ಕುಡಿಯುವ ನೀರು ಪೂರೈಕೆಗೆ ಆದ್ಯತೆ

7

ಕುಡಿಯುವ ನೀರು ಪೂರೈಕೆಗೆ ಆದ್ಯತೆ

Published:
Updated:

ಹಾಸನ: `ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದ ಹತ್ತು ತಿಂಗಳ ಅವಧಿಯಲ್ಲಿ ಕುಡಿಯುವ ನೀರಿನ ಸರಬರಾಜಿಗೆ 47.85 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದಿದ್ದೇನೆ. ಈಗ ಆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ. ನನ್ನ ಅವಧಿಯಲ್ಲಿ ಮಾಡಿರುವ ಸಾಧನೆ ತೃಪ್ತಿ ನೀಡಿದೆ~ ಎಂದು ಜಿಲ್ಲಾ ಪಂಚಾಯಿತಿಯಿಂದ ನಿರ್ಗಮಿಸುತ್ತಿರುವ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ನುಡಿದರು.ಮಂಗಳವಾರ (ಅ.16) ಅಧ್ಯಕ್ಷ ಹುದ್ದೆಯಲ್ಲಿ ಸತ್ಯನಾರಾಯಣ ಅವರ ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದ ಅವರು ತಮ್ಮ ಅವಧಿಯಲ್ಲಿ ಮಾಡಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.`ನಾನು ಜಾರಿ ಮಾಡಿದ ಕೆಲವು ಯೋಜನೆಗಳು ನನಗೆ ಸಂತೃಪ್ತಿ ನೀಡಿವೆ. ಇನ್ನೂ ಕೆಲವು ಯೋಜನೆಗಳನ್ನು ಜಾರಿ ಮಾಡಲಾಗಿಲ್ಲ ಎಂಬ ಬೇಸರವಿದೆ. ಆದರೂ ಮುಂದಿನವರು ಅದನ್ನು ಮುನ್ನಡೆಸುತ್ತಾರೆ ಎಂಬ ವಿಶ್ವಾಸವಿದೆ. ರಸ್ತೆ, ಚರಂಡಿ ಮುಂತಾದ ಸಾಮಾನ್ಯ ಯೋಜನೆಗಳಲ್ಲದೆ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋ ಗದಲ್ಲಿ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಮಾಡಿರುವ ಶೈಕ್ಷಣಿಕ ಪ್ರಯೋಗ ಉತ್ತಮ ಫಲಿತಾಂಶ ನೀಡಿದೆ. ಡಿ.ವಿ.ಡಿ ಸಹಾಯದಿಂದ ಮಕ್ಕಳಿಗೆ ಶಿಕ್ಷಣ ನೀಡಿದ್ದ ರಿಂದ ವಿಷಯ ಶಿಕ್ಷಕರಿಲ್ಲದ ಶಾಲೆಗಳಲ್ಲೂ ಮಕ್ಕಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ ಎಂದರು.ಬಜೆಟ್ ಕೊರತೆಯಿಂದ ರೈತರ ಜಮೀನುಗಳಲ್ಲಿ ನೀರು ಮರುಪೂರಣಕ್ಕೆ ರೂಪಿಸಿದ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಆದರೂ 80  ಕೊಳವೆ ಬಾವಿಗಳ  ಮರುಪೂರಣದ ವ್ಯವಸ್ಥೆ ಮಾಡಿದ್ದೇನೆ. ಇದರ ಬಜೆಟ್ ಅನ್ನು ಸ್ವಲ್ಪ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ನನ್ನ ಅವಧಿಯಲ್ಲಿ ಅದು ಈಡೇರಿಲ್ಲ ಎಂಬುದು ಒಂದು ಬೇಸರವಾದರೆ, ಯೋಜನೆಯ ಫಲಿತಾಂಶ ನೋಡಬೇಕೆಂಬ ನಿರೀಕ್ಷೆಯಲ್ಲಿದ್ದ ನಮಗೆ ಈ ಬಾರಿ ಮಳೆಯೂ ಕೈಕೊಟ್ಟಿದ್ದರಿಂದ ಇನ್ನೊಂದು ರೀತಿಯ ಬೇಸರ ಉಂಟಾಗಿದೆ ಎಂದರು.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಣ್ಣ, ಅತಿ ಸಣ್ಣ ರೈತರಿಗೆ ಸೇರಿದ ಸುಮಾರು 30 ಎಕರೆ ಭೂಮಿಯಲ್ಲಿ ಮಾವಿನ ಗಿಡ ನೆಡುವುದು ಹಾಗೂ ಸುಮಾರು ಅಷ್ಟೇ ಭೂಮಿಯಲ್ಲಿ ಬಾಳೆ ಗಿಡಗಳನ್ನು ನೆಡುವ ಯೋಜನೆ ಜಾರಿಯಗಿದೆ. ಇದರಿಂದ ಬರ ಪರಿಸ್ಥಿತಿಯಲ್ಲೂ ರೈತನಿಗೆ ಸ್ವಲ್ಪ ಆದಾಯ ಬರಲು ಸಾಧ್ಯವಾಗುತ್ತದೆ. ಇನ್ನೂ ನೂರು ಎಕರೆ ಪ್ರದೇಶದಲ್ಲಿ ಗಿಡ ನೆಡಬೇಕೆಂಬ ಯೋಜನೆ ಇದೆ ಎಂದರು.ನಗರದ ಕೆಲವು ಭಾಗಗಳಲ್ಲಿ ಸೋಲಾರ್ ಸ್ವಿಚ್ ಅಳವಡಿಸಬೇಕು ಎಂಬ ಆಸೆ ಈಡೇರಿಲ್ಲ. ಅದರಂತೆ ಜೈವಿಕ ತ್ಯಾಜ್ಯದಿಂದ ಉಂಟಾಗುವ ಗ್ಯಾಸ್‌ನಿಂದ ವಿದ್ಯುತ್ ಉತ್ಪಾದಿಸಿ ನಗರದ ಎಲ್ಲ ಬೀದಿ ದೀಪಗಳನ್ನು ಉರಿಸಬೇಕು ಎಂಬ ಯೋಜನೆ ಮಾಡಿದ್ದೆ ಅದೂ ಕೈಗೂಡಿಲ್ಲ. ಶಾಸಕರೇ ಆಸಕ್ತಿವಹಿಸಿ ಅದನ್ನು ಮಾಡುತ್ತಿರುವುದರಿಂದ ಯೋಜನೆ ಪೂರ್ಣಗೊಳ್ಳು ವುದೆಂಬ ವಿಶ್ವಾಸವಿದೆ. ನಾನು ಅಧಿಕಾರ ಸ್ವೀಕರಿಸಿದಾಗ ಹಾಸನ ಜಿಲ್ಲಾ ಪಂಚಾಯಿತಿ ಅಭಿವೃದ್ಧಿಯಲ್ಲಿ ರಾಜ್ಯದಲ್ಲಿ 9ನೇ ಸ್ಥಾನದಲ್ಲಿತ್ತು. ಎಲ್ಲ ಸಹಕಾರ, ಸಹಯೋಗದಿಂದ ಈಗ 5ನೇ ಸ್ಥಾನಕ್ಕೆ ಏರಿದೆ. ಮುಂದೆ ಮೊದಲ ಸ್ಥಾನಕ್ಕೆ ಬರುವುದೆಂಬ ವಿಶ್ವಾಸ ನಮಗಿದೆ ಎಂದು ಸತ್ಯನಾರಾಯಣ ನುಡಿದರು. ಉಪಾಧ್ಯಕ್ಷ ಸ್ಥಾನ ಕೊಟ್ಟು ಸಹಕಾರ ನೀಡಿರುವ ಪಕ್ಷದ ಮುಖಂಡರಿಗೆ ಉಪಾ ಧ್ಯಕ್ಷೆ ಸುಲೋಚನಾ ರಾಮಕೃಷ್ಣ ಧನ್ಯವಾದ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry