ಭಾನುವಾರ, ಮೇ 22, 2022
22 °C

ಕುಡಿಯುವ ನೀರಾವರಿ ಯೋಜನೆ: ಪರಮಶಿವಯ್ಯ ವರದಿ ಜಾರಿಗೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಸಂಬಂಧ ಜಿ.ಎಸ್.ಪರಮಶಿವಯ್ಯ ಸಮಿತಿಯ ಶಿಫಾರಸಿನ ಪ್ರಕಾರ ಸಮಗ್ರವಾದ ಯೋಜನೆ ರೂಪಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ವಿಧಾನ ಸಭೆಯಲ್ಲಿ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಎನ್.ಸಂಪಂಗಿ ಪ್ರಶ್ನೆಗೆ ಉತ್ತರಿಸಿದ ಅವರು, ಅಂತರ್ಜಲ ವೃದ್ಧಿ ಮತ್ತು ಕುಡಿಯುವ ನೀರು ಪೂರೈಕೆಗಾಗಿ ಸರ್ಕಾರ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸಲಿದೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಹೆಚ್ಚುವರಿ ನೀರನ್ನು ಬಳಸಿಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.ಎತ್ತಿನಹೊಳೆ ತಿರುವು ಯೋಜನೆಯನ್ನು ಈ ವರ್ಷವೇ ಅನುಷ್ಠಾನಗೊಳಿಸಲಾಗುವುದು. ಇದರಿಂದ ದೊರೆಯುವ 10 ಟಿಎಂಸಿ ನೀರನ್ನು ಬಳಸಿಕೊಂಡು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಿದ್ದು, ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.2011-12ನೇ ಸಾಲಿನ ಬಜೆಟ್‌ನಲ್ಲಿ ಇದಕ್ಕಾಗಿ 200 ಕೋಟಿ ರೂಪಾಯಿ ನೀಡಲಾಗಿದೆ. ಇದಲ್ಲದೆ ಭದ್ರಾ ಮೇಲ್ದಂಡೆ ಯೋಜನೆಯಡಿ ಕೋಲಾರ ತಾಲ್ಲೂಕಿನ 19 ಸಣ್ಣ ಕೆರೆಗಳಿಗೆ ನೀರು ತುಂಬಿಸುವ ಸಂಬಂಧ 10.09 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಆದರೆ ತರೀಕೆರೆ ರೈತರ ವಿರೋಧದಿಂದಾಗಿ ಅನುಷ್ಠಾನಗೊಳಿಸಲು ಸಾಧ್ಯ ಆಗುತ್ತಿಲ್ಲ. ಅವರ ಮನವೊಲಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.ನೇತ್ರಾವತಿ ತಿರುವು ಯೋಜನೆಯಿಂದ 200 ಟಿಎಂಸಿ ನೀರು ಲಭ್ಯವಾಗಲಿದೆ. ಆದರೆ ಇದರಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸರಕ್ಕೆ ತೊಂದರೆ ಆಗದಂತೆ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. ವಿವರವಾದ ಯೋಜನಾ ವರದಿ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಇದಕ್ಕೂ ಮುನ್ನ ಮಾತನಾಡಿದ ಸಂಪಂಗಿ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪ್ಲೊರೈಡ್ ಸಮಸ್ಯೆಯಿಂದ ಜನರು ವಿಷಯುಕ್ತ ನೀರು ಕುಡಿಯುತ್ತಿದ್ದಾರೆ. ಇದರಿಂದ ಅಂಗವಿಕಲ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಇದಕ್ಕೆ ದನಿಗೂಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.