ಶುಕ್ರವಾರ, ಡಿಸೆಂಬರ್ 6, 2019
17 °C

ಕುಡಿವ ನೀರಿನ ಕಳಪೆ ಕಾಮಗಾರಿ: ತನಿಖೆಗೆ ಸದಸ್ಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿವ ನೀರಿನ ಕಳಪೆ ಕಾಮಗಾರಿ: ತನಿಖೆಗೆ ಸದಸ್ಯರ ಆಗ್ರಹ

ಕಂಪ್ಲಿ: ಪಟ್ಟಣದ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕಳಪೆಯಾಗಿದ್ದು, ಅವ್ಯವಹಾರವೂ ನಡೆದಿರುವುದರಿಂದ ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಪುರಸಭೆಯ ಸರ್ವ ಸದಸ್ಯರು ಆಗ್ರಹಿಸಿದರು.ಬುಧವಾರ ಪುರಸಭಾ ಸಭಾಂಗಣದಲ್ಲಿ ಜರುಗಿದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರು ಮಾತನಾಡಿ, ಮಂಜೂರಾದ ಹಣದಲ್ಲಿಯೇ ಕಳಪೆ ಕಾಮಗಾರಿ ನಿರ್ವಹಿಸಿ ಮತ್ತೆ ಅಂದಾಜು ಪಟ್ಟಿ ಪರಿಷ್ಕೃತಗೊಳಿಸಿ ರೂ. 38 ಲಕ್ಷ ಮಂಜೂರು ಮಾಡುವಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೇಡಿಕೆ ಸಲ್ಲಿಸಿರುವುದನ್ನು ಎಲ್ಲಾ ಸದಸ್ಯರು ತಳ್ಳಿ ಹಾಕಿದರು.ವಾರ್ಡಿನ ಸದಸ್ಯರು ಮೂಲಭೂತ ಸೌಕರ್ಯಗಳ ಬಗ್ಗೆ ತಿಳಿಸುತ್ತಿದ್ದರೂ ವಿನಾ ಕಾರಣ ಕಡೆಗಣಿಸಲಾಗುತ್ತಿದೆ ಎಂದು ವಿಪಕ್ಷ ಸದಸ್ಯ ಕೆ.ಎಂ. ಹೇಮಯ್ಯಸ್ವಾಮಿ ದೂರಿದರು. ಪಟ್ಟಣದ ನಾಗರಿಕರಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿ ಕೊಳ್ಳಲು ನೆರವು ನೀಡುವ ಮೂಲಕ ನಿರ್ಮಲ ಪಟ್ಟಣವನ್ನಾಗಿ ಮಾಡಲು ಸಹಕರಿಸುವಂತೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಜರುಗಿದ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು.ಸುಮಾರು ರೂ.14 ಲಕ್ಷ ವೆಚ್ಚ ಮಾಡಿ ಹಳೇ ಬಸ್‌ನಿಲ್ದಾಣದಲ್ಲಿ ನಿರ್ಮಿಸಿದ ಹಣ್ಣು, ಹೂ ಮಾರುಕಟ್ಟೆ ನಿರುಪಯುಕ್ತವಾಗಿದ್ದು, ಈ ಬಗ್ಗೆ ಕ್ರಮ ತೆಗೆದುಕೊಂಡು ಪರ್ಯಾಯ ವ್ಯವಸ್ಥೆಯಾದರೂ ಮಾಡಿ ಎಂದು ಸದಸ್ಯ ಜಿ.ಜಿ. ಚಂದ್ರಣ್ಣ ಆಗ್ರಹಿಸಿದರು.ನಮ್ಮ ಮನೆ ಯೋಜನೆ ಬಗ್ಗೆ ಮಾಹಿತಿ ನೀಡುವಂತೆ ಜೆಡಿಎಸ್ ಸದಸ್ಯ ಎಂ.ಸಿ. ಮಾಯಾಪ್ಪ ಪ್ರಶ್ನಿಸಿದರೆ,  ನಮ್ಮ ವಾರ್ಡಿಗೆ ಇಲ್ಲಿಯವರೆಗೆ ಒಂದೂ ಆಶ್ರಯ ಮನೆ ಮಂಜೂರಾಗಿಲ್ಲ ಎಂದು ಬಿ. ಅಂಬಮ್ಮ ಪ್ರಶ್ನಿಸಿದರು.ಎಸ್.ಎಫ್.ಸಿ ಅನುದಾನದಲ್ಲಿ ಶೇ. 7.25ರಲ್ಲಿ ಬಡಜನರ ಕಲ್ಯಾಣಕ್ಕಾಗಿ ಮಂಜೂರಾದ ಹಣದಲ್ಲಿ ಪದವಿ ಪೂರ್ವ ಮತ್ತು ಹೆಚ್ಚಿನ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಹಾಯಧನ ಮಂಜೂರು ಮಾಡಿದ್ದು, ವಾರ್ಡಿನ ಸದಸ್ಯರ ಗಮನಕ್ಕೆ ತರದೆ ನಿರ್ಲಕ್ಷಿಸಿದ್ದರ ಬಗ್ಗೆ ಸದಸ್ಯ ವಿ. ವಿದ್ಯಾಧರ ಮತ್ತು ಕೆ. ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಕುಂದುಕೊರತೆಗಳನ್ನು ಚರ್ಚಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಆಹ್ವಾನಿಸುವಂತೆ ಮಾಜಿ ಅಧ್ಯಕ್ಷ ಪಿ. ಬ್ರಹ್ಮಯ್ಯ ಒತ್ತಾಯಿಸಿದರು.ಎಸ್.ಸಿ ಮತ್ತು ಎಸ್.ಟಿ ಜನಾಂಗದ ಅಭಿವೃದ್ಧಿ, ಮೂಲ ಸೌಲಭ್ಯಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ ರೂ. 10ಲಕ್ಷ ಬಿಡುಗಡೆ ಮಾಡಿದೆ ಎಂದು ಮುಖ್ಯಾಧಿಕಾರಿ ವಿ. ರಮೇಶ್ ಸಭೆಗೆ ತಿಳಿಸಿದರು.

 

ಈಚೆಗೆ ಉಪ ಚುನಾವಣೆಯಲ್ಲಿ 19ನೇ ವಾರ್ಡಿನಿಂದ ಆಯ್ಕೆಯಾದ ಯು. ರೇಣುಕಮ್ಮ ಅವರನ್ನು ಸಭೆಯಲ್ಲಿ ಸ್ವಾಗತಿಸಲಾಯಿತು. ಪುರಸಭೆ ಅಧ್ಯಕ್ಷೆ ಹೇಮಾವತಿ ಎಚ್.ಪಿ. ಚಂದ್ರ, ಉಪಾಧ್ಯಕ್ಷ ಎಲೆಗಾರ ನಾಗರಾಜ, ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ರಾಮಾಂಜಿನೇಯಲು ಹಾಜರಿದ್ದರು.

ಪ್ರತಿಕ್ರಿಯಿಸಿ (+)