ಗುರುವಾರ , ಡಿಸೆಂಬರ್ 12, 2019
17 °C

ಕುಡ್ಲ: ಪ್ರತಿಭಟನೆ 3-ಕಾರಣ ಭಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡ್ಲ: ಪ್ರತಿಭಟನೆ 3-ಕಾರಣ ಭಿನ್ನ

`ಸಿಎಂಗೂ ಕಪ್ಪು ಬಾವುಟ~

ಮಂಗಳೂರು: ಪಂಜಿಮೊಗರು ಜೋಡಿ ಕೊಲೆ ಪ್ರಕರಣದ ಅಪರಾಧಿ ಪತ್ತೆಯಲ್ಲಿ ಪೊಲೀಸರು ವಿಫಲರಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮಗಳಲ್ಲೂ ಕಪ್ಪು ಬಾವುಟ ಹಾರಿಸಿ ಪ್ರತಿಭಟಿಸಲಾಗುವುದು ಎಂದು ಡಿವೈಎಫ್‌ಐ ಎಚ್ಚರಿಕೆ ನೀಡಿದೆ.



ಪಂಜಿಮೊಗರು ತಾಯಿ-ಮಗುವಿನ ಹಂತಕರ ಪತ್ತೆಗೆ ಪೊಲೀಸರು ವಿಫಲರಾಗಿದ್ದಾರೆ. ಉನ್ನತ ಮಟ್ಟದ ತನಿಖೆಗೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ಡಿವೈಎಫ್‌ಐ ಪಂಜಿಮೊಗರು ಘಟಕದ ವತಿಯಿಂದ ಪಾಲಿಕೆಯಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ಘಟಕ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿದರು.



ಮುಖ್ಯಮಂತ್ರಿ ರಾಜಧರ್ಮ ಪಾಲಿಸುವುದಾಗಿ ಹೇಳಿದ್ದಾರೆ. ತವರು ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಹೆಚ್ಚುತ್ತಿದ್ದರೂ ರಾಜಧರ್ಮ ಪಾಲನೆ ಬಗ್ಗೆ ನೆನಪು ಇಲ್ಲವೇ? ಎಂದು ಪ್ರಶ್ನಿಸಿದ ಅವರು, `ವಿಶೇಷ ಆಸಕ್ತಿ ವಹಿಸಿ ಪ್ರಕರಣ ಪತ್ತೆಗೆ ಕ್ರಮ ಕೈಗೊಳ್ಳಬೇಕು~ ಎಂದು ಅವರು ಆಗ್ರಹಿಸಿದರು.



ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮಗಳಲ್ಲೂ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದ ಅವರು, ನಗರದ ಶೇ. 80ರಷ್ಟು ಕಳವು ಹಾಗೂ ದರೋಡೆ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.



ವಕೀಲ ಪ್ರೀತಂ ನಿಗೂಢ ನಾಪತ್ತೆ ಪ್ರಕರಣ, ಮೂಡುಶೆಡ್ಡೆ ಯುವಕನ ಕೊಲೆ, ಬಿಜೈ ಮಹಿಳೆ ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಆಗಿಲ್ಲ. ಜನಪ್ರತಿನಿಧಿಗಳಿಗೆ ನಾಚಿಕೆ ಆಗಬೇಕು.



ವೇದಿಕೆಯಲ್ಲಿ ಕೋಟಿ ಕೋಟಿ ಬಿಡುಗಡೆಯ ಹೇಳಿಕೆ ನೀಡುತ್ತಾರೆ. ಶ್ರೀಮಂತರ ಕಾರ್ಯಕ್ರಮದಲ್ಲಿ ಭೂಮಿಪೂಜೆಗೆ ಹೋಗುತ್ತಾರೆ. ಜನಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲ ಎಂದು ಕಿಡಿಕಾರಿದರು.



ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಮಾತನಾಡಿ, ರಜಿಯಾ ಹಾಗೂ ಮಗು ಫಾತಿಮಾ ಜುವಾ ಕೊಲೆಯಾಗಿ ಆರು ತಿಂಗಳೇ ಕಳೆದಿವೆ. ಹಂತಕರ ಪತ್ತೆಯೇ ಆಗಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಜನ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಹಲವ ಬಾರಿ ಪ್ರತಿಭಟನೆ ನಡೆಸಲಾಗಿದೆ.

ಪ್ರಕರಣ ಭೇದಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.



ಡಿವೈಎಫ್‌ಐ ನಗರ ಅಧ್ಯಕ್ಷ ಇಮ್ತಿಯಾಜ್, ನಗರ ಕಾರ್ಯದರ್ಶಿ ಸಂತೋಷ್ ಬಜಾಲ್, ಪಂಜಿಮೊಗರು ಘಟಕ ಅಧ್ಯಕ್ಷ ಅಹ್ಮದ್ ಬಶೀರ್, ಉಪಾಧ್ಯಕ್ಷ ಅನಿಲ್ ಡಿಸೋಜ ಮತ್ತಿತರರು ಇದ್ದರು. ಇದಕ್ಕೂ ಮುನ್ನ ಲೇಡಿಹಿಲ್ ಬಳಿಯಿಂದ ಡಿವೈಎಫ್‌ಐ ಕಾರ್ಯಕರ್ತರು ಲಾಲ್‌ಭಾಗ್‌ವರೆಗೆ ಕಪ್ಪು ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿ ಬಂದರು.





