ಭಾನುವಾರ, ಆಗಸ್ಟ್ 18, 2019
24 °C

ಕುಡಿಯುವ ನೀರಿಗಾಗಿ ನಗರಸಭೆಗೆ ಮುತ್ತಿಗೆ

Published:
Updated:

ಚಿಂತಾಮಣಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದ್ದು, ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.ನಗರದ ವಿವಿಧ ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಕುಡಿಯಲು ನೀರು ಲಭ್ಯವಿದ್ದರೂ; ಸಮರ್ಪಕವಾಗಿ ಎಲ್ಲ ವಾರ್ಡ್‌ಗಳಿಗೆ ನೀರನ್ನು ಪೂರೈಸದೆ ಕೆಲ ವಾರ್ಡ್‌ಗಳಿಗೆ ಮಾತ್ರ ಪೂರೈಸುವ ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಒಂದು ತಿಂಗಳಿನಿಂದ ನಿತ್ಯವೂ ತಪ್ಪದಂತೆ ವಿವಿಧ ಬಡಾವಣೆಯ ಮಹಿಳೆಯರು ನಗರಸಭೆಗೆ ಮುತ್ತಿಗೆ ಹಾಕುತ್ತಿದ್ದಾರೆ. ಧರಣಿ-ಪ್ರತಿಭಟನೆ ನಡೆಸುತ್ತಿದ್ದರೂ; ನಗರಸಭೆ ಆಡಳಿತ ಮಾತ್ರ ಸ್ವಲ್ಪವೂ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.ನಗರಸಭೆ ವ್ಯಾಪ್ತಿಯ ಕೊಳವೆ ಬಾವಿಗಳಿಂದ ಸಾಕಷ್ಟು ನೀರು ದೊರೆಯುತ್ತಿದ್ದರೂ; ಸಮಾನವಾಗಿ ವಿತರಿಸುವ ಕೆಲಸ ನಡೆಯುತ್ತಿಲ್ಲ. ಕೆಲ ಮುಖಂಡರು ಕೊಳವೆ ಬಾವಿಗಳಿಂದ ಬೇರೆ ಕಡೆಗೆ ನೀರು ಕೊಡಲು ತೊಂದರೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ನ್ಯಾಯಯುತ ತೀರ್ಮಾನ ಕೈಗೊಳ್ಳದೆ ಮುಖಂಡರ ಮರ್ಜಿಯಂತೆ ನಡೆದುಕೊಳ್ಳುತ್ತಿರುವುದೇ ಸಮಸ್ಯೆ ಉಲ್ಭಣಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು.ನಗರದಲ್ಲಿ ಡೆಂಗೆ ವ್ಯಾಪಕವಾಗಿ ಹರಡುತ್ತಿದ್ದು ನಗರಸಭೆ ವತಿಯಿಂದ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ರೋಗದಿಂದ ಬಳಲುತ್ತಿರುವ ಬಡವರು, ಮಧ್ಯಮ ವರ್ಗದ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಮಾಡಿಕೆರೆ ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಆರ್.ನಾಗರಾಜು, ಪದಾಧಿಕಾರಿಗಳಾದ ವೆಂಕಟೇಶ್, ಶಂಕರ್, ದೇವರಾಜು, ನಾಗರಾಜ್, ಎಚ್.ಮಂಜುನಾಥ, ಶ್ರೀನಿವಾಸ್, ಪಾರ್ಥಸಾರಥಿ, ಚಂದ್ರ, ಎಸ್.ಆಂಜಿನಪ್ಪ, ಕುಮಾರ್, ನಾಗೇಶ್, ಶಬೀರ್ ಪಾಷಾ, ಶಿವಣ್ಣ, ಮದ್ದಪ್ಪ ಮತ್ತಿತರರು ಭಾಗವಹಿಸಿದ್ದರು.

Post Comments (+)