ಗುರುವಾರ , ಜೂನ್ 24, 2021
23 °C

ಕುಣಿಗಲ್ ಕಾಲೇಜಿನಲ್ಲಿ ಗುಂಪು ಘರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್‌: ಸಾಂಸ್ಕೃತಿಕ ಕಾರ್ಯಕ್ರಮ ವೇಳೆ ವಿದ್ಯಾರ್ಥಿಗಳಲ್ಲಿ ಭಿನ್ನಮತ ಭುಗಿಲೆದ್ದು, ಗುಂಪು ಘರ್ಷಣೆ ನಡೆದ ಘಟನೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆ­ದಿದೆ. ಅಹಿತಕರ ಘಟನೆಯಿಂದ ಬೇಸರ­ಗೊಂಡ ಪೋಷಕರು ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡರು.ಕಳೆದ ಎರಡು ವರ್ಷದಿಂದ ಪಟ್ಟಣ­ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಸಗಿ ಪ್ರಾಯೋಜಕತ್ವ­ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿ ಉತ್ಸವ, ಜಾನಪದ ಜಾತ್ರೆ ಮತ್ತು ಕನ್ನಡ ಸಾಂಸ್ಕೃತಿಕ ಹಬ್ಬದ ಸಂದರ್ಭ­ದಲ್ಲಿ ಇದೇ ಕಾರಣದಿಂದ ವಿದ್ಯಾರ್ಥಿ­ಗಳ ನಡುವೆ ಗುಂಪುಗಾರಿಕೆ ಹೆಚ್ಚಾಗಿದೆ.ದೇಣಿಗೆ ಕೊಟ್ಟವರನ್ನೆಲ್ಲಾ ಸಮಾ­ರಂಭಕ್ಕೆ ಕರೆದು ಸನ್ಮಾನಿಸುವ ಪರಿಪಾಠ ಕಳೆದ ವರ್ಷ ನಡೆಯಿತು. ಈ ಬಾರಿಯ ಸಾಂಸ್ಕೃತಿಕ ಉತ್ಸವದ ವೇಳೆ ಲೋಕ­ಸಭಾ ಚುನಾವಣೆಯ ಸಂಭಾವ್ಯ ಅಭ್ಯರ್ಥಿ ಹಾಗೂ ರಾಜಕಾರಿಣಿಗಳನ್ನು ಆಹ್ವಾನಿಸಿ ಪೈಪೋಟಿ ಮೇಲೆ ಸನ್ಮಾನ ಮಾಡಿದರು.‘ವಿದ್ಯಾಭ್ಯಾಸದ ಮಂದಿರದಲ್ಲಿ ರಾಜ­ಕಾರಣಿಗಳಿಗೆ ಮಣೆ ಹಾಕಿದ್ದು ಸರಿಯೇ?’ ಎಂದು ಪೋಷಕರು ಆಕ್ಷೇಪ ವ್ಯಕ್ತ­ಪಡಿಸಿದರು.

ಮಾರ್ಚ್ ೬ರಂದು ನಡೆದ ಆರ್ಕೆಸ್ಟ್ರಾದಲ್ಲಿ ವಿದ್ಯಾರ್ಥಿಗಳೆದುರು ನಂಗಾನಾಚ್ ಆಯೋಜಿಸಿದ್ದು ಸಹ ಪೋಷಕರ ಅಸಮಾಧಾನಕ್ಕೆ ಕಾರಣ­ವಾಯಿತು.ವಸೂಲಿ ವಹಿವಾಟು ಹಾಗೂ ವಿದ್ಯಾರ್ಥಿನಿಯರ ಗಮನ ಸೆಳೆಯುವ ಪೈಪೋಟಿಯಿಂದ ವಿದ್ಯಾರ್ಥಿಗಳಲ್ಲಿ ಎರಡು ಗುಂಪು ಹುಟ್ಟಿಕೊಂಡಿದೆ. ಎರಡೂ ಗುಂಪು ನಡುವೆ ನಡೆದ ಘರ್ಷಣೆಯನ್ನು ಈ ಹಿಂದೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಕನ್ನಡ ಸೇನೆ ಅಧ್ಯಕ್ಷ  ಶ್ರೀನಿವಾಸ್ ತಹಬಂದಿಗೆ ತಂದಿದ್ದರು.ಆದರೆ ಶನಿವಾರ ಕಾಲೇಜು ಆವರಣ­ದಲ್ಲಿ ಅರುಣ ಎಂಬ ವಿದ್ಯಾರ್ಥಿ ಮೇಲೆ ನಡೆದ ಹಲ್ಲೆ ಮತ್ತು ಕೆಲ ವಿದ್ಯಾರ್ಥಿ­ಗಳು ಮಾರಕಾಸ್ತ್ರ ಹಿಡಿದು ತಿರುಗಿದ ಸನ್ನಿವೇಶ ಪೋಷಕರಲ್ಲಿ ಭಯ ಹುಟ್ಟು ಹಾಕಿದೆ. ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದ ವಿದ್ಯಾರ್ಥಿ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದನ್ನು ಗಮ­ನಿಸಿದ ಸಬ್‌ ಇನ್ಸ್‌ಪೆಕ್ಟರ್ ಗುರು­ಪ್ರಸಾದ್, ಕೆಲ ಪುಂಡ ವಿದ್ಯಾರ್ಥಿ­ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗಂಗಾಧರ, ಮುಖಂಡರಾದ ಶ್ರೀನಿ­ವಾಸ್, ಬಾಬು, ಮಂಜುನಾಥ, ರಮೇಶ್ ಇತರರು ಇದೇ ವಿಚಾರವಾಗಿ ಪ್ರಾಚಾರ್ಯ ನರಸಿಂಹನ್ ಅವರನ್ನು ಈಚೆಗೆ ತರಾಟೆಗೆ ತೆಗೆದುಕೊಂಡಿದ್ದರು. ‘ಮುಂದಿನ ದಿನಗಳಲ್ಲಿ ಬಾಹ್ಯ ಪ್ರಯೋ­ಜಕತ್ವದ ಯಾವುದೇ ಕಾರ್ಯಕ್ರಮಕ್ಕೆ ಕಾಲೇಜಿನಲ್ಲಿ ಅವಕಾಶ ನೀಡುವುದಿಲ್ಲ. ವಿದ್ಯಾರ್ಥಿ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನರಸಿಂಹನ್ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.