ಉನ್ನತ ಶಿಕ್ಷಣ ಮಸೂದೆ ವಿರುದ್ಧ ವಕೀಲರ ಪ್ರತಿಭಟನೆ

ಮಂಗಳೂರು: `ಜನರ ನ್ಯಾಯ ಹಾಗೂ ಹಕ್ಕುಗಳ ರಕ್ಷಣೆಗೆ ವಕೀಲರೇ ಬರಬೇಕು. ನಮ್ಮ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ. ವಕೀಲರನ್ನು ಕಡೆಗಣಿಸದಿರಿ ಎಂದು ಹಿರಿಯ ವಕೀಲ ಪುರುಷೋತ್ತಮ ಪೂಜಾರಿ ಎಚ್ಚರಿಕೆ ನೀಡಿದರು.



ಕೇಂದ್ರದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಮಸೂದೆ-2011 ತಿರಸ್ಕರಿಸಲು ಆಗ್ರಹಿಸಿ ಹಾಗೂ ಬೆಂಗಳೂರಿನಲ್ಲಿ ವಕೀಲರ ಮೇಲೆ ಪೊಲೀಸರ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮಂಗಳೂರು ವಕೀಲರ ಸಂಘದ ವತಿಯಿಂದ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.



ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಕಾನೂನು ತಜ್ಞರೊಂದಿಗೆ ಚರ್ಚಿಸದೆ ಏಕಾಏಕಿ ಅನುಮೋದನೆ ಬಯಸುತ್ತಿರುವ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಮಸೂದೆಯನ್ನು ಸಂಘ ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದರು.



ಉನ್ನತ ಶಿಕ್ಷಣ ಎಂಬುದು ಒಮ್ಮತದಿಂದ ಬರಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾನೂನು ಶಿಕ್ಷಣ, ಸಂಶೊಧನೆಗೆ ಸಂಬಂಧಿಸಿ ಜಂಟಿಯಾಗಿ ಪ್ರಮುಖ ನಿರ್ಣಯ ಕೈಗೊಳ್ಳಬೇಕು. ಎಲ್ಲ ಹಕ್ಕುಗಳನ್ನು ಕಸಿದುಕೊಂಡು ರಾಜ್ಯವನ್ನು ನಿರ್ಲಕ್ಷ್ಯಿಸಿ ಈ ಮಸೂದೆ ಅಂಗೀಕರಿಸಿದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿಪೆಟ್ಟು ಹಾಕಿದಂತಾಗುತ್ತದೆ ಎಂದು ಅವರು ಗಮನ ಸೆಳೆದರು.



ಬಲಿಷ್ಠವಾದ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ವಕೀಲರು ಸ್ವತಂತ್ರವಾಗಿ ಯಾವುದೇ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸುವುದು ಅಗತ್ಯ. ಇದನ್ನು ಮನಗಂಡು ಕೇಂದ್ರ ಸರ್ಕಾರ 1961 ಅಡ್ವೊಕೇಟ್ಸ್ ಆಕ್ಟ್‌ನ ಸೆಕ್ಷನ್ 6 ಹಾಗೂ 7ರಂತೆ ರಾಷ್ಟ್ರೀಯ ವಕೀಲರ ಪರಿಪತ್ ಹಾಗೂ ರಾಜ್ಯ ವಕೀಲರ ಪರಿಷತ್‌ಗೆ ಜವಾಬ್ದಾರಿ ವಹಿಸಿದೆ.



ಇದಕ್ಕೆ ಅನುಗುಣವಾಗಿ ರಾಷ್ಟ್ರೀಯ ವಕೀಲರ ಪರಿಷತ್ ಹಾಗೂ ರಾಜ್ಯ ವಕೀಲರ ಪರಿಷತ್‌ಗೆ ಕಾನೂನು ಶಿಕ್ಷಣ ಮತ್ತು ನ್ಯಾಯಾಂಗದ ಗುಣಮಟ್ಟ ಹೆಚ್ಚಿಸುವ ವಿಶೇಷ ಜವಾಬ್ದಾರಿ ವಹಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಕೀಲರ ಸ್ವಾತಂತ್ರ್ಯ ಕಡಿತಗೊಳಿಸಲು ಮತ್ತು ಅವರ ಮೇಲೆ ನಿಯಂತ್ರಣ ಸಾಧಿಸಲು ಹೊಸ ಹೊಸ ಕಾನೂನು ತರಲು ಪ್ರಯತ್ನಿಸುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.



ಈ ಮಸೂದೆಯಿಂದ ರಾಷ್ಟ್ರೀಯ ಹಾಗೂ ರಾಜ್ಯ ವಕೀಲರ ಪರಿಷತ್‌ನ ಸಂಪೂರ್ಣ ಹಕ್ಕನ್ನು ಕಸಿದುಕೊಂಡು ರಾಷ್ಟ್ರೀಯ ಸಮಿತಿ ಎಂಬ ಕೆಲವು ಶಿಕ್ಷಣ ತಜ್ಞರಿಂದ ಕೂಡಿದ ಸಂಘಟನೆಗಳಿಗೆ ವಹಿಸಿಕೊಡಲಾಗುತ್ತದೆ. ದೇಶದಲ್ಲಿ 15 ಲಕ್ಷಕ್ಕೂ ಅಧಿಕ ವಕೀಲರು ಇದ್ದಾರೆ. ಈ ಮಸೂದೆ ಅವರ ಸ್ವಾತಂತ್ರ್ಯ ಕಸಿದುಕೊಳ್ಳುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.



ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಗಣೇಶ್ ಶೆಣೈ, ಕೋಶಾಧಿಕಾರಿ ಬಿ.ವಿಠಲ ರೈ, ವಕೀಲ ಐವನ್ ಡಿಸೋಜ, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)