ಶುಕ್ರವಾರ, ಮೇ 14, 2021
25 °C

ಕುಡಿವ ನೀರಿಗಾಗಿ ಮಹಿಳೆಯರ ಗುದ್ದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಳೇದಗುಡ್ಡ: ಮಳೆಗಾಲ ಆರಂಭವಾಗಿದ್ದರೂ ಗುಳೇದಗುಡ್ಡದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಹಾಗೂ ಪುರುಷರು, ಮಕ್ಕಳು ನಡುವೆ ನಿತ್ಯ ಜಟಾಪಟಿ ನಡೆಯುತ್ತಿರುವುದು ತಪ್ಪಿಲ್ಲ. ನಗರದ ಅನೇಕ ವಾರ್ಡಗಳಿಗೆ 15-20 ದಿನಗಳಿಂದ ಪುರಸಭೆಯವರು ಕುಡಿಯುವ ನೀರು ಪೂರೈಸಿಲ್ಲ, ಇದರಿಂದಾಗಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ಸಾಕಷ್ಟು ತೊಂದರೆ ಪಡುವಂತಾಗಿದೆ.ಪುರಸಭೆಯವರು ಒಂದು ವಾರ್ಡಿಗೆ  ಒಂದು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದಾರೆ. ಈ ನೀರು ತುಂಬಲು ಉದ್ಯೋಗ ಬಿಟ್ಟು ಮಹಿಳೆಯರು ಹಾಗೂ ಪುರುಷರು ಮುಗಿಬೀಳುತ್ತಿದ್ದಾರೆ. ಅಷ್ಟೇ ಅಲ್ಲದೆ ಒಬ್ಬರ ಜಡೆ ಒಬ್ಬರ ಕೈಯಲ್ಲಿ ಹಿಡಿದು ಬಡಿದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೆ 15-20 ದಿನಗಳಿಂದ ಕುಡಿಯುವ ನೀರಿಲ್ಲದೆ ತೊಂದರೆ ಜೊತೆಗೆ 1-2 ಕೀ. ಮೀಟರ್ ದೂರ ಹೋಗಿ ಸಾರ್ವಜನಿಕರು ನೀರು ತರುವಂತಾಗಿದೆ. ಪುರಸಭೆಯವರು ಒಂದು ವಾರ್ಡಿಗೆ ಒಂದು ಟ್ಯಾಂಕರ್ ನೀರನ್ನು ಪೂರೈಸುವುದರಿಂದ ನೀರು ಹಿಡಿಯಲು ನೂಕು ನುಗ್ಗಲು ಆರಂಭವಾಗುವುದು ಸರ್ವೆ ಸಾಮಾನ್ಯವಾಗಿದೆ.ನಗರದ ಯಾವ ಭಾಗದಲ್ಲಿ 15-20 ದಿನಗಳಿಂದ ಕುಡಿಯುವ ನೀರನ್ನು ಪೂರೈಕೆ ಮಾಡಿಲ್ಲ, ಅಂಥ ಭಾಗಗಳಿಗೆ ಮೂರು ನಾಲ್ಕು ಟ್ಯಾಂಕರ್ ನೀರನ್ನು ಪೂರೈಸಬೇಕು. ಅಂದಾಗ ಅಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಸಮಸ್ಯೆ ಬಗೆಹರಿಯಬಹುದು. ಆದರೆ ಪುರಸಭೆಯವರು ಸರಿಯಾಗಿ ಓಣಿಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಕೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಎಲ್ಲಿ 20 ದಿನಗಳಿಂದ ಕುಡಿಯುವ ನೀರನ್ನು ಪೂರೈಕೆ ಮಾಡಿಲ್ಲವೊ ಅಂಥ ಭಾಗಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಉಪವಿಭಾಗಾಧಿಕಾರಿಗಳು ಇತ್ತೀಚೆಗೆ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಈಗ ಟ್ಯಾಂಕರ್ ಮೂಲಕ ನೀರು ಸರಬರಾಜು ನಡೆದಿದೆ. ಆದರೆ ಪುರಸಭೆ ಸಿಬ್ಬಂದಿ ಸರಿಯಾಗಿ ಕುಡಿಯುವ ನೀರು ೂರೈಸುತ್ತಿಲ್ಲ ಎಂದು ದೂರಿದ್ದಾರೆ.ಕಂಠಿಪೇಟೆ, ಮನ್ನಿಕಟ್ಟಿ, ಚೌಬಜಾರ, ಬನ್ನಿಕಟ್ಟಿ ಓಣಿಯಲ್ಲಿ 15-20 ದಿನಗಳಿಂದ ಕುಡಿಯುವ ನೀರು ಬಂದಿಲ್ಲ, ಅಲ್ಲಿ ಈಗ ಒಂದು ಟ್ಯಾಂಕರ್ ನೀರು ಬಂದಿದ್ದು. ಈ ನೀರನ್ನು ಹಿಡಿಯಲು ಮಹಿಳೆಯರು, ಪುರುಷರು ಒಬ್ಬರಿಗೊಬ್ಬರು ಗುದ್ದಾಡಿಯೇ ನೀರು ತುಂಬಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಅಲ್ಲಿನ ಜನರು ಆರೋಪಿಸಿದ್ದಾರೆ.ಪುರುಷರು ಟ್ಯಾಂಕರ್ ಮೇಲೆ ಹತ್ತಿ ನೀರು ತುಂಬುತ್ತಾರೆ. ಆದರೆ ಮಹಿಳೆಯರು ಟ್ಯಾಂಕರ್ ಹತ್ತಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಹಿಳೆಯರು ಸಾಲಾಗಿ ನಿಂತರೆ ನೀರು ಸಿಗುವುದಿಲ್ಲ. ಒಬ್ಬರಿಗೊಬ್ಬರು ಜಗಳ ಮಾಡಿದರೆ ಮಾತ್ರ ಒಂದೆರಡು ಕೊಡ ನೀರು ದೊರಕುತ್ತದೆ. ಪುರಸಭೆಯವರು ಜನರಿಗೆ ಸರಿಯಾಗಿ, ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆ ಭಾಗದ ಸಾರ್ವಜನಿಕರು ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.