ಕುಡಿಯುವ ನೀರಿಗೆ ರೂ.1 ಕೋಟಿ

7

ಕುಡಿಯುವ ನೀರಿಗೆ ರೂ.1 ಕೋಟಿ

Published:
Updated:
ಕುಡಿಯುವ ನೀರಿಗೆ ರೂ.1 ಕೋಟಿ

ಚನ್ನಗಿರಿ: ವಿಧಾನಸಭಾ ಕ್ಷೇತ್ರದ 23 ಗ್ರಾಮ ಹಾಗೂ ಮಾಯಕೊಂಡ ವಿಧಾನಸಬಾ ಕ್ಷೇತ್ರದ 10ಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಬರಗಾಲ ಪರಿಹಾರ ನಿಧಿಯಿಂದ  ರೂ 1 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಪಂಚಾಯತ್ ರಾಜ್ ಇಲಾಖೆ ಎಇಇ ಸೋಮಶೇಖರ್ ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಈಚೆಗೆ ನಡೆದ ಸಾಮಾನ್ಯಸಭೆಯ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಚನ್ನಗಿರಿ ಕ್ಷೇತ್ರದ 23 ಗ್ರಾಮಗಳಿಗೆ  ರೂ 75 ಲಕ್ಷ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ರೂ 25 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮರವಂಜಿ ಕ್ಷೇತ್ರದ ಸದಸ್ಯ ಸಿ.ಬಿ. ನಾಗರಾಜ್ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸದಸ್ಯರ ಮಾತಿಗೆ ಸ್ಪಂದಿಸುತ್ತಿಲ್ಲ. ಸರಿಯಾದ ಮಾಹಿತಿ ನೀಡುತ್ತಿಲ್ಲ. ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಹೇಳುವಾಗ ಏಕವಚನ ಬಳಸಿದರು.ತಾಲ್ಲೂಕು ಪಂಚಾಯ್ತಿ ಇಒ ಶಿವಕುಮಾರ್ ಸದಸ್ಯರ ಆರೋಪಕ್ಕೆ ಉತ್ತರ ನೀಡಿ, ನನಗೂ ಕೂಡಾ ಏಕವಚನ ಪ್ರಯೋಗ ಮಾಡಲು ಬರುತ್ತದೆ. ಯಾವುದೇ ಕಾರ್ಯ ಇದ್ದರೂ ಕಾನೂನಿನ ಪ್ರಕಾರ ಮಾಡುತ್ತೇವೆ. ಎಲ್ಲಾ ಸದಸ್ಯರಿಗೂ ಕೂಡಾ ಗೌರವವನ್ನು ಕೊಡುತ್ತಿದ್ದೇವೆ. ನಿಮ್ಮ ಸಮಸ್ಯೆ ಏನೇ ಇದ್ದರೂ ಮುಕ್ತವಾಗಿ ಬಂದು ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.ಈ ಹಿಂದೆ ಸಭೆಗಳಲ್ಲಿ ಅಧ್ಯಕ್ಷರ ಹಾಗೂ ಸದಸ್ಯರ ಗಂಡಂದಿರು ಭಾಗವಹಿಸಬಾರದೆಂದು ಕಟ್ಟುನಿಟ್ಟಾಗಿ ಹೊರಗಡೆ ಕಳುಹಿಸುತ್ತಿದ್ದರು. ಆದರೆ, ಈಗ ಹಾಲಿ ಅಧ್ಯಕ್ಷರ ಹಾಗೂ ಸದಸ್ಯರ ಗಂಡಂದಿರು ಸಭೆಗಳಲ್ಲಿ ಪಾಲ್ಗೊಂಡಿದ್ದು, ಈಗ ಏಕೆ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಮಾಜಿ ಅಧ್ಯಕ್ಷೆ ಸುಧಾ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.ತಾಲ್ಲೂಕಿನಲ್ಲಿ 15 ಡೆಂಗೆ ಜ್ವರ ಹಾಗೂ ಮಲೇರಿಯಾ ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಜ್ವರಪೀಡಿತರಿಗೆ ಅಗತ್ಯವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅದೇ ರೀತಿ ಹೆಣ್ಣು ಭ್ರೂಣಹತ್ಯೆ ಮಹಾಪಾಪವಾಗಿದ್ದು, ಈ ಬಗ್ಗೆ ಚುನಾಯಿತ ಸದಸ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಕಾರ್ಯಾಗಾರವನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ಸಭೆಗೆ ಮಾಹಿತಿ ನೀಡಿದರು.ಉಪಾಧ್ಯಕ್ಷ ಎನ್. ಗಣೇಶ್‌ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಂ. ಸಿದ್ದಲಿಂಗಪ್ಪ ಚರ್ಚೆಯಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry