ಶುಕ್ರವಾರ, ಜೂನ್ 18, 2021
23 °C

ಕುಡಿಯುವ ನೀರಿಗೆ ತತ್ವಾರ: ಅಧಿಕಾರಿಗಳಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆಬಾವಿ ಕೊರೆಯಿಸಲು ಆಗ್ರಹ, ಮುಂದುವರಿದ ಅಧಿಕಾರಿಗಳ ಗೈರುಹಾಜರಿ, ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಸದಸ್ಯರ ಆಕ್ರೋಶ, ಅಧಿಕಾರಿಗಳ ಹಾಜರಾತಿ ಪಡೆದ ವ್ಯವಸ್ಥಾಪಕರು...-ಇವು ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ತಾ.ಪಂ. ನೂತನ ಅಧ್ಯಕ್ಷ ಆರ್. ಪರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾದ ವಿಷಯಗಳು.ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರುದ್ರಮುನಿ ಮಾತನಾಡಿ, ತಾಲ್ಲೂಕಿನಲ್ಲಿ ಪ್ರತಿದಿನ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ನೀರಿನ ಅಭಾವ ಇರುವ ಸ್ಥಳಗಳಲ್ಲಿ ಕೊಳವೆಬಾವಿಗಳಿಗೆ ಅಳವಡಿಸಲು ಹೆಚ್ಚಿನ ಪೈಪ್, ಹ್ಯಾಂಡ್‌ಪಂಪ್ ಇತರೆ ತುರ್ತು ಪರಿಹಾರ ಕೈಗೊಳ್ಳಲು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗಕ್ಕೆ ್ಙ 5ಲಕ್ಷ ಹಣ ನೀಡಲಾಗಿದೆ ಎಂದರು.ಪಂಚಾಯತ್‌ರಾಜ್  ಎಂಜಿನಿಯರಿಂಗ್ ಉಪ ವಿಭಾಗ ಸಹಾಯಕ ಎಂಜಿನಿಯರ್ ನಿಂಗಪ್ಪ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗಳಿರುವ ಸ್ಥಳಗಳಲ್ಲಿ ಕೊಳವೆಬಾವಿ ಕೊರೆಸಲು ತಜ್ಞರಿಂದ `ಪಾಯಿಂಟ್~ಗಳನ್ನು ಮಾಡಿಸಿದ್ದು, ಶೀಘ್ರದಲ್ಲಿಯೇ ಕೊಳವೆಬಾವಿ ಕೊರೆಸಲಾಗುವುದು. ಕುಡಿಯುವ ನೀರಿನ ತುರ್ತು ನಿರ್ವಹಣೆ ಕಾರ್ಯಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು ಎಂದು ಕೋರಿದರು. ಸದಸ್ಯೆ ಲಕ್ಷ್ಮೀಬಾಯಿ ಮಾತನಾಡಿ, ಸಿಂಗಾಪುರ ಕಾಲೋನಿ, ಪಂಡರಹಳ್ಳಿ ಸೇರಿದಂತೆ ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 3 ವರ್ಷದ ಹಿಂದೆ ಕೊರೆಸಲಾಗಿದ್ದ ಕೊಳವೆಬಾವಿಗೆ ಇದುವರೆಗೂ ಮೋಟಾರ್ ಪಂಪ್‌ಸೆಟ್, ಪೈಪ್ ಅಳವಡಿಸಿಲ್ಲ ಎನ್ನುವ ವಿಷಯಕ್ಕೆ 2 ಅಥವಾ 3 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಎಂಜಿನಿಯರ್ ಉತ್ತರಿಸಿದರು.ಸದಸ್ಯೆ ಆಶಾ ಮಾತನಾಡಿ, ಮೆದೇಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 6 ಸಾವಿರ ಜನಸಂಖ್ಯೆ ಇದ್ದು, ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಗ್ರಾಮದಲ್ಲಿ ಕೆರೆ ಇದ್ದರೂ ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದ, ಮೆದೇಹಳ್ಳಿಗೆ ಶಾಂತಿಸಾಗರ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಎಂಜಿನಿಯರ್, ಶಾಂತಿಸಾಗರ ನೀರು ಸರಬರಾಜಿಗೆ ಜಿಲ್ಲಾಮಟ್ಟದ ಸಮಿತಿ ಇದ್ದು ಅಲ್ಲಿ ಚರ್ಚಿಸಿ ಅನುಮತಿ ಪಡೆದ ನಂತರ ನೀರು ಪಡೆಯಬಹುದು. ತಕ್ಷಣದ ಸಮಸ್ಯೆ ನಿವಾರಣೆಗೆ 2 ಕೊಳವೆಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಸಭೆ ಆರಂಭದಲ್ಲಿ ಸದಸ್ಯ ಕೆ. ಸಿರುವಲ್ಲಪ್ಪ ಮಾತನಾಡಿ, ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾದರೆ ತಾಲ್ಲೂಕಿನ ಸಮಸ್ಯೆಗಳನ್ನು ಚರ್ಚಿಸಲು ಹೇಗೆ ಸಾಧ್ಯ ಎಂದು ಇಒಗೆ ಪ್ರಶ್ನಿಸಿದರು.

 

ಪ್ರಸ್ತುತ 5 ಸಭೆಯಲ್ಲಿ ಪಾಲನಾ ವರದಿಯ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಶೇಖರಪ್ಪ ಗೈರುಹಾಜರಾದ ಅಧಿಕಾರಿಗಳಿಗೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಕೇವಲ ನೋಟಿಸ್ ನೀಡುತ್ತಿದ್ದಾರೆ ವಿನಃ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು. ಸರ್ಕಾರದ ಯೋಜನೆಗಳ ಸಹಾಯಧನವನ್ನು ಆಯಾ ವ್ಯಾಪ್ತಿಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಸದಸ್ಯರ `ಲೆಟರ್‌ಹೆಡ್~ ಮೂಲಕ ಫಲಾನುಭವಿಗಳಿಗೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ಇಲಾಖೆಗಳು ನೇರವಾಗಿ ಫಲಾನುಭವಿಗಳಿಗೆ ಸಲ್ಲಿಸದಂತೆ ಆದೇಶ ಹೊರಡಿಸುವಂತೆ ಎಲ್ಲ ಸದಸ್ಯರು ಇಓಗೆ ಮನವಿ ಮಾಡಿದರು.ತಾ.ಪಂ. ವ್ಯವಸ್ಥಾಪಕರು ಸಭೆಯಲ್ಲಿ ಅಧಿಕಾರಿಗಳ ಹಾಜರಾತಿ ಪಡೆಯಲು ಹೆಸರು ಕೂಗಿದರು. ಅಧಿಕಾರಿಗಳು ಕೈಎತ್ತುವ ಮೂಲಕ ಮತ್ತು ಎದ್ದುನಿಲ್ಲುವ ಮೂಲಕ ಉಪಸ್ಥಿತಿ ಪ್ರದರ್ಶಿಸಿದರು. ತಾ.ಪಂ. ಉಪಾಧ್ಯಕ್ಷೆ ಎಸ್. ಪ್ರತಿಭಾ ರಮೇಶ್ ಸಭೆಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.