ಗುರುವಾರ , ಮೇ 26, 2022
31 °C

ಕುಡಿಯುವ ನೀರು: ಪಟ್ಟಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಬೇಸಿಗೆ ವೇಳೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಸುಂದರನಾಯಕ್ ಸೂಚಿಸಿದರು. ನಗರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಣ ನೀಡಲಾಗಿದೆ. ಈ ಉದ್ದೇಶಕ್ಕೆ ಹೊರತುಪಡಿಸಿ ಇತರೇ ಕಾರ್ಯಗಳಿಗೆ ಕುಡಿಯುವ ನೀರಿನ ಅನುದಾನ ಬಳಸಬಾರದು. ಮಾರ್ಚ್ 16ರೊಳಗೆ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಗಡುವು ನೀಡಿದರು. ಕೂಡಲೇ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ತುರ್ತುಸಭೆ ನಡೆಸಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.ನಿಗದಿತ ಅವಧಿಯೊಳಗೆ ವರದಿ ನೀಡಬೇಕು. ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ನಿರ್ಲಕ್ಷ್ಯವಹಿಸಬಾರದು ಎಂದರು. ಶೌಚಾಲಯ ಸಮಸ್ಯೆ: ಸಂತೇಮರಹಳ್ಳಿ ಗ್ರಾ.ಪಂ. ವ್ಯಾಪ್ತಿ ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಶೌಚಾ ಲಯ ನಿರ್ಮಾಣ ಮಾಡದೇ ಹಣ ಪಾವತಿಸಲಾಗಿದೆ. ಕೆಲವು ಗ್ರಾ.ಪಂ. ಗಳಲ್ಲಿ ಇಂಥ ಪ್ರಕರಣ ನಡೆದಿವೆ. ಈ ಬಗ್ಗೆ ಪರಿಶೀಲಿಸಬೇಕು ಎಂದು ಸದಸ್ಯ ಬಿ.ಪಿ. ಪುಟ್ಟಬುದ್ಧಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಂದರನಾಯಕ್, ‘ಆಂದೋಲನದಡಿ ಎಲ್ಲಾ ಗ್ರಾ.ಪಂ.ಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.ನಿರ್ಮಾಣ ಮಾಡದೇ ಬಿಲ್ ಪಡೆದಿರುವ ಬಗ್ಗೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಹೋಬಳಿಮಟ್ಟದ ನೋಡೆಲ್ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಬೇಕು’ ಎಂದು ಸೂಚಿಸಿದರು.  ಜಿ.ಪಂ. ಅಧ್ಯಕ್ಷೆ ಕೆ. ರಾಜೇಶ್ವರಿ, ಉಪಾಧ್ಯಕ್ಷ ಎಂ. ಸಿದ್ದರಾಜು, ಸಹಾಯಕ ಕಾರ್ಯ ದರ್ಶಿ ವೇಣುಗೋಪಾಲ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.ಅನಧಿಕೃತ ಕೊಳವೆ ಬಾವಿ ಸಂಖ್ಯೆ ಹೆಚ್ಚಳ

ಜಿಲ್ಲೆಯಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಕೊರೆಯಿಸಿರುವ ಖಾಸಗಿ ಕೊಳವೆಬಾವಿಗಳ ಸಂಖ್ಯೆ 15 ಸಾವಿರಕ್ಕೂ ಹೆಚ್ಚು!  ‘ಅನಧಿಕೃತವಾಗಿ ಕೊಳವೆಬಾವಿ ಕೊರೆಯಿಸಲಾಗುತ್ತಿದೆ. ಯಾವುದೇ, ನಿಯಮಗಳ ಪಾಲನೆಯಾಗುತ್ತಿಲ್ಲ. ಚಾ.ನಗರ ಉಪ ವಿಭಾಗದಲ್ಲಿ ಕಳೆದ ತಿಂಗಳ ಅವಧಿಯಲ್ಲಿ 1,500 ಸಾವಿರ ಕೊಳವೆಬಾವಿ ಕೊರೆಯಲಾಗಿದೆ. ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ. ಸೆಸ್ಕ್‌ನಿಂದ ಅನಿವಾರ್ಯವಾಗಿ ಸಂಪರ್ಕ ಕಲ್ಪಿಸಬೇಕಿದೆ’ ಎಂದು ಸೆಸ್ಕ್‌ನ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಸಭೆಯ ಗಮನ ಸೆಳೆದರು.ಜಿ.ಪಂ. ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಜು ಮಾತನಾಡಿ, ‘ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಾರ್ವಜನಿಕ ಸ್ಥಳದಲ್ಲಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಖಾಸಗಿ ಜಮೀನುಗಳಲ್ಲಿ ನೀರಿನ ಲಭ್ಯತೆಯಿದೆ. ಆದರೆ, ಅಲ್ಲಿ ಕೊರೆಯುವಂತಿಲ್ಲ’ ಎಂದು ಹೇಳಿದರು. ಸುಂದರನಾಯಕ್ ಮಾತನಾಡಿ, ಈ ಕುರಿತು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.