ಶನಿವಾರ, ಜೂನ್ 19, 2021
28 °C

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತದ ಪ್ರಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ತುರ್ತು ಕಾಮಗಾರಿ ಮೂಲಕ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಕೆ.ರಾಜು ಸೋಮವಾರ ಇಲ್ಲಿ ತಿಳಿಸಿದರು.ಸರ್ಕಾರ ಜಿಲ್ಲೆಯನ್ನು ಸಂಪೂರ್ಣವಾಗಿ ಬರಪೀಡಿತ ಪ್ರದೇಶವಾಗಿ ಘೋಷಿಸಿರುವುದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಸಮಸ್ಯೆ ಆಗದಂತೆ ಕಾರ್ಯಯೋಜನೆ ರೂಪಿಸಲಾಗಿದೆ. ಈಗಾಗಲೇ ತಾಲ್ಲೂಕು ಮಟ್ಟದ ಕಾರ್ಯಪಡೆಗಳು ನೀಡಿರುವ ಪ್ರಸ್ತಾವವನ್ನು ಒಗ್ಗೂಡಿಸಿ ಜಿಲ್ಲಾ ಮಟ್ಟದ ಕ್ರಿಯಾಯೋಜನೆ ರೂಪಿಸಿದ್ದು, ಸರ್ಕಾರದಿಂದ ಹಣ ಬಿಡುಗಡೆಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಪ್ರತಿ ತಾಲ್ಲೂಕಿಗೂ ಹಿರಿಯ ಅಧಿಕಾರಿಯನ್ನು ಉಸ್ತುವಾರಿಗೆ ನೇಮಿಸಲಿದ್ದು, ಎರಡು ದಿನಕ್ಕೊಮ್ಮೆ ಕುಡಿಯುವ ನೀರಿನ ಸ್ಥಿತಿಗತಿ ಕುರಿತು ವರದಿ ಮಾಡಬೇಕಾಗಿದೆ. ಮೂರು ತಿಂಗಳ ಕಾಲ ಜಿಲ್ಲೆಯಲ್ಲಿ ಎಲ್ಲೂ ಕೂಡ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.ಪ್ರಕೃತಿ ವಿಕೋಪ ನಿಧಿಯಡಿ ಸರ್ಕಾರ ರೂ. 5 ಕೋಟಿ ಹಣ ನೀಡಿದೆ. ಈ ಹಣವನ್ನು ಕೊಳವೆಬಾವಿಗಳಿಗೆ ಮೋಟರ್‌ಪಂಪ್ ಬಿಡಲು, ಸಿಸ್ಟಂ ಅಳವಡಿಸಲು, ಪೈಪ್‌ಲೈನ್ ದುರಸ್ತಿ, ಪೈಪ್‌ಲೈನ್ ವಿಸ್ತರಣೆ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಬಳಸಿಕೊಳ್ಳಲಾಗುತ್ತಿದೆ. ತೀವ್ರ ಅಭಾವ ಇರುವ ಜಿಲ್ಲೆಯ 16 ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ.ಟ್ಯಾಂಕರ್ ನೀರಿಗೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ತಾಲ್ಲೂಕಿಗೆ 2ನೇ ಕಂತಿನಲ್ಲಿ ರೂ. 5 ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.ಸಿಆರ್‌ಎಫ್ ಯೋಜನೆಯಡಿ ಗ್ರಾಮಾಂತರ ಪ್ರದೇಶದಲ್ಲಿ ರೂ. 8.48 ಕೋಟಿ, ನಗರ, ಪಟ್ಟಣ ಪ್ರದೇಶಕ್ಕೆ ರೂ. 2.46 ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದ್ದು, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ.

 

ನೀರಿನ ಅಭಾವ ಇರುವ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವ ಸಲುವಾಗಿ ಅಧಿಕಾರಿಗಳು ರಜಾ ದಿನಗಳಲ್ಲೂ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ 564 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವುದನ್ನು ಗುರುತಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಮಾತನಾಡಿ, ಕುಡಿಯುವ ನೀರಿನ ತುರ್ತು ಪರಿಹಾರ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ಜಿಲ್ಲೆಗೆ ರೂ. 7.85 ಕೋಟಿ ಬಿಡುಗಡೆ ಮಾಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ರೂ. 65 ಲಕ್ಷ ಹಣ ನೀಡಲಾಗಿದೆ. ಗಾಗಲೇ 411 ಕೊಳವೆ ಬಾವಿ ತೋಡಿಸಲಾಗಿದೆ. ಇನ್ನೂ 344 ಕೊಳವೆ ಬಾವಿ ತೋಡಿಸಲು ಬೇಡಿಕೆ ಬಂದಿದೆ ಎಂದರು.ಅಂತರ್ಜಲ ಕಡಿಮೆಯಾದ ಕೊಳವೆಬಾವಿಗಳನ್ನು ಮತ್ತಷ್ಟು ಆಳಕ್ಕೆ ಕೊರೆಸಲು ತಾ.ಪಂ. ಇಓಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ ಜಿಲ್ಲೆಗೆ ಹೆಚ್ಚುವರಿಯಾಗಿ ರೂ. 4.53 ಕೋಟಿ ಬೇಕಾಗಿದ್ದು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಿರವ ಹಣದಲ್ಲಿ ಶೇ 80ರಷ್ಟು ಖರ್ಚು ಮಾಡಿದ ಕೂಡಲೇ 2ನೇ ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಗಮನದಲ್ಲಿಟ್ಟುಕೊಂಡು ಎಲ್ಲ ಗ್ರಾಮಗಳಲ್ಲಿ ತೊಟ್ಟಿ ನಿರ್ಮಾಣಕ್ಕೆ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ 3093 ತೊಟ್ಟಿಗಳು ಇದ್ದು, ಇನ್ನೂ ಹೆಚ್ಚುವರಿಯಾಗಿ 1026 ತೊಟ್ಟಿ ನಿರ್ಮಿಸಲು ಸೂಚನೆ ನೀಡಲಾಗಿದೆ.ಅಂತರ್ಜಲ ಕುಸಿದಿದ್ದು, ಫ್ಲೋರೈಡ್ ಸಮಸ್ಯೆ ಉಲ್ಬಣಿಸಿದೆ. ಈಗಾಗಲೇ ಶಿರಾ, ಪಾವಗಡದಲ್ಲಿ 26 ಫ್ಲೋರೈಡ್ ನೀರು ಶುದ್ಧೀಕರಣ ಘಟಕ ಕಾರ್ಯನಿರ್ವಹಿಸುತ್ತಿವೆ. ಇವುಗಳ ತಾಂತ್ರಿಕ ನಿರ್ವಹಣೆಯ ಕುರಿತು ಗ್ರಾಮ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ದೊಡ್ಡಪ್ಪ ಗೋಷ್ಠಿಯಲ್ಲಿ ಹಾಜರಿದ್ದರು.ಅಕ್ರಮ ಮದ್ಯ ಮಾರಾಟ: ಕ್ರಮತುಮಕೂರು:
ಜಿಲ್ಲೆಯಲ್ಲೆಡೆ ಕಂಡು ಬಂದಿರುವ ಅಕ್ರಮ ಮದ್ಯ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿ ಮುಚ್ಚಿಸುವಂತೆ ಅಬಕಾರಿ ಡಿಸಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಎಲ್ಲೂ ಸೆಕೆಂಡ್ಸ್ ಮದ್ಯ ಮಾರಾಟ ಇಲ್ಲ.ಆದರೆ ಪರವಾನಗಿ ಇಲ್ಲದೆ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಾನೂನು ಬಾಹಿರ. ಈಗಾಗಲೇ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ಸಾಕಷ್ಟು ಜನರನ್ನು ಬಂಧಿಸಲಾಗಿದೆ ಎಂದರು.ಮತ್ತೆ 5 ಕಡೆ ಗೋಶಾಲೆ

ತುಮಕೂರು: ಜಿಲ್ಲೆಯಲ್ಲಿ ಈಗಾಗಲೇ 2 ಕಡೆ ಗೋಶಾಲೆ ತೆರೆಯಲಾಗಿದ್ದು, ಇನ್ನೂ 5 ಕಡೆ ಗೋಶಾಲೆ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಕೆ.ರಾಜು ತಿಳಿಸಿದರು.ಕ್ಯಾತ್ಸಂದ್ರ, ಪಾವಗಡ ಪಟ್ಟಣ, ರಾಯಚೆರ್ಲು, ಬೊನ್ನಪ್ಪನಗುಡಿ, ಪಟ್ಟನಾಯಕನಹಳ್ಳಿಯಲ್ಲಿ ಶೀಘ್ರ ಗೋಶಾಲೆ ಆರಂಭಿಸಲಾಗುವುದು.ಜಿಲ್ಲೆಯಲ್ಲಿ ಮೇವಿನ ಸಮಸ್ಯೆ ತೀವ್ರವಾಗಿ ಕಂಡುಬಂದಿಲ್ಲ. ಆದರೆ ರೈತರು ಮೇವು ಮಾರಲು ಸಿದ್ಧರಿಲ್ಲ. ಹೀಗಾಗಿ ಹೊರ ಜಿಲ್ಲೆ, ರಾಜ್ಯಗಳಿಂದ ಮೇವು ತರಿಸಿಕೊಳ್ಳಲು ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡ ಮೈಸೂರು, ಮಂಡ್ಯ, ರಾಯಚೂರು, ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಮೇವು ಖರೀದಿ ನಡೆಸಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.