ಮಂಗಳವಾರ, ಏಪ್ರಿಲ್ 13, 2021
30 °C

ಕುಡಿವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಸರ್ವಜ್ಞನಗರ ಕ್ಷೇತ್ರಕ್ಕೆ ಕಾವೇರಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ಜಿಕೆವಿಕೆ ಮತ್ತು ಹೂಡಿ ಮೂಲಕ ಕೊಳವೆ ಮಾರ್ಗಗಳನ್ನು ಅಳವಡಿಸುವ ಕಾರ್ಯ ನಡೆದಿದೆ ಎಂದು ಶಾಸಕ ಕೆ.ಜೆ.ಜಾರ್ಜ್ ತಿಳಿಸಿದರು.ಹೆಣ್ಣೂರು ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಚಿಕ್ಕಣ್ಣ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ನಾಗರಿಕರ ಮನವಿಗಳನ್ನು ಆಲಿಸಿ ಮಾತನಾಡಿದ ಅವರು, ಕಾವೇರಿ 4ನೇ ಹಂತದ 2ನೇ ಘಟ್ಟದ ಯೋಜನೆ ಅನುಷ್ಠಾನಗೊಂಡಲ್ಲಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಬಿಎಂಪಿ ಸದಸ್ಯ ಬಿ.ಗೋವಿಂದರಾಜು ಮಾತನಾಡಿ, ನಗರದ ಆಸ್ಪತ್ರೆಗಳಲ್ಲಿ ಡೆಂಗೆ ಜ್ವರಕ್ಕೆ ಒಳಗಾಗಿರುವ ರೋಗಿಗಳಿಗೆ ಅಗತ್ಯವಿರುವ ರಕ್ತದ ಕೊರತೆಯಿದ್ದು, ಈ ಭಾಗದ ಬಡ ಜನರು ಚಿಕಿತ್ಸೆಗೆ ಬಂದರೆ ನಿರ್ಲಕ್ಷ್ಯ ತೋರದೆ ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸಮೀಪದ ಆಸ್ಪತ್ರೆಯ ವೈದ್ಯರಲ್ಲಿ ಮನವಿ ಮಾಡಲಾಗಿದೆ ಎಂದರು.ಮನೆಗಳಿಗೆ ಬಂದು ಕಸ ಸಂಗ್ರಹಣೆ ಮಾಡಲು ವಾರ್ಷಿಕವಾಗಿ ಬಿಬಿಎಂಪಿಗೆ ಕಂದಾಯದ ರೂಪದಲ್ಲಿ ತಿಂಗಳಿಗೆ 30 ರೂಪಾಯಿಗಳಂತೆ ತೆರಿಗೆ ಪಾವತಿಸಿದ್ದರೂ ಸಿಬ್ಬಂದಿ ಕಸ ಸಂಗ್ರಹಣೆ ಮಾಡುತ್ತಿಲ್ಲ. ಸಾರ್ವಜನಿಕರು ರಸ್ತೆಯ ಪಕ್ಕ ಕಸ ಸುರಿಯುತ್ತಿರುವುದರಿಂದ ತೆರೆದ ಚರಂಡಿಗಳಲ್ಲಿ ಸಂಗ್ರಹವಾಗಿ ಡೆಂಗೆ ಕಾಯಿಲೆ ಹರಡಲು ಮೂಲ ಕಾರಣವಾಗಿದೆ. ಅಧಿಕಾರಿಗಳು ಗುತ್ತಿಗೆದಾರರಿಂದ ಕೆಲಸ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಹೆಣ್ಣೂರು ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎನ್. ಮುನಿರಾಜು ಆರೋಪಿಸಿದರು.ಐದಾರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿದ್ದು, ಚರಂಡಿಗಳಲ್ಲಿ ಸಂಗ್ರಹವಾಗಿರುವ ಕಸ ತೆಗೆಯುತ್ತಿಲ್ಲ. ಮೂರು ರಸ್ತೆಗಳು ಕೂಡುವ ಹೆಣ್ಣೂರು ಕ್ರಾಸ್ ಬಳಿ ಪ್ರತ್ಯೇಕ ಸಂಚಾರಿ ನಿಯಮಗಳ ಫಲಕಗಳನ್ನು ಅಳವಡಿಸದೆ, ಸಂಚಾರಿ ಪೇದೆಯನ್ನು ನಿಯೋಜಿಸದ ಕಾರಣ ಸಂಚಾರ ಒತ್ತಡ ಹೆಚ್ಚಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹೆಣ್ಣೂರು ಕ್ರಾಸ್ ನಿವಾಸಿ ಶ್ರವಣ್ ದೂರಿದರು.ಸಂಘದ ಅಧ್ಯಕ್ಷ ವಿಜೆಕೆ ಭಕ್ತವತ್ಸಲಂ, ಎಚ್‌ಬಿಆರ್ ಬಡಾವಣೆ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಪುಲಿಕೇಶಿ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.