ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ

ಗುರುವಾರ , ಜೂಲೈ 18, 2019
26 °C

ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ

Published:
Updated:

ಗುಡಿಬಂಡೆ: ಬರಗಾಲದಿಂದ ಜನ-ಜಾನುವಾರು ತತ್ತರಿಸಿದ್ದು, ಮಳೆಯಿಲ್ಲದೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಈ ಸಮಸ್ಯೆಯನ್ನು ನೀಗಿಸಿ ಎಲ್ಲರಿಗೂ ಕುಡಿಯುವ ನೀರಿನ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸಿಕೊಡುವುದಾಗಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಕೆ.ಎ.ನಾರಾಯಣಸ್ವಾಮಿ ಭರವಸೆ ನೀಡಿದರು.ತಾಲ್ಲೂಕು ಆಡಳಿತ ವತಿಯಿಂದ ದಪ್ಪರ್ತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೆ ಮುಂಗಾರು ಮಳೆ ಮುಗಿಯುತ್ತಿದ್ದರೂ; ಮಳೆ ಕೈ ಕೊಟ್ಟ ಕಾರಣ ನೀರಿಗಾಗಿ ಪರಿತಪಿಸುವಂತಾಗಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಮಳೆ ಬರುವ ಸಾಧ್ಯತೆ ಇದ್ದು, ಸಮಸ್ಯೆ ಕಡಿಮೆಯಾಗಬಹುದು ಎಂದರು.ದಪ್ಪರ್ತಿಯಿಂದ ಕೊಂಡಾವಲಹಳ್ಳಿವರೆವಿಗೂ ಸಂಪರ್ಕವಿರುವ ರಸ್ತೆಯನ್ನು ನವೀಕರಿಸಿ ಡಾಂಬರೀಕರಣ ಮಾಡಲು ಈಗಾಗಲೇ ಕೇಂದ್ರ ಸಚಿವ ವೀರಪ್ಪಮೊಯ್ಲಿ ಗಮನಕ್ಕೆ ತಂದಿದ್ದು, ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ನೀಡಿದ ಅರ್ಜಿಗಳನ್ನು ವೀಕ್ಷಿಸಿ ಗ್ರಾಮಸ್ಥರ ಮನವಿಯಂತೆ ತಾಲ್ಲೂಕಿನಾದ್ಯಂತ ಮೇವಿನ ಕೊರತೆ ನೀಗಿಸುವ ಉದ್ದೇಶದಿಂದ ಉಚಿತವಾಗಿ ಮೇವನ್ನು ನೀಡಿ ನಂತರ ಗೋಶಾಲೆ ಸ್ಥಾಪಿಸಲು ಮೇಲಾಧಿಕಾರಿಗಳಿಗೆ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.ದಪ್ಪರ್ತಿ ಕಂದಾಯ ವೃತ್ತವನ್ನು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಗ್ರಾಮ ಪಂಚಾಯತಿಯನ್ನಾಗಿ ಮಾರ್ಪಾಡು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.ಗ್ರಾಮ ಪಂಚಾಯತಿ ಸದಸ್ಯ ನಂಜುಂಡಪ್ಪ ಮಾತನಾಡಿ, ದಪ್ಪರ್ತಿ ಗ್ರಾಮಕ್ಕೆ ಸೇರಿದ ಪಹಣಿಯಲ್ಲಿ ಖಾಸಗಿ ವ್ಯಕ್ತಿಗಳ ಹೆಸರು ಬರುತ್ತಿದ್ದು, ಅವುಗಳನ್ನು ತೆಗೆದು ಗ್ರಾಮದ ಬಡಾವಣೆ ಎಂದು ನಮೂದಿಸಬೇಕು ಹಾಗೂ ಗ್ರಾಮಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಾಮರ್ಥ್ಯವಿರುವ ವಿದ್ಯುತ್‌ನ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು ಎಂದು ತಿಳಿಸಿದರು.

 

ಸಿಪಿಎಂನ ಗ್ರಾಮ ಪಂಚಾಯತಿ ಸದಸ್ಯ ಮುರಳಿ ಮಾತನಾಡಿ, ಈಗಾಗಲೇ ಮಳೆಗಾಲ ಆರಂಭವಾಗಿದ್ದು, ರಸ್ತೆಗಳು ಹದೆಗಟ್ಟಿರುವ ಕಾರಣ ಮಳೆಯ ನೀರು ರಸ್ತೆಯಲ್ಲಿ ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದಪ್ಪರ್ತಿ ಕ್ರಾಸ್‌ನಿಂದ ದಪ್ಪರ್ತಿ ಗ್ರಾಮದವರೆಗೆ ರಸ್ತೆಯನ್ನು ಆದಷ್ಟು ಬೇಗ ದುರಸ್ತಿಗೊಳಿಸಬೇಕು ಎಂದರು.ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸಮಾಜ ಕಲ್ಯಾಣಾಧಿಕಾರಿ ರಾಜಶೇಖರ್ ಮಾತನಾಡಿ, ತಾಲ್ಲೂಕಿನಲ್ಲಿ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿನಿಯರ ಶೈಕ್ಷಣಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯವನ್ನು ಮಂಜೂರು ಮಾಡಿದ್ದು, ಈಗಾಗಲೆ ಅರ್ಜಿಗಳ ವಿತರಣೆ ಹಾಗೂ ಸ್ವೀಕೃತಿ ಆರಂಭವಾಗಿದ್ದು, ಖುದ್ದಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪಡೆಯಬಹುದು ಎಂದು ತಿಳಿಸಿದರು.ಜನಸ್ಪಂದನದಲ್ಲಿ ತಾಲ್ಲೂಕು ಕಚೇರಿಯ ಗ್ರೇಡ್-2 ತಹಶೀಲ್ದಾರ್ ನಂಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಸಿ. ರವಿಕುಮಾರ್, ಸಿಡಿಪಿಒ ಎಸ್.ಸಿದ್ದಲಿಂಗಪ್ಪ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಜ್ಯೋತಿಪ್ರಕಾಶ್, ರೇಷ್ಮೆ ಇಲಾಖೆಯ ಮಂಜುನಾಥ ಹೆಗಡೆ, ಕೃಷಿ ಇಲಾಖೆ ನರಸರಾಜು, ತೋಟಗಾರಿಕೆ ಇಲಾಖೆಯ ರವಿಕುಮಾರ್ ಸೇರಿದಂತೆ ತಾಲ್ಲೂಕಿನ ಎಲ್ಲ ಅಧಿಕಾರಿಗಳು ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry