ಕುಡಿದು ವಿಮಾನದಲ್ಲಿ ಅನುಚಿತ ವರ್ತನೆ

ಶುಕ್ರವಾರ, ಜೂಲೈ 19, 2019
28 °C
ಮಾರ್ಗ ಮಧ್ಯದಲ್ಲಿ ಬಾಗಿಲು ತೆಗೆಯಲು ಮುಂದಾಗಿದ್ದ ಶ್ರೀಲಂಕಾದ ಆಟಗಾರ!

ಕುಡಿದು ವಿಮಾನದಲ್ಲಿ ಅನುಚಿತ ವರ್ತನೆ

Published:
Updated:

ಕೊಲಂಬೊ (ಪಿಟಿಐ): ಶ್ರೀಲಂಕಾ `ಎ' ತಂಡದ ಆಟಗಾರರೊಬ್ಬರು ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಕುಡಿದು ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ. ಸೇಂಟ್ ಲೂಸಿಯಾದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ವಿಮಾನದ ಮುಖ್ಯ ಬಾಗಿಲು ತೆಗೆಯಲು ಅವರು ಪ್ರಯತ್ನಿಸಿದ್ದಾರೆ. ಕುಡಿದ ಮತ್ತಿನಲ್ಲಿ ಶೌಚಾಲಯದ ಬಾಗಿಲು ಎಂದು ಭಾವಿಸಿ ಈ ರೀತಿ ಮಾಡಿದ್ದಾರೆ ಎಂದು `ಡೇಲಿಮೇಲ್' ವರದಿ ಮಾಡಿದೆ.ಈ ಪ್ರಕರಣದ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನಿಖೆಗೆ ಆದೇಶಿಸಿದೆ. ಆದರೆ ಆ ಆಟಗಾರನ ಹೆಸರನ್ನು ಬಹಿರಂಗಪಡಿಸಿಲ್ಲ. ಮ್ಯಾನೇಜರ್ ವರದಿಯನ್ನು ಆಧರಿಸಿ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. ತಪ್ಪು ಎಸಗಿದ್ದು ಸಾಬೀತಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಮಂಡಳಿ ಹೇಳಿದೆ. 21 ವರ್ಷ ವಯಸ್ಸಿನ ರಮಿತ್ ರಂಬುಕುವೆಲಾ ಈ ರೀತಿ ದುರ್ವರ್ತನೆ ತೋರಿದ ಆಟಗಾರ ಎಂಬುದು ತಿಳಿದುಬಂದಿದೆ.`ಈ ಕೃತ್ಯ ಎಸಗಿದ್ದು ರಮಿತ್. ವಿಮಾನದೊಳಗೆ ಮಂದ ಬೆಳಕಿತ್ತು. ಪಾನಮತ್ತರಾಗಿದ್ದ ಅವರು ಮುಖ್ಯ ಬಾಗಿಲನ್ನು ಶೌಚಾಲಯದ ಬಾಗಿಲು ಎಂದು ತಪ್ಪಾಗಿ ಭಾವಿಸಿ ಈ ರೀತಿ ಮಾಡಿದ್ದಾರೆ. ಇದರಿಂದ ಪ್ರಯಾಣಿಕರು ಗಾಬರಿಗೆ ಒಳಗಾಗಿದ್ದರು' ಎಂದು ಕ್ರಿಕ್‌ಇನ್ಫೊ  ವೆಬ್‌ಸೈಟ್ ಟ್ವಿಟ್ ಮಾಡಿದೆ.`ಆ ಯುವ ಆಟಗಾರ ತಪ್ಪೊಪ್ಪಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ, ಸಹ ಪ್ರಯಾಣಿಕರ ಕ್ಷಮೆಯಾಚಿಸಿದ್ದಾರೆ. ಈ ವಿಷಯವನ್ನು ಮ್ಯಾನೇಜರ್ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದಾರೆ' ಎಂದು ಶ್ರೀಲಂಕಾ ತಂಡದ ಮಾಜಿ ಆಟಗಾರ ರಸೆಲ್ ಅನಾರ್ಲ್ಡ್ ಕೂಡ ಟ್ವಿಟ್ ಮಾಡಿದ್ದಾರೆ.`ಲಂಕಾ ತಂಡ ಗ್ರೆನೆಡಾದಲ್ಲಿ ವಿಮಾನವೇರಿತ್ತು. ಮಧ್ಯರಾತ್ರಿ ವೇಳೆಗೆ ಈ ಘಟನೆ ನಡೆದಿದೆ. ತಂಡದ ಆಟಗಾರ ಶೌಚಾಲಯಕ್ಕೆ ಹೋಗಲು ಮುಂದಾದಾಗ ಈ ರೀತಿ ಆಗಿದೆ' ಎಂದು ಲಂಕಾ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಆಡಲು ಲಂಕಾ `ಎ' ತಂಡ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry