ಸೋಮವಾರ, ನವೆಂಬರ್ 18, 2019
23 °C
ಧರ್ಮಪುರ ಸಮೀಪ ಹಲಗಲದ್ದಿ ಅಂತರ್ಜಲ ಕುಸಿತ

ಕುಡಿಯುವ ನೀರಿಗೆ ಹಾಹಾಕಾರ!

Published:
Updated:

ಧರ್ಮಪುರ: ವಿದ್ಯುತ್ ಅಭಾವ ಮತ್ತು ಅಂತರ್ಜಲ ಕುಸಿತದಿಂದ ಹಲಗಲದ್ದಿ ಗ್ರಾಮಸ್ಥರು  ಹದಿನೈದು ದಿನಗಳಿಂದ  ಕುಡಿಯುವ ನೀರಿಲ್ಲದೇ  ಪರದಾಡುವಂತಾಗಿದೆ.ಧರ್ಮಪುರ ಸಮೀಪದ ಹಲಗಲದ್ದಿಯಲ್ಲಿ ಸುಮಾರು 350 ಮನೆಗಳಿದ್ದು, ಮೂರು ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಆದರೆ, ಕುಡಿಯುವ ನೀರಿಗಾಗಿ ಇಲ್ಲಿರುವುದು ಒಂದೇ ಓವರ್‌ಹೆಡ್ ಟ್ಯಾಂಕ್ ಮಾತ್ರ. ಇನ್ನು ಕೈಪಂಪುಗಳು ಇದ್ದರೂ ಎಲ್ಲವೂ ದುರಸ್ತಿಗೆ ಕಾದಿವೆ. ಇದರಿಂದ ನೀರಿನ ಸಮಸ್ಯೆ ಇಲ್ಲಿ ಹೇಳತೀರದು.ಚಿತ್ರದುರ್ಗ ಬಯಲು ಸೀಮೆ. ಸತತ ಬರಗಾಲಕ್ಕೆ ಒಳಗಾಗಿದ್ದು, ಸುಮಾರು 30 ವರ್ಷಗಳಿಂದ ಇಲ್ಲಿ ಹೇಳಿಕೊಳ್ಳುವಂಥ ಮಳೆ ಬಾರದೇ ಇರುವುದರಿಂದ ಅಂತರ್ಜಲ ಸಂಪೂರ್ಣವಾಗಿ ಕುಸಿದಿದೆ. ತಾಲ್ಲೂಕಿನ ವೇದಾವತಿ ಮತ್ತು ಸುವರ್ಣಮುಖಿ ಹಾಗೂ ದೊಡ್ಡಹಳ್ಳದಿಂದ ಮರಳು ಸಾಗಾಣಿಕೆಗೆ ಪರವಾನಗಿ ನೀಡಿದ್ದು, ಮತ್ತಷ್ಟು ಗಾಯದ ಮೇಲೆ ಬರೆ ಎಳೆದಂತಾಗಿದೆ. ನದಿತಟದಲ್ಲಿ ಸುಮಾರು 15 ಅಡಿ ಆಳದವರೆಗೆ ಮರಳು ತೆಗೆದಿರುವುದರಿಂದ ಅಂತರ್ಜಲ 800 ಅಡಿಯವರೆಗೂ ಕುಸಿದಿದೆ. ಈಗ ಬೋರ್‌ವೆಲ್‌ಗಳಲ್ಲಿ ನೀರು ಬಾರದೇ ಜನರು ಪರಿತಪಿಸುವಂತಾಗಿದೆ.ಬೇಸಗೆ ಬಂದಿರುವುದರಿಂದ ಜಾನುವಾರಿಗೂ ನೀರಿನ ತತ್ವಾರ ಎದುರಾಗಿದ್ದು, ಅವುಗಳ ಪಾಲನೆ ಮಾಡುವುದು ನಮಗೆ ಸಮಸ್ಯೆಯಾಗಿ ಕಸಾಯಿಖಾನೆಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಉಪನ್ಯಾಸಕ ಎಚ್.ಆರ್. ರಾಮಚಂದ್ರಪ್ಪ ತಿಳಿಸಿದ್ದಾರೆ.ಈ ಸಮಸ್ಯೆಯನ್ನು ಇನ್ನು ಒಂದೆರೆಡು ದಿನಗಳಲ್ಲಿ ಬಗೆಹರಿಸದಿದ್ದರೆ ಪಿ.ಡಿ. ಕೋಟೆ ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.ಪ್ರತಿಭಟನೆಯಲ್ಲಿ ಅನ್ನಪೂರ್ಣಮ್ಮ, ನೀಲಮ್ಮ, ಗೀತಮ್ಮ, ತಿಮ್ಮಕ್ಕ, ನೇತ್ರಾವತಿ, ಚಂದ್ರಶೇಖರ್, ನಾಗಭೂಷಣ ಮತ್ತು ವಿವಿಧ ಮಹಿಳಾ ಸಂಘದವರು ಇದ್ದರು.

ಪ್ರತಿಕ್ರಿಯಿಸಿ (+)