ಸೋಮವಾರ, ನವೆಂಬರ್ 18, 2019
28 °C
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಕಟಣೆ

ಕುಡಿದು ಮತದಾನ ಮಾಡದಿರಿ: ಕಿವಿಮಾತು

Published:
Updated:

ಶಿರಸಿ: `ಮದ್ಯ ಕುಡಿದು ವಾಹನ ಚಾಲನೆ ಮಾಡಿದರೆ ಅಪಘಾತವಾಗುತ್ತದೆ. ಆದ್ದರಿಂದ ಕುಡಿದು ವಾಹನ ಚಾಲನೆ ಮಾಡುವುದು ಕಾನೂನು ದೃಷ್ಟಿಯಿಂದ ನಿಷಿದ್ಧ. ಹಾಗೆಯೇ ಕುಡಿದು ಮತದಾನ ಮಾಡಿದರೆ ಪ್ರಜಾಪ್ರಭುತ್ವ ಪದ್ಧತಿಯೇ ಅಪಘಾತಕ್ಕೀಡಾಗಬಹುದು. ಹೀಗಾಗಿ ಕುಡಿದು ಮತದಾನ ಮಾಡದಿರಿ'.ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ  ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಪ್ರಕಟಿಸಿರುವ `ನಾವಿಡಬೇಕಾದ ತ್ರಿವಿಕ್ರಮ ಹೆಜ್ಜೆಗಳು' ಕರಪತ್ರದ ಸಾಲುಗಳು ಇವು.ಹೆಂಡದ ಹೊಳೆಯನ್ನೇ ಹರಿಸಿ ಚುನಾವಣೆಗಳು ನಡೆಯುವ ಇಂದಿನ ದಿನಗಳಲ್ಲಿ ಮದ್ಯರಹಿತ ಚುನಾವಣೆಯ ಪರ್ವಕ್ಕೆ ನಾಂದಿ ಹಾಡುವ ಮೂಲಕ ಸಜ್ಜನ ಜನಪ್ರತಿನಿಧಿಗಳು ಆಯ್ಕೆಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಮಂಡಳಿ ವಿನೂತನ ಜನಾಂದೋಲನಕ್ಕೆ ಹೆಜ್ಜೆ ಇಟ್ಟಿದೆ.ರಾಜ್ಯದ 300ಕ್ಕೂ ಹೆಚ್ಚು ಮಠಗಳ ಯತಿಗಳಿಗೆ, ಧರ್ಮಾಧಿಕಾರಿಗಳಿಗೆ ಮುದ್ರಿತ ಕರಪತ್ರವನ್ನು ರವಾನಿಸಿ ತಮ್ಮ ಮಠದ ವ್ಯಾಪ್ತಿಯ ಮತದಾರರು, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸುವಂತೆ ವಿನಂತಿಸಿದೆ.ಮದ್ಯರಹಿತ ಚುನಾವಣೆ ನಡೆಸುವಂತೆ ಸಿರಿಗೆರೆ ಸ್ವಾಮಿಗಳು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಂದ ಪ್ರಮಾಣ ಸ್ವೀಕರಿಸುವ ಕಾರ್ಯ ಮಾಡುತ್ತಿದ್ದಾರೆ. ಅವರಂತೆ ಅನೇಕ ಸ್ವಾಮಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ. ಸಾಧ್ಯವಾದಷ್ಟು ಸ್ವಾಮಿಗಳನ್ನು ವೈಯಕ್ತಿಕ ಭೇಟಿ ಮಾಡಿ ವಿನಂತಿಸಲಾಗುವುದು.ಮಂಡಳಿಯಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ನೀತಿ ಸಂಹಿತೆ ಅಡ್ಡ ಬರುತ್ತಿದ್ದು, ವಿನಾಯಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಆಯೋಗ ಅನುಮತಿ ನೀಡಿದಲ್ಲಿ ಮಂಡಳಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ ಎಂದು ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)