ಕುಡಿಯುವ ನೀರಿನ ಪೈಪಿನಲ್ಲಿ ಚರಂಡಿ ನೀರು: ಆತಂಕ

7

ಕುಡಿಯುವ ನೀರಿನ ಪೈಪಿನಲ್ಲಿ ಚರಂಡಿ ನೀರು: ಆತಂಕ

Published:
Updated:
ಕುಡಿಯುವ ನೀರಿನ ಪೈಪಿನಲ್ಲಿ ಚರಂಡಿ ನೀರು: ಆತಂಕ

ಹಟ್ಟಿ ಚಿನ್ನದ ಗಣಿ: ಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅಬ್ದುಲ್ಲಾ ಕಾಲೊನಿಯಲ್ಲಿ ನೀರು ಸರಬರಾಜು ಮಾಡುವ ಪೈಪ್ ಲೈನ್‌ನಲ್ಲಿ ಚರಂಡಿ ನೀರು ಸೇರಿಕೊಳ್ಳುತ್ತಿರುವುದರಿಂದ ನಿವಾಸಿಗಳು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.ಏಳೆಂಟು ತಿಂಗಳಿಂದ ಚರಂಡಿ ನೀರು ಕುಡಿಯುವ ನೀರಿನ ಪೈಪ್ ಲೈನ್‌ನಲ್ಲಿ ಸೇರಿಕೊಳ್ಳುತ್ತಿದೆ. ನೀರು ಬಿಟ್ಟ ಸಂದರ್ಭದಲ್ಲಿ ಆರಂಭದಲ್ಲಿ ಹದಿನೈದು ನಿಮಿಷ ನಳದ ನೀರು ಹಾಗೆ ಹರಿಬಿಟ್ಟು ನಂತರ ನೀರು ತುಂಬಿಕೊಳ್ಳಬೇಕು. ನೀರಿನಲ್ಲಿ ಗಬ್ಬು ವಾಸನೆ ಬರುತ್ತಿರುವುದರಿಂದ ಬಟ್ಟೆ, ಪಾತ್ರೆ ತೊಳೆಯಲು ಸಹ ಯೋಗ್ಯವಿಲ್ಲ.

ಉಳ್ಳವರು ಈ ನೀರನ್ನು ಬಳಸದೆ ವೈಯಕ್ತಿಕ ಕೊಳವೆಬಾವಿಗಳನ್ನು ಕೊರೆಸಿಕೊಂಡಿದ್ದಾರೆ. ಆದರೆ ಬಡಜನರು ಅನಿವಾರ್ಯವಾಗಿ ಇದೇ ಕೊಳಚೆ ನೀರು ಉಪಯೋಗಿಸಬೇಕು. ಈ ನೀರಿನಿಂದ ಸ್ನಾನ ಮಾಡಿದರೆ ಮಕ್ಕಳಲ್ಲಿ ಚರ್ಮ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅಲ್ಲದೆ ಬೇರೆ ರೋಗಗಳು ಹರಡುವ ಭೀತಿ ಕಾಡುತ್ತಿದೆ. ಪೈಪ್‌ಲೈನ್ ಬದಲಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತರಲಾಗಿದೆ.

ಕಳೆದ ಏಳೆಂಟು ತಿಂಗಳಿಂದ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.  ಗ್ರಾಪಂ. ಅಧ್ಯಕ್ಷರ ಹಾಗೂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಆದರೆ ಇಲ್ಲಿವರೆಗೆ ಯಾವ ಕ್ರಮ ಜರುಗಿಸಿಲ್ಲ.

ಇತ್ತೀಚೆಗೆ ಗ್ರಾಮದಲ್ಲಿ ಡೆಂಗೆ ಜ್ವರದಿಂದ ಮಗುವೊಂದು ಮೃತ ಪಟ್ಟಿದ್ದು ಹಾಗೂ ಬಹಳಷ್ಟು ಶಂಕಿತ ಡೆಂಗೆ ಪ್ರಕರಣಗಳು ಜನತೆಯನ್ನು ಮತಷ್ಟು ಆತಂಕ ಪಡುವಂತೆ ಮಾಡಿದೆ.

ವೈದ್ಯಾಧಿಕಾರಿಗಳು ಸುತ್ತಮುತ್ತಲಿನ ಪರಿಸರ ಸ್ವಚ್ಛ ಇಡುವಂತೆ ಸಲಹೆ ನೀಡುತ್ತಾರೆ. ಆದರೆ ಕಾಲೊನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಎಲ್ಲಂದರಲ್ಲಿ ಚರಂಡಿ ನೀರು ನಿಂತು ದುರ್ವಾಸನೆ ಇಟ್ಟು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದೇವೆ ಎಂದು ನಿವಾಸಿಗಳು ಗೋಳು ಇಡುತ್ತಾರೆ.ಜಿಲ್ಲಾಡಳಿತ ಮುಂದಾಗಿ ಬಡಾವಣೆಯಲ್ಲಿ ಚರಂಡಿ, ರಸ್ತೆ ಮತ್ತು ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry