ಗುರುವಾರ , ಮೇ 13, 2021
18 °C

ಕುಡಿಯುವ ನೀರು ಕೊಡಿ; ಮತ್ತೇನೂ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಬರದಿಂದ ಕೆರೆಗಳು ಬತ್ತಿ ಹೋಗಿವೆ. ಕಬಿನಿ ನದಿಯಿಂದ ನೀರು ಬರುತ್ತೆ ಅಂತ ಐದು ತಿಂಗಳಿಂದ ಕಾದು ಸಾಕಾಗಿದೆ. ನಿಮ್ಮ ಸರ್ಕಾರದಿಂದ ಕುಡಿಯುವ ನೀರನ್ನಾದರೂ ಕೊಡಿ; ಮತ್ತೇನೂ ಬೇಡ~-ಹೀಗೆ ಮನವಿ ಮಾಡಿದ್ದು ಗಟ್ಟವಾಡಿಪುರ ಗ್ರಾಮಸ್ಥರು. ಬರಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಶುಕ್ರವಾರ ಭೇಟಿ ನೀಡಿದಾಗ ಕುಡಿಯುವ ನೀರಿಗೆ ಸಂಬಂಧಿಸಿದಂತೆ ತಮ್ಮ ಅಳಲು ತೋಡಿಕೊಂಡರು.ಬರ ಪರಿಸ್ಥಿತಿ ಅವಲೋಕಿಸಲು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಶನಿವಾರ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಚಿವರು ನಂಜನಗೂಡು ತಾಲ್ಲೂಕಿನ ದೊಡ್ಡಕೌಲಂದೆ, ಹಳೇಪುರ, ಗಟ್ಟವಾಡಿಪುರ, ಬಸವನಕಟ್ಟೆ, ಹೆಮ್ಮರಗಾಲ ಮತ್ತು ಮಲ್ಲಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದ ಜನ ಪ್ರತಿಭಟನೆ, ಘೇರಾವ್ ಮೂಲಕ ಸಚಿವರಿಗೆ ಬಿಸಿ ಮುಟ್ಟಿಸಿದರು.ರಾಮದಾಸ್ ಆಗಮನ ಮೊದಲೇ ತಿಳಿದಿದ್ದ ಜನತೆ ತಮ್ಮ ಆಕ್ರೋಶ ವ್ಯಕ್ತಪಡಿಸಲು ಸಕಲ ರೀತಿಯಲ್ಲೂ ಸನ್ನದ್ಧರಾಗಿದ್ದರು. ಖಾಲಿ ಬಿಂದಿಗೆಗಳೊಂದಿಗೆ ರಸ್ತೆ ಬದಿಯಲ್ಲಿ ಸಚಿವರಿಗಾಗಿ ಕಾಯುತ್ತ ಕೂತಿದ್ದರು. ಮೂಲ ಸೌಲಭ್ಯಗಳಿಂದ ವಂಚಿತರಾಗಿ ಜಿಲ್ಲಾಡಳಿತದ ವಿರುದ್ಧ ಕುದಿಯುತ್ತಿದ್ದ ಮಹಿಳೆಯರು ಸಚಿವರು ಹಾಗೂ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಖಾಲಿ ಬಿಂದಿಗೆ ಪ್ರತಿಭಟನೆ:ಸಚಿವ ರಾಮದಾಸ್ ಹಾಗೂ ಅಧಿಕಾರಿಗಳು ಗಟ್ಟವಾಡಿ ಪುರಕ್ಕೆ ಆಗಮಿಸುತ್ತಿದ್ದಂತೆ ಜನರು ದಿಢೀರ್ ಪ್ರತಿಭಟನೆ ನಡೆಸಿ ದರು. ಖಾಲಿ ಬಿಂದಿಗೆಯೊಂದಿಗೆ ಬಂದಿದ್ದ ಮಹಿಳೆಯರು ಘೋಷಣೆ ಕೂಗಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಗ್ರಾಮದಲ್ಲಿ ಐದು ಬೋರ್‌ವೆಲ್ ಇದ್ದು, ಈ ಪೈಕಿ ಎರಡು ಬೋರ್‌ವೆಲ್‌ಗಳ ಮೋಟಾರ್ ಹಾಳಾಗಿವೆ. ಕೆರೆ ಬತ್ತಿರುವುದರಿಂದ ಜಾನುವಾರುಗಳಿಗೆ ಬೋರ್‌ವೆಲ್ ನೀರು ಆಧಾರವಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನೀರಿನ ಟ್ಯಾಂಕ್ ತುಂಬುತ್ತಿಲ್ಲ. ಮಹದೇವ ನಗರದಲ್ಲಿ ನಿರ್ಮಿಸಲಾ ಗಿರುವ ಕಬಿನಿ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಐದು ತಿಂಗಳಿಂದ ನೀರು ಬರುತ್ತಿಲ್ಲ. ಆದ್ದರಿಂದ ಮೊದಲು ಸಮರ್ಪಕವಾಗಿ ನೀರು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾ.ಪಂ.ಗೆ ಹಣ ನೀಡಿ: ಹಳೇಪುರದ ಗ್ರಾಮಸ್ಥರು ಕುಡಿಯುವ ನೀರು, ರಸ್ತೆ, ಬಸ್ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರಾಮದಾಸ್ ಮಾತು ಆರಂಭಿಸುತ್ತಿದ್ದಂತೆ, ನೇರಳೆ ಗ್ರಾಮ ಪಂಚಾಯಿತಿ ಸದಸ್ಯ ವಸಂತ್ `ಗ್ರಾಮ ಪಂಚಾಯಿತಿಗಳಿಗೆ ಹಣ ಬಿಡುಗಡೆ ಮಾಡಿ.ಜನಪ್ರತಿನಿಧಿಯಾಗಿ ಜನರೆದುರು ತಲೆ ತಗ್ಗಿಸುವಂತಾ ಗಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಬಿಜೆಪಿ ಕಾರ್ಯಕರ್ತನಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ~ ಎಂದು ಅಸಹನೆ ವ್ಯಕ್ತಪಡಿಸಿದರು.

ಟ್ಯಾಂಕ್ ಬಳಿ ನೀರಿಗಾಗಿ ಕಾಯುತ್ತಿದ್ದ ಜನತೆ, ಸೈಕಲ್‌ಗಳಲ್ಲಿ ಬಿಂದಿಗೆ ಕಟ್ಟಿಕೊಂಡು ಊರ ಹೊರಗೆ ತೆರಳುತ್ತಿ ರುವುದು, ಕೊಟ್ಟಿಗೆಯಲ್ಲಿದ್ದ ಜಾನುವಾರುಗಳಿಗೆ ಬಕೆಟ್‌ಗಳಲ್ಲಿ ರೈತರು ನೀರು ಕುಡಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು. ಬತ್ತಿದ ಕೆರೆಗಳು ಬರಗಾಲಕ್ಕೆ ಸಾಕ್ಷಿಯಂತಿದ್ದವು.ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ಜಿಲ್ಲಾ ಪಂಚಾಯಿತಿ ಸಿಇಓ ಜಿ.ಸತ್ಯವತಿ, ಜಿ.ಪಂ. ಉಪಾಧ್ಯಕ್ಷ ಡಾ.ಶಿವರಾಮ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ, ತಹಶೀಲ್ದಾರ್ ನವೀನ್ ಜೋಸೆಫ್, ಶಾಸಕ ಸಿದ್ದರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಹಾಜರಿದ್ದರು.20 ಗ್ರಾಮಕ್ಕೆ ಇನ್ನೂ ತಲುಪದ ಕಬಿನಿ!

ಮೈಸೂರು: ಕಬಿನಿ ನದಿ ಮೂಲದಿಂದ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ನಂಜನಗೂಡು ತಾಲ್ಲೂಕಿನಲ್ಲಿ ಉದ್ದೇಶಿತ 20 ಹಳ್ಳಿಗಳಿಗೆ ತಲುಪಿಲ್ಲ ಎಂದು ಸಚಿವ ರಾಮದಾಸ್ ಸ್ಪಷ್ಟಪಡಿಸಿದರು.ನಂಜನಗೂಡು ತಾಲ್ಲೂಕಿನ ಬರಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ದೊಡ್ಡಕೌಲಂದೆ ಸೇರಿದಂತೆ 57 ಗ್ರಾಮಗಳಿಗೆ ಕಬಿನಿ ನೀರು ಪೂರೈಸಲು ರೂ. 21 ಕೋಟಿ ವೆಚ್ಚದಲ್ಲಿ ಮಹದೇವ ನಗರದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಆದರೆ ನೀರು ಪೂರೈಕೆ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಪೈಪ್‌ಲೈನ್ ಹಾಳಾಗಿದ್ದು, 20 ಹಳ್ಳಿಗಳಿಗೆ ನೀರು ಪೂರೈಕೆ ಸ್ಥಗಿತ ಗೊಂಡಿದ್ದು, ರೂ. 2 ಕೋಟಿ ವೆಚ್ಚದಲ್ಲಿ ಉತ್ತಮ ಗುಣ ಮಟ್ಟದ ಪೈಪ್ ಅಳವಡಿಸಲಾಗುವುದು. ಒಂದು ತಿಂಗಳಲ್ಲಿ ಈ ಕಾರ್ಯ ಮುಕ್ತಾಯವಾಗಲಿದ್ದು, ಬರಪೀಡಿತ ಹಳ್ಳಿಗ ಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.ಬರ ಪರಿಹಾರ ಕಾಮಗಾರಿಗೆ ಜಿಲ್ಲಾಡಳಿತ ಬಳಿ 4 ಕೋಟಿ ರೂಪಾಯಿ ಅನುದಾನ ಲಭ್ಯವಿದೆ. ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಕೊಳವೆ ಬಾವಿ ಕೊರೆಸಲಾಗುವುದು. ಕುಡಿಯುವ ನೀರು ಪೂರೈಕೆಗೆ ಪ್ರತಿ ಕ್ಷೇತ್ರಕ್ಕೆ ರೂ. 30 ಲಕ್ಷ ನೀಡಲಾಗುವುದು ಎಂದರು.ಮೇವು ವಿತರಣೆ

