ಕುಡಿಯುವ ನೀರಿಗೆ ಆಗ್ರಹಿಸಿ ಶಾಸಕರಿಗೆ ಮುತ್ತಿಗೆ

7

ಕುಡಿಯುವ ನೀರಿಗೆ ಆಗ್ರಹಿಸಿ ಶಾಸಕರಿಗೆ ಮುತ್ತಿಗೆ

Published:
Updated:

ಲಿಂಗಸುಗೂರ: ತಾಲ್ಲೂಕಿನ ಪೈದೊಡ್ಡಿ ಗ್ರಾಮ ಕಳೆದ ಹಲವು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತ ಬಂದಿದೆ. ಈಗಾಗಲೆ ಹಲವು ಬಾರಿ ತಾಲ್ಲೂಕು ಪಂಚಾಯಿತಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಕೂಡ ಪರ್ಯಾಯ ವ್ಯವಸ್ಥೆ ಮಾಡದಿರುವುದನ್ನು ವಿರೋಧಿಸಿ ಬುಧವಾರ ತಾಪಂ ಕಚೇರಿಯಿಂದ ಹೊರಬರುತ್ತಿದ್ದ ಶಾಸಕ ಮಾನಪ್ಪ ವಜ್ಜಲ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪೈದೊಡ್ಡಿ ಗ್ರಾಮದಲ್ಲಿ ಈಗಾಗಲೆ ತೆರೆದಬಾವಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅಲ್ಲಿಂದ ಪೈಪಲೈನ್ ಮಾಡಿಸಿ, ಗ್ರಾಮಕ್ಕೆ ನೀರು ಪೂರೈಸುವ ಹಂತದಲ್ಲಿ ಅಧಿಕಾರಿಗಳ ಮತ್ತು ಎಂಜಿನಿಯರ್‌ಗಳ ತಿಕ್ಕಾಟದ ಮಧ್ಯೆ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ.

ಆಡಳಿತಶಾಹಿಗಳ ಆಂತರಿಕ ತಿಕ್ಕಾಟದಿಂದ ಕುಡಿಯುವ ನೀರು ಮರೀಚಿಕೆಯಾಗಿದೆ. ಕಾಮಗಾರಿ ಏನೆ ಆಗಲಿ ಪರ್ಯಾಯ ವ್ಯವಸ್ಥೆ ಮೂಲಕ ಜನತೆಗೆ ನೀರು ಪೂರೈಸಬೇಕು. ಇಲ್ಲವಾದರೆ ಧರಣಿ    ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಶಾಸಕ ಮಾನಪ್ಪ ವಜ್ಜಲ ಮಾತನಾಡಿ, ಪೈದೊಡ್ಡಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಈಗಾಗಲೆ ರೂ. 10ಲಕ್ಷ ಹಣ ನೀಡಲಾಗಿದೆ. ಕಾಮಗಾರಿ ವಿಳಂಬದ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ. ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಗ್ರಾಮಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವೆ. ಸಾರ್ವಜನಿಕರು ಕೂಡ ಸಹಕಾರ ನೀಡುವಂತೆ ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿದರು. ಸ್ಥಳದಲ್ಲಿಯೆ ಇದ್ದ  ಜಿಪಂ ಎಂಜಿನಿಯರಿಂಗ್ ಹಾಗೂ ತಾಪಂ ಅಧಿಕಾರಿಗಳಿಗೆ ತುರ್ತು ಕ್ರಮಕ್ಕೆ ಸೂಚಿಸಿದರು.ಕರವೇ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ. ಪೈದೊಡ್ಡಿ ಗ್ರಾಮ ಘಟಕದ ಅಧ್ಯಕ್ಷ ಪ್ರಭುಗೌಡ. ಮುಖಂಡರಾದ ಆಂಜನೇಯ ಭಂಡಾರಿ, ನಿತ್ಯಾನಂದ, ತುಳುಜಾರಾಮ, ಮುದಕಪ್ಪ, ಹರಿಶ್ಚಂದ್ರ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry