ಕುಡಿಯುವ ನೀರು ಯೋಜನೆ ಹಣ ದುರ್ಬಳಕೆಯಾಗದಿರಲಿ: ಸಚಿವ

7

ಕುಡಿಯುವ ನೀರು ಯೋಜನೆ ಹಣ ದುರ್ಬಳಕೆಯಾಗದಿರಲಿ: ಸಚಿವ

Published:
Updated:

ಕೋಲಾರ: ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಸಲುವಾಗಿ ಬಿಡುಗಡೆಯಾಗಿರುವ ಕೋಟ್ಯಂತರ ರೂಪಾಯಿ ದುರ್ಬಳಕೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಸೂಚಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ರೂ. 45 ಕೋಟಿ ಬಿಡುಗಡೆಯಾಗಿದ್ದು, ರೂ. 20 ಕೋಟಿ ಖರ್ಚಾಗಿದೆ. ಉಳಿದ 25 ಕೋಟಿ ರೂಪಾಯಿಯನ್ನು ಮಾರ್ಚ್ ಅಂತ್ಯದೊಳಗೆ ಖರ್ಚು ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.  ಹಣ ದುರ್ಬಳಕೆಯಾಗಬಾರದು ಎಂದರು.ನಗರ ಪ್ರದೇಶಗಳು ಸೇರಿದಂತೆ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.  ಕೊಳವೆಬಾವಿಗಳಿಗೆ ವಿದ್ಯುತ್ ಪೂರೈಕೆ ಮಾಡಿ, ಪಂಪ್ ಮೋಟರ್ ಅಳವಡಿಸಿ ಒಂದು ವಾರದೊಳಗೆ ವಿದ್ಯುತ್ ಪೂರೈಕೆ ಮಾಡಿ ವರದಿ ಸಲ್ಲಿಸಬೇಕು ಎಂದು ಬೆಸ್ಕಾಂ ಅಧೀಕ್ಷಕರಿಗೆ ಸೂಚಿಸಿದರು.ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ರೂ 1.13 ಕೋಟಿ ಅನುದಾನ ಒದಗಿಸಿದ್ದು, 84 ಲಕ್ಷ ಬಿಡುಗಡೆಯಾಗಿದೆ. ರೂ. 41 ಲಕ್ಷ ಖರ್ಚಾಗಿದೆ. 59 ಕಾಮಗಾರಿಗಳನ್ನು ಕೈಗೊಂಡಿದ್ದು, 35 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಜಿ.ಪಂ. ತಾಂತ್ರಿಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ದೇವರಾಜ್ ಮಾಹಿತಿ ನೀಡಿದರು.ಸಣ್ಣ ನೀರಾವರಿ ಯೋಜನೆಯಲ್ಲಿ ರೂ. 88 ಲಕ್ಷ ಅನುದಾನ ಒದಗಿಸಿದ್ದು ರೂ. 66 ಲಕ್ಷ ಬಿಡುಗಡೆಯಾಗಿದೆ. ರೂ. 79 ಲಕ್ಷ ಖರ್ಚಾಗಿದ್ದು 158 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 91 ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.ಪ್ರಕೃತಿ ವಿಕೋಪ ನಿಧಿಯಿಂದ ಕುಡಿಯುವ ನೀರಿಗಾಗಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿಗೂ ತಲಾ ರೂ. 70 ಲಕ್ಷ ಬಿಡುಗಡೆ ಮಾಡಿದ್ದು, ಕುಡಿಯುವ ನೀರು ಪೂರೈಕೆಗೆ ಪಂಪ್ ಮೋಟರ್ ಅಳವಡಿಸಿ ನೀರು ಪೂರೈಕೆ ಮಾಡಲಾಗುವುದು ಎಂದರು. ಹಣಕಾಸು ವರ್ಷ ಮುಗಿಯಲು ಕೇವಲ ಒಂದು ತಿಂಗಳು ಬಾಕಿಯಿದ್ದು, ಹಣವನ್ನು ಸಮರ್ಪಕವಾಗಿ ವೆಚ್ಚ ಮಾಡಿ ಶೇಕಡ ನೂರರಷ್ಟು ಪ್ರಗತಿಯನ್ನು ಸಾಧಿಸಬೇಕೆಂದು ಸಚಿವರು ಹೇಳಿದರು.ಕೇಂದ್ರ ಸ್ಥಾನದಲ್ಲಿರಿ: ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ವಾಸಿಸಬೇಕು. ಆದರೆ ವಾಸಿಸುತ್ತಿಲ್ಲ. ಅಲ್ಲದೆ ತುರ್ತು ಸಂದರ್ಭದಲ್ಲಿ ಅಧಿಕಾರಿಗಳ ಮೊಬೈಲ್ ಫೋನ್‌ಗಳು ಸ್ವಿಚ್‌ಆಫ್ ಆಗಿರುತ್ತವೆ.  ಇನ್ನು ಮುಂದೆ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕೇಂದ್ರಸ್ಥಾನ ಬಿಡಬೇಕು ಎಂದು ಸಚಿವರು ಸೂಚಿಸಿದರು.ಜಿಲ್ಲೆಯ ಕೆರೆಗಳಲ್ಲಿ ಹೂಳೆತ್ತಲು ಹಾಗೂ ಅಭಿವೃದ್ಧಿಗಾಗಿ ಪ್ರತಿಯೊಂದು ತಾಲ್ಲೂಕಿಗೆ ನಾಲ್ಕರಿಂದ ಐದು ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಅವ್ಯವಹಾರದ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.ಮರಳು ಸಾಗಾಣಿಕೆ ತಡೆಯುವುದು ಎಲ್ಲರ ಕರ್ತವ್ಯ. ಅದರಂತೆ ಲೋಕೋಪಯೋಗಿ ಇಲಾಖೆ ಸರಿಯಾಗಿ ಮರಳು ನೀತಿಯನ್ನು ಅನುಷ್ಠಾನಕ್ಕೆ ತರಬೇಕು. ಮರಳು ಸಾಗಾಣಿಕೆಯಲ್ಲಿ ಮಧ್ಯವರ್ತಿಗಳಿಂದ ಹಣ ಲೂಟಿಯಾಗುತ್ತಿದೆ ಎಂದು ಸಚಿವರು ಆರೋಪಿಸಿದರು. ನಿಜವಾದ ಫಲಾನುಭವಿಗೆ ಮರಳು ಸಾಗಾಣಿಕೆಯಲ್ಲಿ ಯಾವುದೇ ತೊಂದರೆ ನೀಡಬಾರದು ಎಂದು ಸೂಚಿಸಿದರು.ಕೆರೆ ಒತ್ತುವರಿ ತೆರವು: ನಗರದ ಕೋಲಾರಮ್ಮ ಕೆರೆ ಆರುನೂರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಅದರಲ್ಲಿ 38 ಎಕರೆ ಪ್ರದೇಶ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ತರಕಾರಿ ಬೆಳೆಯುವವರನ್ನು ತೆರವುಗೊಳಿಸುವುದು ಮಾತ್ರವಲ್ಲ, ಕಟ್ಟಡಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದರು.ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಬೇಸಿಗೆ ಕಾಲ ಈಗ ತಾನೇ ಪ್ರಾರಂಭವಾಗಿದ್ದು ಕುಡಿಯುವ ನೀರಿಗೆ ತೀವ್ರ ಸಮಸ್ಯೆಯುಂಟಾಗಿದೆ. ಎಲ್ಲಾ ತಾಲ್ಲೂಕುಗಳಿಗೆ ಸಾಕಷ್ಟು ಹಣ ನೀಡಿದ್ದು, ಅದನ್ನು ಸರಿಯಾದ ರೀತಿಯಲ್ಲಿ ವೆಚ್ಚ ಮಾಡಬೇಕು.  ಕೊಳವೆ ಬಾವಿಗೆ ಪಂಪ್ ಮೋಟರ್ ಅಳವಡಿಸಿ ನೀರು ಪೂರೈಕೆ ಮಾಡಬೇಕು ಎಂದರು.ಜಿಲ್ಲಾ ಪಂಚಾಯತಿ ಅಧ್ಯಕ್ಷೆ  ಮಂಜುಳಾ ವೆಂಕಟೇಶ್, ಉಪಾಧ್ಯಕ್ಷ ಡಿ.ವಿ.ಹರೀಶ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರಚೋಳನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry