ಸೋಮವಾರ, ಮೇ 23, 2022
28 °C

ಕುಡಿಯುವ ನೀರಿನ ಅಭಾವದ ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ಬೇಸಿಗೆ ಆರಂಭದಲ್ಲಿಯೇ ತಾಲ್ಲೂಕಿನ ವಿವಿಧ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾದರೂ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮುಂಜಾಗೃತಾ ಕ್ರಮಕ್ಕೆ ಮುಂದಾಗದೆ ಇರುವುದರಿಂದ ಪ್ರತಿನಿತ್ಯ ನೀರಿನ ತೊಂದರೆಯಿಂದ ನರಳುವಂತಾಗಿದೆ. ಯಾವುದೇ ಕಾರಣಕ್ಕೂ ಜನರಿಗೆ ನೀರಿನ ತೊಂದರೆ ಎದುರಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಕಳೆದ ಜನವರಿ 30 ರಂದು ಜಿಲ್ಲಾಧಿಕಾರಿಗಳು ಪಟ್ಟಣದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಬಂಧಿಸಿದ ತಹಸೀಲ್ದಾರರು ಸೇರಿದಂತೆ ಜಿ.ಪಂ. ಮತ್ತು ತಾ.ಪಂ. ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರೂ ಈಗ ಅಪಸ್ವರ ಕಂಡು ಬಂದಿದೆ.ವರ್ಷಪೂರ್ತಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿಯೇ ಹಂತ, ಹಂತವಾಗಿ ಹಣ ಬಿಡುಗಡೆಮಾಡುವ ಜತೆಗೆ ಅದರ ನಿರ್ವಣೆಗಾಗಿ ತಾಲ್ಲೂಕು ಮಟ್ಟದ ಸಮಿತಿ ರಚಿಸಿ ಕಟ್ಟುನಿಟ್ಟಿನ ನಿಯಮಗಳು ರೂಪಿಸಿದರೂ ಕೇವಲ ಕಚೇರಿಯ ಕಡತದಲ್ಲಿ ಉಳಿಯುವಂತಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ಅಂತರ್ಜಲ ಕುಸಿದಿದೆ. ಹಳೆಯ ಬಾವಿ ಮತ್ತು ಬೋರ್‌ವೆಲ್‌ಗಳು ಬತ್ತಿಹೋಗಿ ಕುಡಿಯುವ ನೀರಿಗಾಗಿ  ತೊಂದರೆ ಪಡುವಂತಾಗಿದೆ.ಈಗಾಗಲೇ ನೀರಿನ ಹಾಹಾಕಾರ ಸೃಷ್ಟಿಯಾಗಿ ಚಿಕ್ಕಬೂದೂರು, ಸಲಿಕ್ಯಾಪೂರು, ಮಶಿಹಾಳ, ಬೂದೂರು, ಹಿರೇಬುದೂರು, ಹದ್ದಿನಾಳ, ಅಮರಾಪೂರ, ಯರಮಸಾಳ, ಹಂಚಿನಾಳ, ಗುಂಟ್ರಾಳ, ಸೂಗುರಾಳ, ಹಿರೇರಾಯಕುಂಪಿ ಹಾಗೂ ಕಮದಾಳ, ಮಸೀದಾಪೂರ, ತಿಪ್ಪಲದಿನ್ನಿ, ಹಿರೇಕೂಡ್ಲಗಿ ಗ್ರಾಮಗಳಲ್ಲಿ ನೀರಿನ ತೊಂದರೆ ಕಾಣಿಸಿಕೊಂಡಿದೆ. ದೂರದಲ್ಲಿ ಬರುವ ಹಳ್ಳಕ್ಕೆ ಹೋಗಿ ತಾಸು ಗಟ್ಟಲೇ ಕುಳಿತು ಚಿಲುಮೆ ನೀರು ತಂದು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಗ್ರಾಮಸ್ಥರ ಅಳಲು.ಈ ಗ್ರಾಮಗಳಲ್ಲಿ ಪ್ರತಿ ವರ್ಷ ಇದೆ ಸಮಸ್ಯೆ ಎದುರಾಗುತ್ತಿದ್ದು, ಯರಮಸಾಳ, ಹಂಚಿನಾಳ, ಸೂಗುರಾಳ ಹಾಗೂ ಅಮರಾಪುರ ಗ್ರಾಮಗಳಲ್ಲಿ ಇರುವ ಬೋರ್‌ವೆಲ್‌ಗಳಲ್ಲಿ ಪ್ಲೋರೈಡ್ ಮಿಶ್ರಿತ ವಿಷಯುಕ್ತ ನೀರು ಇದೆ. ಇವೆ ನೀರನ್ನು ಅನಿವಾರ್ಯವೆಂದು ಕುಡಿಯುತ್ತಿರುವ ಗ್ರಾಮಸ್ಥರು ಕೀಲು, ಸೊಂಟ ನೋವಿನಿಂದ ಬಳುಲುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಂಡುಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಆದರೆ ಜನರ ತೊಂದರೆ ಮಾತ್ರ ಯಾರು ಕೇಳದಂತಾಗಿದೆ.ವರ್ಷಪೂರ್ತಿ ನೀರಿನ ತೊಂದರೆ ಇರುವ ಚಿಕ್ಕಬೂದೂರು ಗ್ರಾಮಸ್ಥರು, ಅತಿಥಿಗಳಿಗೆ ಬೇಸಿಗೆಯಲ್ಲಿ ತಮ್ಮ ಮನೆಗೆ ಬರದಂತೆ ನೇರವಾಗಿ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಹತ್ತಾರು ವರ್ಷಗಳಿಂದ ಕಾಡುತ್ತಿದ್ದರೂ ಪರಿಹಾರ ಇಲ್ಲದಂತಾಗಿದೆ. ಆರೋಪ: ಸದರಿ ಗ್ರಾಮಗಳಿಗೆ 2003-04 ಮತ್ತು 2004-05ನೇ ಸಾಲಿನ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಾಗಿ ಹಣ ಮಂಜೂರಾದರೂ ಕಾಮಗಾರಿ ಕಾಣುತ್ತಿಲ್ಲ. ಕೆಲವು ಕಡೆ ಕಾಮಗಾರಿ ನಿರ್ವಹಿಸಿದರೂ ಕಳಪೆ ಕಾಮಗಾರಿಯಿಂದಾಗಿ ಜನರಿಗೆ ನೀರು ತಲುಪಿಲ್ಲ.ಆದರೆ ಕಾಮಗಾರಿ ಕೈಗೆತ್ತಿಕೊಂಡ ವ್ಯಕ್ತಿ ವಿರುದ್ಧ ಮಾತ್ರ ಸಂಬಂಧಿಸಿದ ಇಲಾಖೆ ಮುಂದಾಗದೆ ಮೌನ ವಹಿಸಿರುವುದರಿಂದ ಸಮಸ್ಯೆ ಮಾತ್ರ ತಪ್ಪುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ವ್ಯವಸ್ಥೆ ಇಲ್ಲ: ಬೇಸಿಗೆ ಆರಂಭವಾಗಿದೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗ್ರಾಮಗಳಲ್ಲಿ ಮಾತ್ರ ಯಾವುದೇ ವ್ಯವಸ್ಥೆ ಮಾತ್ರ ಕಂಡು ಬಂದಿಲ್ಲ. ಕುಡಿಯುವ ನೀರಿನ ಸಮಸ್ಯೆ ನಿರ್ವಾಹಣೆಗಾಗಿ ಸಮಿತಿ ರಚಿಸಲಾಗಿದ್ದರೂ ಜನರ ತೊಂದರೆ ಮಾತ್ರ ಕೇಳುವರು ಇಲ್ಲದಂತಾಗಿದೆ ಎಂದು ಹಲವು ಗ್ರಾಮಸ್ಥರು ಆಪಾದಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.