲ್ಲರೂ ಈ ಚಿತ್ರದಲ್ಲಿದ್ದಾರೆ ಎಂದ ನಿರ್ದೇಶಕರು, `ಇದು ಡಾ.ದಾಸರಿ ನಾರಾಯಣ್ ಕತೆ ಆಧರಿಸಿದ ತೆಲುಗಿನ `ಆದಿವಾರಂ ಆಡವಳ್ಳಕು ಸೆಲವು~ ಚಿತ್ರದ ರೀಮೇಕ್~ ಎಂದರು.`ಚಿತ್ರದಲ್ಲಿ ಮಧ್ಯಮ ವರ್ಗವನ್ನು ಹಾಳುಗೆಡವುತ್ತಿರುವ ಕುಡಿತದ ಕೆಡುಕನ್ನು ಹೈಲೆಟ್ ಮಾಡಿರುವೆ. ಉಮಾಶ್ರೀ ಅವರಿಗೆ ಗಂಡಂದಿರ ಮನಸ್ಸನ್ನು ಬದಲಾವಣೆ ಮಾಡುವಲ್ಲಿ ಹೆಂಡತಿಯರಿಗೆ ನೆರವಾಗುವ ಪಾತ್ರ. ಸಾಯಿ ಕುಮಾರ್‌ಗೆ ವಿಶೇಷ ಪಾತ್ರ ಇದೆ. ಶಕೀಲಾ ಕೂಡ ನಟಿಸಿದ್ದಾರೆ. ಇದು 2012ಕ್ಕೂ ಸೂಕ್ತವಾಗಿ ಹೊಂದಿಕೆಯಾಗುವ ಸಿನಿಮಾ. ಕಾಮಿಡಿ- ಸೆಂಟಿಮೆಂಟ್ ಎರಡೂ ಚಿತ್ರದಲ್ಲಿ ಹದವಾಗಿ ಬೆರೆತಿದೆ~ ಎಂದು ಸಾಯಿಪ್ರಕಾಶ್ ಹೇಳಿದರು.`ಯಾರಿಗೆ ಸಾಲುತ್ತೆ ಸಂಬಳ~ ಚಿತ್ರದಲ್ಲಿ ಅವಕಾಶ ನೀಡಿದ ಸಾಯಿಪ್ರಕಾಶ್ ನಟಿಸಲು ಕರೆದಾಗ ಒಲ್ಲೆ ಎನ್ನಲಾಗಲಿಲ್ಲ ಎಂದವರು ನಟ ಮೋಹನ್. ಎರಡು ಸಿನಿಮಾ ನಿರ್ದೇಶಿಸಿದ ಅವರಿಗೆ ನಟನೆಯಿಂದ ದೂರ ಸರಿಯುತ್ತಿರುವುದಾಗಿ ಭಾಸವಾಗಿತ್ತಂತೆ. ಅದೇ ಸಮಯಕ್ಕೆ ನಟಿಸಲು ಕರೆದದ್ದು ಖುಷಿ ಎನಿಸಿದೆಯಂತೆ. ಈ ಚಿತ್ರದಲ್ಲಿ ಅವರಿಗೆ ಸೋಮಾರಿ ಗಂಡನ ಪಾತ್ರ.ಟೆನಿಸ್ ಕೃಷ್ಣ ಅವರಿಗೆ ಫಿಟ್ಟಿಂಗ್ ಮಾಸ್ಟರ್ ಪಾತ್ರವಂತೆ. ಹಾಸ್ಯನಟರನ್ನು ಒಟ್ಟಾಗಿಸಿ ಪಾತ್ರ ಕೊಟ್ಟ ನಿರ್ದೇಶಕರಿಗೆ ಅವರು ಧನ್ಯವಾದ ಸಲ್ಲಿಸಿದರು. ತಬಲಾ ನಾಣಿ ಇದೇ ಮೊದಲ ಬಾರಿಗೆ ಸಾಯಿ ಪ್ರಕಾಶ್ ಅವರೊಂದಿಗೆ ಕೆಲಸ ಮಾಡಿದ ಖುಷಿಯಲ್ಲಿದ್ದರು.

ನಿರ್ಮಾಪಕ ಪ್ರಭಾಕರ ರೆಡ್ಡಿ ದಸರಾ ಸಮಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ.ಚಿತ್ರದಲ್ಲಿ ಸಿಹಿಕಹಿ ಚಂದ್ರು, ಮೋಹನ್, ಟೆನಿಸ್ ಕೃಷ್ಣ, ತಬಲಾ ನಾಣಿ, ಸಾಧು ಕೋಕಿಲ, ಸಾಯಿಕುಮಾರ್, ಉಮಾಶ್ರೀ, ತಾರಾ, ಅನುಪ್ರಭಾಕರ್, ಶಕೀಲಾ- ಹೀಗೆ ಹಾಸ್ಯನಟರ ದೊಡ್ಡ ಗುಂಪೇ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry