ಕುಡಿಯುವ ನೀರಿನ ಪೂರೈಕೆಗೆ ತೊಡಕು

7

ಕುಡಿಯುವ ನೀರಿನ ಪೂರೈಕೆಗೆ ತೊಡಕು

Published:
Updated:
ಕುಡಿಯುವ ನೀರಿನ ಪೂರೈಕೆಗೆ ತೊಡಕು

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ದುಬಾರಿ ವೆಚ್ಚದ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ತಳಭಾಗ ಕುಸಿಯುವ ಭೀತಿ ಎದುರಾಗಿದೆ.ಇಲ್ಲಿನ ಪುರಸಭೆ ವತಿಯಿಂದ ಈ ಹಿಂದೆ ರಸ್ತೆಯಡಿ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಕುಡಿಯುವ ನೀರಿನ  ಪೈಪ್‌ಗಳು ಒಡೆದು ಹೋಗಿರುವ ಹಿನ್ನೆಲೆಯಲ್ಲಿ ನೀರಿನ ಪೂರೈಕೆಗೆ ಅಡ್ಡಿಯಾಗಿದೆ. ಇಲ್ಲಿನ ಶಾಂತಿ ಅಂಗಡಿ, ಕೈಕಂಬ ಮತ್ತಿತರ ಕಡೆಗಳಿಗೆ ಹಲವಾರು ದಿನಗಳಿಂದ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಇತ್ತೀಚೆಗೆ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇನ್ನೊಂದೆಡೆ ಬೂಡಾ ಅಧ್ಯಕ್ಷ ಎ.ಗೋವಿಂದ ಪ್ರಭು ಸಹಿತ ಚತುಷ್ಪತ ಮತ್ತು ಮೇಲ್ಸೇತುವೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ಇರ್ಕಾನ್ ಸಂಸ್ಥೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.ಒಂದೆಡೆ ಪೂರ್ಣಗೊಳ್ಳದ ಮೇಲ್ಸೇತುವೆ ತಡೆಗೋಡೆ ನಿರ್ಮಾಣ ಕಾಮಗಾರಿ ಹಾಗೂ ಇನ್ನೊಂದೆಡೆ ಭರದಿಂದ ಮತ್ತೆ ಪುನರಾರಂಭಗೊಂಡಿರುವ ಮೇಲ್ಸೇತುವೆ ಡಾಂಬರೀಕರಣ. ಇದೀಗ ಮೇಲ್ಸೇತುವೆ ತಳಭಾಗದಲ್ಲಿ ಅಪೂರ್ಣಗೊಂಡಿರುವ ಸರ್ವಿಸ್ ರಸ್ತೆಯನ್ನು ಕುಡಿಯುವ ನೀರಿನ ಪೈಪ್ ಅಳವಡಿಸುವುದಕ್ಕಾಗಿ ಜೆಸಿಬಿ ಮೂಲಕ ಕೊರೆಯಲಾಗಿತ್ತು. ದಿನೇ ದಿನೇ ವಾಹನದಟ್ಟಣೆಯಿಂದಾಗಿ ಈ ಹೊಂಡ ಕುಸಿದು ವಿಸ್ತಾರಗೊಂಡಿದೆ. ಮಾತ್ರವಲ್ಲದೆ ಮೂರ್ನಾಲ್ಕು ಕಾರ್ಮಿಕರು ಜೀವದ ಹಂಗು ತೊರೆದು ಸುಮಾರು 25 ಅಡಿಗೂ ಮಿಕ್ಕಿ ಆಳವಾದ ಹೊಂಡದಲ್ಲಿ ಪೈಪ್ ಜೋಡಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.ಇಲ್ಲಿನ ಮೇಲ್ಸೇತುವೆ ಅಡಿಯಲ್ಲಿ ನಿರ್ಮಿಸಲಾದ ಆಧಾರಸ್ಥಂಭ (ಪಿಲ್ಲರ್) ಮತ್ತು ಮೇಲ್ಸೇತುವೆ ಸಂಪರ್ಕದಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆಯೂ ವದಂತಿ ಹರಡಿದ್ದು, ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

 ಮೋಹನ್ ಕೆ.ಶ್ರೀಯಾನ್   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry