ಬುಧವಾರ, ನವೆಂಬರ್ 20, 2019
27 °C

ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆ

Published:
Updated:

ಲಿಂಗಸುಗೂರ: ತಾಲ್ಲೂಕಿನಾದ್ಯಂತ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಭವಣೆ ಉಲ್ಬಣಗೊಳ್ಳುತ್ತ ಸಾಗಿದೆ. ಪತ್ರಿಕೆಗಳು ವರದಿ ಮಾಡಿ ಗಮನ ಸೆಳೆದರು ಕೂಡ ಪ್ರಯೋಜನವಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಸ್ಪಷ್ಟ ಉತ್ತರ ದೊರಕದೆ ಹಿರೆನಗನೂರು-ಚುಕನಟ್ಟಿ ಗ್ರಾಮಸ್ಥರು ಸೋಮವಾರ ಪಟ್ಟಣದಲ್ಲಿ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದರು.ಪಟ್ಟಣದ ಲಕ್ಷ್ಮಿದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಡಳಿತ ವ್ಯವಸ್ಥೆ ವಿರುದ್ಧ ಧಿಕ್ಕಾರ ಹಾಕುತ್ತ ತಾಲ್ಲೂಕು ಪಂಚಾಯಿತಿ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಿ ಪ್ರತಿಭಟನೆ ಮುಂದುವರೆಸಿತು. ಹಿರೆನಗನೂರು ಮತ್ತು ಚುಕನಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ ಎಂದು ಗಮನ ಸೆಳೆದರು.ಜನತೆಗೆ ಕುಡಿಯಲು ನೀರು ದೊರಕದೆ ತೋಟ-ಪಟ್ಟಿಗಳಿಗೆ ಪರದಾಡುತ್ತಿದ್ದಾರೆ. ಅಡವಿಯಲ್ಲಿ ನೀರು ಸಿಗದೆ ಜನುವಾರುಗಳು ಸಾವನ್ನಪ್ಪುತ್ತಿವೆ. ಹೀಗಾಗಿ ಜನತೆ ಕಣ್ಣೀರಲ್ಲಿ ಕೈತೊಳೆಯುವಂತಹ ಗಂಭೀರ ದುಸ್ಥಿತಿ ಬಂದೊದಗಿದೆ. ನೀರಿನ ಅವ್ಯವಸ್ಥೆಯಿಂದ ನೀರಿರುವ ಸ್ಥಳಕ್ಕೆ ಗುಳೆ ಹೋಗುವಂತಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಬಾಲನಗೌಡ ಪಾಟೀಲ ನೇತೃತ್ವದಲ್ಲಿ ರ‌್ಯಾಲಿ ನಡೆಸಲಾಯಿತು. ಮುಖಂಡರಾದ ಶಿವಪುತ್ರ ಗಾಣದಾಳ, ಮುತ್ತಣ್ಣ ಹಡಪದ, ರಮೇಶ ಕಟ್ಟಿಮನಿ, ತಿರುಪತಿ, ಮಲ್ಲೇಶ ಮ್ಯಾಗೇರಿ, ವಿರೂಪಾಕ್ಷಗೌಡ, ಪಂಪಣ್ಣ ಶಾವಂತಗೇರಿ, ವೀರಭದ್ರಪ್ಪ ಕುರಗೋಡ, ಆದಪ್ಪ, ಬಸವರಾಜ, ವೀರಭದ್ರಯ್ಯ, ನಾಗರೆಡ್ಡೆಪ್ಪ, ಅಯ್ಯನಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)