ಬರಪೀಡಿತ ಪ್ರದೇಶದ ವಿವಿಧ ಗ್ರಾಮಗಳ 20 ರೈತರಿಗೆ ಸಚಿವ ಎಸ್.ಎ.ರಾಮದಾಸ್ ದೊಡ್ಡಕೌಲಂದೆಯಲ್ಲಿ ಶುಕ್ರವಾರ ಮೇವು ವಿತರಸಿದರು. ಬಳಿಕ ಮಾತನಾಡಿದ ಅವರು, ಜಾನುವಾರುಗಳಿಗೆ ಮೇವು ವಿತರಿಸಲು ಜಿಲ್ಲೆಯಲ್ಲಿ ರೂ.15 ಲಕ್ಷ ವೆಚ್ಚದ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. 36 ಗ್ರಾಮಗಳಲ್ಲಿ ಜಾನುವಾರು ಗಣತಿ ಮಾಡಲಾಗಿದ್ದು, ನಿರಂತರವಾಗಿ ಮೇವು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.ಸಚಿವರ ಕಾಲ್ಗುಣ!

ದೊಡ್ಡಕೌಲಂದೆಯಲ್ಲಿ ಜಾನುವಾರು ಮಾಲೀಕರಿಗೆ ಮೇವು ವಿತರಿಸಿ ಮಾತನಾಡಿದ ರಾಮದಾಸ್, `ಜನವರಿಯಲ್ಲಿ ಬರ ಪರಿಸ್ಥಿತಿ ಅವಲೋಕಿಸಲು ಇಲ್ಲಿಗೆ ಬರುವ ಹಿಂದಿನ ದಿನವಷ್ಟೇ ಮಳೆಯಾಗಿತ್ತು. ಈಗಲೂ ಹಾಗೇ ಆಗಿದೆ. ಗುರುವಾರ ರಾತ್ರಿ ಮಳೆಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ~ ಎಂದರು. ತಕ್ಷಣ ಮೇಲೆದ್ದ ರೈತ ನೊಬ್ಬ `ನಿಮ್ಮ ಕಾಲ್ಗುಣ ಸಾರ್~ ಅಂದಾಗ ನಗುವಿನ ಅಲೆ.ದೊಡ್ಡ ಕೆರೆಯ ಚಿಕ್ಕ ಜಾಲಿ

ಹಳೇಪುರದಲ್ಲಿರುವ 720 ಎಕರೆ ವಿಸ್ತೀರ್ಣದ ದೊಡ್ಡ ಕೆರೆ ಮೈದಾನ ಜಾಲಿ ಗಿಡಗಳಿಂದ ತುಂಬಿಕೊಂಡಿದೆ. ಸುತ್ತಲಿನ ಹಲವು ಹಳ್ಳಿಯ ಜಮೀನುಗಳಿಗೆ ನೀರು ಒದಗಿ ಸುವ ಸಾಮರ್ಥ್ಯ ಹೊಂದಿರುವ ಕೆರೆ ಖಾಲಿಯಾಗಿರುವುದು ರೈತರ ಕಳವಳಕ್ಕೆ ಕಾರಣವಾಗಿದೆ. `ದೊಡ್ಡ ಕೆರೆ ತುಂಬಿದ್ದರೆ ನೀರಿಗಾಗಿ ನಿಮ್ಮನ್ನು ಅಂಗಲಾಚುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಕೆರೆ ಬತ್ತಿರುವುದರಿಂದ ಸ್ನಾನದ ನೀರಿಗೂ ಪರದಾ ಡುವಂತಾಗಿದೆ~ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.