ಸೋಮವಾರ, ಮಾರ್ಚ್ 8, 2021
19 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲ್‌ ಸೂಚನೆ

ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ

ಶಿವಮೊಗ್ಗ: ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ನೆಪ ಹೇಳದೆ ಅಧಿಕಾರಿಗಳು ಕಾರ್ಯೋನ್ಮಖರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮತ್ತಿತರ ವಿಷಯಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಸರ್ಕಾರ, ಜಿಲ್ಲೆಗೆ ₨ 3.75 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಪ್ರತಿ ತಾಲ್ಲೂಕಿಗೆ ₨ 42ಲಕ್ಷದಂತೆ ಹಣ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಆದ್ಯತೆ ಮೇರೆಗೆ ಕುಡಿಯುವ ನೀರಿನ ಕಾಮಗಾರಿಗೆ ಬಳಸಿಕೊಂಡು ಸಮಸ್ಯೆ ತಲೆದೋರದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.ಪ್ರಸ್ತುತ ರಚಿಸಲಾಗಿರುವ ವಿವಿಧ ಸಮಿತಿ ಕಾರ್ಯಪಡೆಗಳು ಮುಂದಿನ ನಾಲ್ಕು ವಾರದ ಒಳಗೆ ತೀವ್ರ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದ ಅವರು, ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು, ಎಂಜಿನಿಯರ್ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿಗಳು ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದ ಅವರು, ವಿದ್ಯುತ್ ಸಂಪರ್ಕ ಸೇರಿದಂತೆ ಬೇಸಿಗೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಬಾರದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಬೋರ್‌ವೆಲ್‌ಗಳ ವೈಫಲ್ಯಕ್ಕೆ ಸಮೀಪದಲ್ಲೇ ಇರುವ ಅನಧಿಕೃತ ಖಾಸಗಿ ಬೋರ್‌ವೆಲ್‌ಗಳು ಕಾರಣವಾಗಿರುವ ಸಾಧ್ಯತೆಗಳಿದ್ದು, ಕುಡಿಯುವ ನೀರಿನ ಸಲುವಾಗಿ ಅಂತಹ ಬೋರ್‌ವೆಲ್ ಗಳನ್ನು ಬಳಸಿಕೊಳ್ಳಲು ತಹಶೀಲ್ದಾರರು ಮುಂದಾಗಬೇಕು ಎಂದು ಸೂಚಿಸಿದರು.ಸಾರ್ವಜನಿಕ ಕುಡಿಯುವ ನೀರಿನ ಬೋರ್‌ವೆಲ್  ಇರುವ ಕನಿಷ್ಠ 500 ಮೀಟರ್ ಅಂತರದಲ್ಲಿ ಖಾಸಗಿ ಕೊಳವೆ ಬಾವಿ ಕೊರೆಯುವಂತಿಲ್ಲ. ಆದರೆ, ಇಂತಹ ಪ್ರಕರಣಗಳು ಇರುವುದರಿಂದ ಅಂತಹ ಕೊಳವೆ ಬಾವಿಯನ್ನು ಕನಿಷ್ಠ 5 ಗಂಟೆಗಳ ಕಾಲ ಕುಡಿಯುವ ನೀರಿಗಾಗಿ ಬಳಸಿಕೊಳ್ಳಲು ಜಿಲ್ಲಾ ಪಂಚಾಯ್ತಿ ಅಡಿಯಲ್ಲಿ ಜಂಟಿ ಸುತ್ತೋಲೆ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, 2014-–15ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಒಟ್ಟು 245 ಕಾಮಗಾರಿಗಳಿಗೆ ₨ 215.8 ಕೋಟಿ  ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಪ್ರಸ್ತುತ ₨ 8.88 ಕೋಟಿ ಅನುದಾನ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.ನಗರಪ್ರದೇಶದ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸರಬರಾಜು ಪೂರ್ಣ ಪ್ರಮಾಣದಲ್ಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.