ಕುಡಿದು ಚಾಲನೆ: 6 ತಿಂಗಳು ಜೈಲು

7

ಕುಡಿದು ಚಾಲನೆ: 6 ತಿಂಗಳು ಜೈಲು

Published:
Updated:
ಕುಡಿದು ಚಾಲನೆ: 6 ತಿಂಗಳು ಜೈಲು

ನವದೆಹಲಿ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರನ್ನು ಜೈಲಿಗೆ ಹಾಕಲು ಅವಕಾಶ ಕಲ್ಪಿಸಿರುವ `ಮೋಟಾರು ವಾಹನ ಕಾಯ್ದೆ~ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ಸದ್ಯದಲ್ಲೇ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಸಂಬಂಧ ತಿದ್ದುಪಡಿ ಮಸೂದೆ ಮಂಡಿಸಲಿದೆ.



ರಸ್ತೆ ಸಾರಿಗೆ ಸಚಿವ ಸಿ.ಪಿ.ಜೋಶಿ ನೇತೃತ್ವದ `ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿ~ ಮೋಟಾರು ವಾಹನ ಕಾಯ್ದೆಯಲ್ಲಿನ ನಿಯಮಗಳ ಅನುಷ್ಠಾನ ಕುರಿತು ಅಧ್ಯಯನ ನಡೆಸಲು ನೇಮಿಸಿದ್ದ ~ಪರಿಣಿತ ಕಾರ್ಯತಂಡ~ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸಿದೆ. ಕುಡಿದು. ವಾಹನ ಚಲಿಸುವವರನ್ನು ಕಠಿಣ ಶಿಕ್ಷೆಗೊಳಪಡಿಸುವುದೂ ಸೇರಿದಂತೆ ಹಲವು ಮಹತ್ವದ ಶಿಫಾರಸುಗಳನ್ನು ಈ ತಂಡ ಮಾಡಿದೆ.



ಈ ಕಾರ್ಯತಂಡದ ವರದಿ ಆಧರಿಸಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದು ರಸ್ತೆ ಸಾರಿಗೆ ಸಚಿವಾಲಯದ ಕಾರ್ಯದರ್ಶಿ ಎ.ಕೆ. ಉಪಾಧ್ಯಾಯ ಗುರುವಾರ `ಪ್ರಜಾವಾಣಿ~ಗೆ ತಿಳಿಸಿದರು. ಕುಡಿದು ವಾಹನ ಚಾಲನೆ ಮಾಡುವುದರಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಸ್ಪಷ್ಟಪಡಿಸಿದರು.



ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿ ಸಿಕ್ಕಿಬಿದ್ದು ಪರವಾನಗಿ ಕಳೆದುಕೊಂಡರೆ ದೇಶದ ಯಾವುದೇ ಭಾಗದಲ್ಲೂ ಮತ್ತೆ ಇದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಉದ್ದೇಶಕ್ಕಾಗಿ ಇಡೀ ದೇಶದ ಪರವಾನಗಿ ವಿತರಣಾ ವ್ಯವಸ್ಥೆಯ ಕಂಪ್ಯೂಟರ್ ಜಾಲ ಹೊಂದಲು ಉದ್ದೇಶಿಸಲಾಗಿದೆ.



ಕಳೆದ ವರ್ಷ ದೇಶದಲ್ಲಿ 4.5 ಲಕ್ಷ ಅಪಘಾತಗಳು ಸಂಭವಿಸಿದ್ದು 1.3 ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು ಐದು ಲಕ್ಷ ಜನ ಗಾಯಗೊಂಡಿದ್ದಾರೆ. ಇದರಲ್ಲಿ ಶೇ.75ರಷ್ಟು ಅಪಘಾತಗಳು ಚಾಲಕರ ಲೋಪದಿಂದ ಆಗಿದೆ ಎಂದು ಉಪಾಧ್ಯಾಯ ಅಂಕಿಸಂಖ್ಯೆ ನೀಡಿದರು.



ಮೋಟಾರು ವಾಹನ ಕಾಯ್ದೆ 1998ರ 185ನೇ ಸೆಕ್ಷನ್ ಪ್ರಕಾರ ಮದ್ಯಪಾನ ಮಾಡಿ ವಾಹನ ಓಡಿಸುವಾಗ ಸಿಕ್ಕಿಬೀಳುವವರಿಗೆ ಎರಡು ಸಾವಿರ ರೂಪಾಯಿವರೆಗೆ ದಂಡ ಅಥವಾ ಆರು ತಿಂಗಳವರೆಗೆ ಜೈಲು ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಲು ಅವಕಾಶವಿದೆ. ಮೂರು ವರ್ಷದ ಒಳಗಾಗಿ ಮತ್ತೆ ಇದೇ ತಪ್ಪು ಮಾಡುವವರಿಗೆ ಮೂರು ಸಾವಿರ ರೂಪಾಯಿವರೆಗೆ ದಂಡ ಮತ್ತು ಎರಡು ವರ್ಷ ಸೆರೆವಾಸಕ್ಕೆ ಕಳುಹಿಸಬಹುದು.



ಇಂತಹವರ ಚಾಲನಾ ಪರವಾನಗಿ ರದ್ದು ಮಾಡಲು ಅವಕಾಶವಿದೆ ಆದರೆ, ಈಗ ದಂಡ ಹಾಕಿ ಬಿಟ್ಟುಬಿಡಲಾಗುತ್ತಿದೆ. ದೆಹಲಿ ಸರ್ಕಾರ ಈಗಾಗಲೇ ನ್ಯಾಯಾಂಗದ ಜತೆ ಸಮಾಲೋಚಿಸಿ ಕುಡಿದು ವಾಹನ ಚಾಲನೆ ಮಾಡುವವರಿಗೆ ಕಠಿಣ ಶಿಕ್ಷೆಗೊಳಪಡಿಸುವ ಕೆಲಸಕ್ಕೆ ಮುಂದಾಗಿದೆ. ಇಂಥವರಿಗೆ ದಂಡ ಹಾಕುವುದರ ಜತೆಗೆ ಐದರಿಂದ ಹತ್ತು ದಿನ ಜೈಲಿಗೆ ಕಳುಹಿಸಲಾಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಕಡಿಮೆ ಆಗಿದೆ. ಉಳಿದ ರಾಜ್ಯಗಳೂ ನ್ಯಾಯಾಂಗದ ಜತೆ ಸಮಾಲೋಚಿಸಿ ಇಂಥ ಕ್ರಮಕ್ಕೆ ಮುಂದಾಗಬೇಕು ಎಂದರು.



ಮೋಟಾರು ವಾಹನ ಉಲ್ಲಂಘನೆಗೆ ಸಂಬಂಧಿಸಿದಂತೆ ವಿಧಿಸುತ್ತಿರುವ ದಂಡವನ್ನು ಪ್ರತಿ ಮೂರು ವರ್ಷಗಳಿಗೆ ಗ್ರಾಹಕ ದರ ಸೂಚ್ಯಂಕ ಅನ್ವಯ ಪರಿಷ್ಕರಿಸಬೇಕು. ದ್ವಿಚಕ್ರ ವಾಹನಗಳ ಸವಾರರು ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ ಹೆಲ್ಮೆಟ್ ಕಡ್ಡಾಯ.  ಹಿಂಬದಿ ಸವಾರರಿಗೂ ಇದು ಅನ್ವಯ. ಕಾರುಗಳಲ್ಲಿ ವಾಹನ ಚಾಲಕರು ಮತ್ತು ಮುಂದಿನ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಹಾಕಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿನ ಸೀಟಿನ ಸವಾರರೂ ಸೀಟ್ ಬೆಲ್ಟ್ ಧರಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.



ನಿಗದಿತ ಸಂಖ್ಯೆಗಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ವಾಹನಗಳು ಹಾಗೇ ನಿರ್ದಿಷ್ಟ ಸಾಮರ್ಥ್ಯಕ್ಕಿಂತಲೂ ಅಧಿಕ ಸರಕು ಸಾಗಣೆ ವಾಹನಗಳ ವಿರುದ್ಧವೂ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಮೋಟಾರು ವಾಹನ ಕಾಯ್ದೆ ಕಟ್ಟುನಿಟ್ಟು ಜಾರಿಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಉಪಾಧ್ಯಾಯ ವಿವರ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry