ಕುಡಿಯುವ ನೀರಿಗೆ ಆಗ್ರಹಿಸಿ ರಸ್ತೆ ತಡೆ

7
ಮೊಳಕಾಲ್ಮುರು ತಾಲ್ಲೂಕು ಕೋನಸಾಗರ

ಕುಡಿಯುವ ನೀರಿಗೆ ಆಗ್ರಹಿಸಿ ರಸ್ತೆ ತಡೆ

Published:
Updated:

ಮೊಳಕಾಲ್ಮುರು: ತಾಲ್ಲೂಕಿನ ಕೋನಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ನಂತರ ರಸ್ತೆತಡೆ ನಡೆಸಿದರು.ವ್ಯಾಪ್ತಿಯ ಕೆಂಗಪಾಲಯ್ಯನಹಟ್ಟಿ, ಭದ್ರಯ್ಯನತೋಪು, ಬೊರಯ್ಯನ ಹಟ್ಟಿ, ಪಾಲಯ್ಯನಹಟ್ಟಿ, ಸಣ್ಣಪಾಲಯ್ಯನ ಹಟ್ಟಿ, ಕೋನಸಾಗರ ಗ್ರಾಮಗಳಲ್ಲಿ ಕಳೆದ 5-6 ತಿಂಗಳಿನಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಜೀವನ ನಡೆಸುವುದು ಅತ್ಯಂತ ದುಸ್ತರವಾಗಿದೆ ಎಂದು ದೂರಿದರು.ಪ್ರಸ್ತುತ ಈ ಗ್ರಾಮಗಳ ಜನತೆ ನೀರನ್ನು 2 ಕಿ.ಮೀ ದೂರ ಹೋಗಿ ತರುತ್ತಿದ್ದಾರೆ. ಸಮಸ್ಯೆ ಬಗ್ಗೆ ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್  ಕಚೇರಿಗೆ ಮನವಿ ನೀಡಲಾಗಿದೆ. ಸಮಸ್ಯೆ ಬಗೆಹರಿಸಲಾಗುವುದು ಎಂದು ನೀಡಿರುವ ಭರವಸೆ ಇದುವರೆಗೂ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಲಕ್ಷ್ಮೀನರಸಿಂಹಯ್ಯ, ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ, ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಮೂರು ದಿನಗಳ ಒಳಗೆ ತುರ್ತು ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.ರಸ್ತೆತಡೆ ಪರಿಣಾಮ ಮೊಳಕಾಲ್ಮುರು- ಕೋನಸಾಗರ, ಕೊಂಡ್ಲಹಳ್ಳಿ- ಬಿ.ಜಿ.ಕೆರೆ ಮಾರ್ಗದಲ್ಲಿ ಒಂದೂವರೆ ಗಂಟೆ ಸಂಚಾರ ವ್ಯತ್ಯಯವಾಯಿತು.ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಬೆಳಗಲ್ ಈಶ್ವರಯ್ಯ ಸ್ವಾಮಿ, ಕನಕ ಶಿವಮೂರ್ತಿ, ರವಿಕುಮಾರ್, ತಿಮ್ಮಪ್ಪಯ್ಯನಹಳ್ಳಿ ರಾಜಣ್ಣ, ನೀಲಮ್ಮ, ಬಸಮ್ಮ, ಶೇಖರ್, ಕೋನಸಾಗರ ನೀಲಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry