ಭಾನುವಾರ, ಜೂನ್ 20, 2021
28 °C

ಕುಡಿಯುವ ನೀರಿಗೆ ಪರದಾಟ

ಪ್ರಜಾವಾಣಿ ವಾರ್ತೆ/ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

ಲಿಂಗಸುಗೂರ(ಮಸ್ಕಿ): ಬೇಸಿಗೆ ಕಾಲದ ಬಿಸಿ ದಿನದಿಂದ ದಿನಕ್ಕೆ ಏರುತ್ತ ಸಾಗಿದೆ. ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿತಗೊಂಡು ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತ ಸಾಗಿದೆ. ತಾಲ್ಲೂಕು ಆಡಳಿತ ಸ್ವಲ್ಪ ಮಟ್ಟಿನ ಮುಂಜಾಗ್ರತೆ ಕೈಗೊಂಡಿದ್ದರೂ ಕೊಡ ನೀರಿಗಾಗಿ ಪರದಾಟ ತಪ್ಪುತ್ತಿಲ್ಲ. ಆ ಪೈಕಿ ತಾಲ್ಲೂಕಿನ ಕುಪ್ಪಿಗುಡ್ಡ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದು ವರದಿಯಾಗಿದೆ.ತಾಲ್ಲೂಕಿನ ಶಾಪಗ್ರಸ್ಥ ಗ್ರಾಮಗಳ ಪೈಕಿ ಕುಪ್ಪಿಗುಡ್ಡ ಗ್ರಾಮವೂ ಒಂದು. ಈ ಗ್ರಾಮದ ಸುತ್ತ ಮುತ್ತ ಎಲ್ಲಿ ಕೊಳವೆ ಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ. ಅಂತೆಯೆ ಕಳೆದ ಹಲವು ವರ್ಷಗಳಿಂದ ದೂರದ ಗೋನವಾರ ಗ್ರಾಮದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಪ್ರಸಕ್ತ ವರ್ಷ ಯರಡೋಣಿಯ ರಾಜೀವಗಾಂಧಿ ಗ್ರಾಮೀಣ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡಿದ್ದರೂ ಸಮರ್ಪಕ ನೀರು ದೊರೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.ಸರ್ಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಿಗುಡ್ಡ ಗ್ರಾಮದಲ್ಲಿ 350ಕ್ಕೂ ಹೆಚ್ಚು ಮನೆಗಳಿವೆ. ಅಂದಾಜು 1800 ಜನಸಂಖ್ಯೆ ಹೊಂದಿದೆ. ಈ ಗ್ರಾಮದಿಂದ ಮೂವರು ಸದಸ್ಯರನ್ನು ಗ್ರಾಮ ಪಂಚಾಯಿತಿಗೆ ಆಯ್ಕೆ ಮಾಡಿ ಕಳುಹಿಸಲಾಗುತ್ತಿದೆ. ಸ್ವಾತಂತ್ರ್ಯ ನಂತರದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರಗಳು ಶಾಶ್ವತ ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾಗಿವೆ. ಕೆಲ ಬಾರಿ ತಾಲ್ಲೂಕು ಕೇಂದ್ರಕ್ಕೆ ತೆರಳಿ ನೀರು ತಂದುಕೊಳ್ಳುವಂತಾಗಿದೆ ಎಂದು ಸಾಬಣ್ಣ ಖೇದ ವ್ಯಕ್ತಪಡಿಸಿದರು.ಅಂತರ್ಜಲ ಮಟ್ಟ ಕುಸಿತದಿಂದ ಗೋನವಾರದಿಂದ ಪೂರೈಕೆಯಾಗುವ ನೀರು ಕೊರತೆಯಾಗುತ್ತಿದೆ. ಯರಡೋಣಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡು ಮೂರ‌್ನಾಲ್ಕು ತಿಂಗಳು ಗತಿಸಿದರೂ  ಗ್ರಾಮಕ್ಕೆ ಪೂರೈಕೆ ಆಗುತ್ತಿಲ್ಲ.

 

ಹೀಗಾಗಿ ನಿತ್ಯ ನೀರಿಗೆ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಸ್ಪಂದಿಸುತ್ತಿಲ್ಲ. ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದ ಯರಡೋಣಿಯಿಂದ ಸಂಪ್‌ಗೆ ಸ್ವಲ್ಪ ಮಟ್ಟಿನ ನೀರು ಬರುತ್ತದೆ. ಅದೇ ನೀರನ್ನು ಬಳಸಿಕೊಳ್ಳುವಲ್ಲಿ ಹರಸಾಹಸ ಪಡುವಂತಾಗಿದೆ ಎಂದು ದೇವಣ್ಣ, ಹನುಮವ್ವ ಬೇಸರ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.