ಕುಡಿಯುವ ನೀರಿಗೆ ಆದ್ಯತೆ

7

ಕುಡಿಯುವ ನೀರಿಗೆ ಆದ್ಯತೆ

Published:
Updated:

ಶ್ರೀನಿವಾಸಪುರ: ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ಪಟ್ಟಣ ನೈರ್ಮಲ್ಯಕ್ಕೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಪುರಸಭಾಧ್ಯಕ್ಷ ಸಿ.ಮುನಿಯಪ್ಪ ಹೇಳಿದರು.ಪಟ್ಟಣದ ಮಾರುತಿ ಬಡಾವಣೆಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಿರುವ ಕೊಳವೆ ಬಾವಿಯಿಂದ ನೀರೆತ್ತುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆ ಕೊರತೆಯಿಂದಾಗಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ. ಇರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ವಿದ್ಯುತ್ ಸಮಸ್ಯೆ ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು.ಸದಸ್ಯ ವಿ.ಶಂಕರ್ ಕೊಳವೆ ಬಾವಿ ಉದ್ಘಾಟಿಸಿ ಮಾತನಾಡಿ, ಮಾರುತಿ ಬಡವಾಣೆಗೆ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಾಸಕರ ನಿಧಿಯಿಂದ ಈ ಬಡಾವಣೆಗೆ ಎರಡು ಕೊಳವೆ ಬಾವಿ ನಿರ್ಮಿಸಲಾಗಿತ್ತು. ಒಂದು ಕೊಳವೆ ಬಾವಿಯಲ್ಲಿ ಮಾತ್ರ ತೃಪ್ತಿಕರವಾಗಿ ನೀರು ಸಿಕ್ಕಿದೆ. ಅದನ್ನು ನಾಗರಿಕರಿಗೆ ಪೂರೈಸಲಾಗುವುದು ಎಂದರು.ಪುರಸಭೆ ಮುಖ್ಯಾಧಿಕಾರಿ ಕೆ.ಜಗದೀಶ್, ಮುಖಂಡರಾದ ಶಿವಾರೆಡ್ಡಿ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.

`ವೈಜ್ಞಾನಿಕ ಪದ್ಧತಿ ಅನುಸರಿಸಿ~

ಶ್ರೀನಿವಾಸಪುರ: ತೋಟದ ಬೆಳೆಗಾರರು ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಬೇಕು. ಕೃಷಿ ಜೊತೆಗೆ ಮಾರುಕಟ್ಟೆ ವ್ಯವಹಾರವನ್ನೂ ತಿಳಿದುಕೊಳ್ಳಬೇಕು ಎಂದು ಕೋಲಾರ ತೋಟಗಾರಿಕಾ ಕಾಲೇಜಿನ ಡೀನ್ ಪ್ರೊ.ನಾಚೇಗೌಡ ಸಲಹೆ ನೀಡಿದರು.ತಾಲ್ಲೂಕಿನ ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಈಚೆಗೆ ಏರ್ಪಡಿಸಿದ್ದ ರೈತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರೈತರು ಏಕ ಬೆಳೆ ಪದ್ಧತಿ ಬಿಡಬೇಕು. ಆರ್ಥಿಕ ದೃಷ್ಟಿಯಿಂದ ಬಹು ಬೆಳೆ ಪದ್ಧತಿ ಅನುಸರಿಸಬೇಕು. ರಾಸಾಯನಿಕ ಗೊಬ್ಬರ ಬಳಕೆಗೆ ಬದಲಾಗಿ ಸಾವಯವ ಗೊಬ್ಬರದ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು. ಕುರಿ, ಕೋಳಿ ಸಾಕಣೆ ಮುಂದುವರಿಸಬೇಕು ಎಂದು ಹೇಳಿದರು.ಜಿಲ್ಲೆಯ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಹೊಗಳಗೆರೆ ಸಮೀಪ 150 ಎಕರೆ ವಿಸ್ತೀರ್ಣದಲ್ಲಿ ತೋಟಗಾರಿಕಾ ಸಂಶೋಧನಾ ಕೇಂದ್ರ ಸ್ಥಾಪಿಸಿದೆ. ಅದರ ಪಕ್ಕದಲ್ಲಿಯೇ ಮಾವು ಸಂಶೋಧನಾ ಕೇಂದ್ರವೂ ಇದೆ. ಇಲ್ಲಿ ರೈತರಿಗೆ ಬೆಳೆಗಳ ನಿರ್ವಹಣೆ ಕುರಿತಾದ ಮಾಹಿತಿ ನೀಡಲಾಗುವುದು. ರೈತರು ಬಯಸಿದಲ್ಲಿ ಮಾರ್ಗದರ್ಶನ ಮಾಡಲಾಗುವುದು ಎಂದು ಹೇಳಿದರು.ರೈತರು ಮಾವನ್ನು ಮಾತ್ರ ನೆಚ್ಚಿಕೊಂಡರೆ ಸಾಲದು. ಅದಕ್ಕೆ ಪರ್ಯಾಯವಾಗಿ ಗೋಡಂಬಿ ಬೆಳೆಯಬಹುದು. ಗೋಡಂಬಿಗೆ ವಿಶ್ವದಾದ್ಯಂತ ಅಧಿಕ ಬೇಡಿಕೆ ಇದೆ. ಜೊತೆಗೆ ಒಳ್ಳೆ ಬೆಲೆಯೂ ಇದೆ. ಕಡಿಮೆ ನೀರು ಬಯಸುವ ದಾಳಿಂಬೆ ಕೃಷಿ ಈಗ ಹೆಚ್ಚು ಆಕರ್ಷಕವಾಗುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇದನ್ನು ಬೆಳೆಯಲು ಪೂರಕವಾದ ವಾತಾವರಣವಿದೆ ಎಂದು ಅಭಿಪ್ರಾಯಪಟ್ಟರು.ಪರಿಸರವಾದಿ ಹಾಗೂ ಸಾವಯವ ಕೃಷಿಕ ರಾಂಪುರ ಅಶೋಕ್ ಕುಮಾರ್, ಇತ್ತೀಚಿನ ದಿನಗಳಲ್ಲಿ ಕೃಷಿ ವಯಸ್ಸಾದವರ ಹಾಗೂ ಮಧ್ಯದಲ್ಲಿ ಶಾಲೆ ಬಿಟ್ಟವರ ಆಯ್ಕೆಯಾಗುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು. ವಿದ್ಯಾವಂತ ಸಮುದಾಯ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ವೈಜ್ಞಾನಿಕ ವಿಧಾನ ಅನುಸರಿಸುವ ಮೂಲಕ ಬೆಳೆ ತೆಗೆಯಬೇಕು. ಮಳೆ ನೀರು ಹಾಗೂ ಅಮೂಲ್ಯವಾದ ಕೊಳವೆ ಬಾವಿ ನೀರನ್ನು ಆರ್ಥಿಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರಗತಿಪರ ಕೃಷಿಕ ಹಾಗೂ ವಕೀಲ ಶಿವ ಪ್ರಕಾಶ್, ರೈತ ಸಮುದಾಯ ಅನುಭವಿಸುತ್ತಿರುವ ಕಷ್ಟಗಳ ಸರಮಾಲೆಯಿಂದ ಹೊರಬರಲು ಸಂಘಟಿತ ಪ್ರಯತ್ನ ಮಾಡಬೇಕು. ಶೋಷಣೆ ವಿರುದ್ಧ ನ್ಯಾಯಯುತ ಹೋರಾಟ ಮಾಡಬೇಕು. ಮಾವು ಬೆಳೆಗಾರರು ಜಾತಿ, ಮತ, ರಾಜಕೀಯ ಪಕ್ಷಗಳನ್ನು ಮರೆತು ಒಗ್ಗೂಡಬೇಕು. ಹೋರಾಟದ ಜೊತೆಗೆ ಲಾಭದಾಯಕ ಕೃಷಿ ವಿಧಾನದ ಬಗ್ಗೆ ಗಮನ ಹರಿಸಬೇಕು ಎಂದರು.ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕೃಷ್ಣಪ್ಪ, ಕೃಷಿಕರಾದ ಸುರೇಶ್ ರಾಜ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ಹುಲು ನಾಚೇಗೌಡ ರೈತರನ್ನು ಉದ್ದೇಶಿಸಿ ಮಾತನಾಡಿದರು.ಹಿರಿಯ ವಕೀಲ ಮುನಿಶಾಮಿಗೌಡ, ರೇಷ್ಮೆ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಗೋವಿಂದ ಗೌಡ, ಸಾವಯವ ಕೃಷಿಕರಾದ ಮುನಿಯಪ್ಪ, ವೆಂಕಟಾಚಲ, ಪ್ರಭಾಕರ್, ರವಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry