ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸೂಚನೆ

7

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸೂಚನೆ

Published:
Updated:

ಚಳ್ಳಕೆರೆ: ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಮುಂದಿನ ತಿಂಗಳಿನಲ್ಲಿ ನಡೆಯುವ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಕುಡಿಯುವ ನೀರಿನ ಕೊರತೆ ಕಾಣದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಜೆ. ತಿಪ್ಪೇಶ್‌ಕುಮಾರ್ ಸೂಚಿಸಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಿಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ನೇರಲಗುಂಟೆ ಹತ್ತಿರ ಈಚೆಗೆ ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ ಎಂಬ ದೂರುಗಳು ಜನರಿಂದ ಬರುತ್ತಿವೆ. ಅದೇ ರೀತಿ ಸಾಣೀಕೆರೆ ಗ್ರಾಮದಲ್ಲಿ ಜನರು ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಧ್ಯಕ್ಷೆ ಎಸ್. ಹೇಮಲತಾ ಸಭೆಯ ಗಮನ ಸೆಳೆದರು.ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್, ಕೂಡಲೆ ನಮ್ಮ ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕಳುಹಿಸಿ ಪೈಪ್‌ಲೈನ್ ಅಳವಡಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಗ್ರಾಮೀಣ ಪ್ರದೇಶ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಕುಡಿಯುವ ನೀರಿನ ಕೊರತೆ ಕಂಡುಬಂದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜನರ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಕಾರ್ಯ ನಿರ್ವಹಣಾಧಿಕಾರಿ ತಿಪ್ಪೇಸ್ವಾಮಿ ಅಧಿಕಾರಿಗಳಿ ಮಾಹಿತಿ ನೀಡಿದರು."ಕಾರ್ಮಿಕ ಇಲಾಖೆ ಇನ್ಸ್‌ಪೆಕ್ಟರ್ ಕೆ.ಜೆ. ಜಯಲಕ್ಷ್ಮೀ ಮಾತನಾಡಿ, ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ನೀರಗಂಟಿಗಳಿಗೆ ವೇತನ ನೀಡುವಲ್ಲಿ ವಿಳಂಬ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ ಎಂಬ ದೂರು ಬಂದಿರುವುದರಿಂದ ಕ್ರಮಕೈಗೊಳ್ಳಬೇಕು ಎಂದು ವಿವರಿಸಿದರು.ಇಒ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿ, ಇದು ಗ್ರಾಮ ಪಂಚಾಯ್ತಿಮಟ್ಟದಲ್ಲಿ ಇರುವ ಸಮಸ್ಯೆ ಆಗಿರುವುದರಿಂದ ಕಂದಾಯ ವಸೂಲಾತಿ, ತೆರಿಗೆಯ ಹಣ ವಸೂಲಾತಿ ಮಾಡಿ ವೇತನ ನೀಡುವುದರಿಂದ ಸಮಸ್ಯೆ ಇದೆ. ಅದ್ದರಿಂದ, ಹೆಚ್ಚು ವಸೂಲಾತಿಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಬೆರಳೆಣಿಕೆಯ ಅಧಿಕಾರಿಗಳು: ಪ್ರತಿ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಾದ ಪ್ರಗತಿ ಪರಿಶೀಲನಾ ಸಭೆ ಈ ಬಾರಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಸಂಬಂಧ ವಿಳಂಬವಾಗಿದೆ. ನೂತನ ಅಧ್ಯಕ್ಷೆ ಎಸ್. ಹೇಮಲತಾ ಹಾಗೂ ಉಪಾಧ್ಯಕ್ಷ ಜೆ. ತಿಪ್ಪೇಶ್‌ಕುಮಾರ್ ನೇತೃತ್ವದಲ್ಲಿ ನಡೆದ ಮೊದಲ ಕೆಡಿಪಿ ಸಭೆಗೆ ಬಹುತೇಕ ಅಧಿಕಾರಿಗಳ ಗೈರು ಎದ್ದು ಕಾಣುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry