ಸೋಮವಾರ, ಮೇ 23, 2022
21 °C

ಕುಡಿಯುವ ನೀರಿನತ್ತ ನಿಗಾ ವಹಿಸಿ: ಅಡಿವೆಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೂಡಿ ಕೆಲಸ ಮಾಡೋಣ. ಅಭಿವೃದ್ಧಿ ಕೆಲಸಗಳ ಜೊತೆಗೆಯೇ ಜನರ ಸಮಸ್ಯೆಗಳಿಗೂ ಸ್ಪಂದಿಸಿ ಸಹಕರಿಸಬೇಕು” ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಡಿವೆಪ್ಪ ಮನಮಿ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಚಕ್ಕಡಿಯ ಎರಡು ಗಾಲಿಗಳಿದ್ದಂತೆ, ಜಿಲ್ಲೆಯ ಅಭಿವೃದ್ಧಿಗೆ ಸಮನ್ವಯದಿಂದ ಕೆಲಸ ಮಾಡುವ ಅವಶ್ಯಕತೆ ಇದೆ ಎಂದರು.ಮುಂಬರುವ ಬೇಸಿಗೆ ಹಂಗಾಮಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನಿರಿನ ಸಮಸ್ಯೆ ಆಗದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು. ‘ಕುಡಿಯುವ ನೀರು ಪೂರೈಕೆ ಯೋಜನೆ ಕುರಿತಂತೆ ಕುಂದಗೋಳ ತಾಲ್ಲೂಕಿನ ಪೂರ್ವಭಾಗದ 14 ಹಳ್ಳಿಗಳಿಗೆ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಕರೇಸೂರ ಬಳಿ ಜಲಸಂಗ್ರಹಾಲಯ ನಿರ್ಮಾಣಕ್ಕೆ 30 ಎಕರೆ ಜಮೀನು ಗುರುತಿಸಲಾಗಿದೆ. ಸುಮಾರು 12 ಕೋಟಿ ರೂ. ವೆಚ್ಚದ ಈ ಯೋಜನೆ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಜೂನ್ ತಿಂಗಳಲ್ಲಿ ಈ ಕಾಮಗಾರಿ ಆರಂಭಗೊಳ್ಳಲಿದೆ. ಸರ್ಕಾರದಿಂದ ಆಡಳಿತಾತ್ಮಕ ಅನುಮತಿ ನಿರೀಕ್ಷಿಸಲಾಗಿದೆ. ನವಲಗುಂದ ತಾಲ್ಲೂಕಿನ 11 ಗ್ರಾಮಗಳು, ಹುಬ್ಬಳ್ಳಿಯ 3 ಗ್ರಾಮಗಳಿಗೆ ಇದೇ ಯೋಜನೆ ಮೂಲಕ ನೀರು ಪೂರೈಸಲು ಯೋಜಿಸಲಾಗಿದೆ. ಈ ಪೈಕಿ 8 ಗ್ರಾಮಗಳ ನೀರು ಪೂರೈಕೆ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ಈ ಕಾಮಗಾರಿಗಳ ಟೆಂಡರ್ ಕರೆಯಲಾಗಿದೆ’ ಎಂದು ಜಲನಿರ್ಮಲ ಯೋಜನೆ ಉಪವ್ಯವಸ್ಥಾಪಕ ಆರ್.ಜಿ. ನಾಯಕ ಸಭೆಗೆ ತಿಳಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಶಿಖಾ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆ ಮಾಡಿ ಫೆಬ್ರುವರಿ ಹಾಗೂ ಮಾರ್ಚ ತಿಂಗಳುಗಳು ತುಂಬಾ ನಿರ್ಣಾಯಕ ಸಮಯವಾಗಿವೆ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ತೀವ್ರಗತಿಯನ್ನು ಸಾಧಿಸಿ ಆರ್ಥಿಕ ಮತ್ತು ಭೌತಿಕ ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಸೂಚಿಸಿದರು.ಧಾರವಾಡ ಜಿಪಂಗೆ ರಾಷ್ಟ್ರೀಯ ಪುರಸ್ಕಾರ ದೊರೆಯಲು ಕಾರಣಕರ್ತರಾದ ಎಲ್ಲ ಅನುಷ್ಠಾನ ಅಧಿಕಾರಿಗಳನ್ನೂ ಅಭಿನಂದಿಸಿದರು. ಸಂಪೂರ್ಣ ಸ್ವಚ್ಛತಾ ಆಂದೋಲನದಲ್ಲಿ ಜಿಲ್ಲೆಯ ಪ್ರತಿಯೊಂದು ಕುಟುಂಬದವರು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಬಿಪಿಎಲ್ ಕಾರ್ಡುದಾರರಿಗೆ 3000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಸಾರ್ವಜನಿಕ ಪಡಿತರ ವಿತರಣಾ ಪದ್ಧತಿಯಡಿ ಕಳೆದ ತಿಂಗಳು ಆಹಾರಧಾನ್ಯಗಳನ್ನು ಎತ್ತುವರಿ ಮಾಡಿ ವಿತರಿಸಲಾಗಿದೆ. ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲು ಅವುಗಳನ್ನು ಹೊಂದಿದವರು ತಾವು ವಾಸವಾಗಿರುವ ವಿದ್ಯುತ್ ಬಿಲ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ/ಆಸ್ತಿ ಖಾತಾ ಸಂಖ್ಯೆಗೆ ಹೊಂದಾಣಿಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಗ್ರಾಮೀಣ ಪ್ರದೇಶವೂ ಸೇರಿದಂತೆ ನಗರದಲ್ಲಿ ಈ ಪ್ರಕ್ರಿಯೆಯ ಕೊನೆಯ ದಿನಾಂಕವನ್ನು ಫೆ. 19ರ ವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ತಿಳಿಸಿದರು.ಸಭೆಯಲ್ಲಿ ಆರೋಗ್ಯ, ಕೃಷಿ, ಬಡತನ ನಿವಾರಣೆ, ಜಲಾನಯನ, ಸಹಕಾರ, ತೋಟಗಾರಿಕೆ, ಶಿಕ್ಷಣ, ರೇಷ್ಮೆ, ಮೀನುಗಾರಿಕೆ, ವಯಸ್ಕರ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಜಿಪಂ ಉಪಾಧ್ಯಕ್ಷೆ ಮುಮ್ತಾಜಬಿ ನದಾಫ, ಮುಖ್ಯ ಯೋಜನಾಧಿಕಾರಿ ಪವಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.