ಕುಡಿಯುವ ನೀರಿನ ಅಭಾವ: ಆಕ್ರೋಶ

7
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

ಕುಡಿಯುವ ನೀರಿನ ಅಭಾವ: ಆಕ್ರೋಶ

Published:
Updated:

ಚಿಕ್ಕೋಡಿ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆಯಲ್ಲಿ ಆಗುತ್ತಿರುವ ಅವ್ಯವಹಾರಗಳನ್ನು ತಡೆಗಟ್ಟಬೇಕು. ಅರ್ಹ ಫಲಾನುಭವಿಗಳಿಗೆ ಮಾಸಾಶನ ನೀಡಬೇಕು.

ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಸೇರಿದಂತೆ ಹತ್ತಾರು ಸಮಸ್ಯೆಗಳ ಕುರಿತು ಮಂಗಳವಾರ ನಡೆದ ತಾಪಂನ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳನ್ನು ಆಗ್ರಹಿಸಿದರು.ತಾ.ಪಂ. ಅಧ್ಯಕ್ಷ ಸುನೀಲ ಸಂಕಪಾಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಉಮರಾಣಿ, ಬೆಳಕೂಡ, ಡೋನವಾಡ, ಜೈನಾಪುರ, ಮಾಂಗನೂರ, ಹತ್ತರವಾಟ, ನಾಗರಮುನ್ನೋಳ್ಳಿ, ಚಿಕ್ಕೋಡಿ ರೋಡ, ಕರೋಶಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

ಕೂಡಲೇ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕೆಲವೆಡೆ ಎರಡು ಟ್ಯಾಂಕ್ ನೀರು ಹಾಕಿ ನಾಲ್ಕು ಟ್ಯಾಂಕ್‌ನ ಬಿಲ್ ತೆಗೆಯುವುದು ಕಂಡುಬಂದಿದೆ. ಕೂಡಲೇ ಇಂತಹ ಅವ್ಯವಹಾರವನ್ನು ತಡೆಗಟ್ಟಬೇಕು ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಉಸ್ತುವಾರಿಗಾಗಿ ಪ್ರತ್ಯೇಕ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು ಎಂದು ತಾ.ಪಂ. ಸದಸ್ಯರು ತಹಶೀಲ್ದಾರ ರಾಜಶೇಖರ ಡಂಬಳ ಅವರನ್ನು ಆಗ್ರಹಿಸಿದರು.`ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಮಳೆ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಯಾವುದೇ ಗ್ರಾಮದಲ್ಲಿ ನೀರಿನ ತೊಂದರೆ ಉಂಟಾದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ.

ಅಂಗವಿಕಲ, ವೃದ್ಧಾಪ್ಯ ಮತ್ತು ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದ 60 ದಿನಗಳ ಒಳಗಾಗಿ ಅವರಿಗೆ ಮಾಸಾಶನ ಸಿಗುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹೊಸದಾಗಿ 300 ಅರ್ಜಿಗಳಿಗೆ ಮಾಸಾಶನ ನೀಡಲಾಗಿದೆ' ಎಂದು ತಹಶೀಲ್ದಾರ ರಾಜಶೇಖರ ಡಂಬಳ ಸ್ಪಷ್ಟಪಡಿಸಿದರು.ತಾಲ್ಲೂಕಿನ ಜಾಗನೂರ ಗ್ರಾಮದಲ್ಲಿ ಹೊಸ ಟಿಸಿ ಅಳವಡಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಹೇಳಿದರೂ ಸಹ ಅಧಿಕಾರಿಗಳು ಇತ್ತಕಡೆ ಗಮನಹರಿಸುತ್ತಿಲ್ಲ ಎಂದು ಜಾಗನೂರ ತಾ.ಪಂ.ಸದಸ್ಯ ರಾಜೇಶ ಶಿರಗೂರ ಆರೋಪಿಸಿದರು.ಇದಕ್ಕೆ ಹೆಸ್ಕಾಂ ಅಧಿಕಾರಿಗಳು ಬರುವ ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು. ಅದರಂತೆ ಡೋಣೆವಾಡಿ ಮತ್ತು ಕಾರದಗಾ ಗ್ರಾಮದಲ್ಲಿ 11 ಫಲಾನುಭವಿಗಳಿಗೆ ಭಾಗ್ಯಜ್ಯೊತಿ ವಿದ್ಯುತ್ ನೀಡಿಲ್ಲ ಎಂದು ಕಾರದಗಾ ತಾ.ಪಂ.ಸದಸ್ಯ ವನಿತಾ ಸಪ್ತಸಾಗರೆ ಆರೋಪಿಸಿದರು. ಇದಕ್ಕೆ ಸದಲಗಾ ಹೆಸ್ಕಾಂ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.ಸಭೆ ಆರಂಭವಾಗುವ ಮುನ್ನ ಎಲ್ಲ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗದ ಹಿನ್ನಲೆಯಲ್ಲಿ ತಾ.ಪಂ.ಸದಸ್ಯರು ಒಂದು ಗಂಟೆ ಸಭೆಯನ್ನು ಬಹಿಷ್ಕರಿಸಿದರು.ಉಪಾಧ್ಯಕ್ಷ ಸುರೇಖಾ ಕೆಂಚನ್ನವರ, ಸದಸ್ಯರಾದ ವಿಲಾಸ ಮಾಳಗೆ, ವಿಕ್ರಂ ಬನಗೆ, ಭೀಮಶಿ ನೇರ್ಲಿ, ಬಾಜಿರಾವ ಮಾದಿಗ, ನಿವೇದಿತಾ ಕಪಲಿ, ವೃಷಭ ಕಣಗಲೆ, ಮಲ್ಲವ್ವ ಘರಬುಡೆ, ರಾಜಶ್ರೀ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ತಾ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಬಿರಾದಾರ ಪಾಟೀಲ ಸ್ವಾಗತಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry