ಕುಣಿಗಲ್ ಠಾಣೆಯಲ್ಲಿ ಪೊಲೀಸರ ರಂಪಾಟ

7

ಕುಣಿಗಲ್ ಠಾಣೆಯಲ್ಲಿ ಪೊಲೀಸರ ರಂಪಾಟ

Published:
Updated:

ಕುಣಿಗಲ್: ಪೊಲೀಸ್ ಠಾಣೆಯ ಇಬ್ಬರು ಎಎಸ್‌ಐಗಳ ದರ್ಬಾರಿನಿಂದ ನಡೆದಿರುವ ಅವಾಂತರ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳೇ ಮುಜುಗರಕ್ಕೊಳಗಾದ ಘಟನೆ ನಡೆದಿದೆ.ಸೋಮವಾರ ರಾತ್ರಿ ಎಎಸ್‌ಐ ಗಂಗರಾಜು ಹೆಡ್‌ಕಾನ್‌ಸ್ಟೆಬಲ್ ಅವರನ್ನು ವಿನಾಃ ಕಾರಣ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಹೆಡ್‌ಕಾನ್‌ಸ್ಟೆಬಲ್ ಜಯರಾಮಯ್ಯ, ಅಧಿಕಾರಿಗಳ ಅಪ್ಪಣೆ ಪಡೆದು ಸೆಂಟ್ರಿ ಶಿವಕುಮಾರ್ ಗಮನಕ್ಕೆ ತಂದು ಊಟ ಮಾಡಲು ತೆರಳಿದ್ದರು.ಈ ಸಂದರ್ಭದಲ್ಲಿ ಠಾಣೆಗೆ ಆಗಮಿಸಿದ ಎಎಸ್‌ಐ ಗಂಗರಾಜು ಹೆಡ್‌ಕಾನ್‌ಸ್ಟೆಬಲ್ ಕರ್ತವ್ಯ ನಿರ್ವಹಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಅಧಿಕಾರಿಗಳ ಅಪ್ಪಣೆ ಪಡೆದು ಊಟ ಮಾಡಲು ತೆರಳಿರುವುದಾಗಿ ತಿಳಿಸಿದರೂ ಲೆಕ್ಕಿಸದೆ ಡೈರಿಯಲ್ಲಿ ಆಕ್ಷೇಪಣೆ ದಾಖಲಿಸಿದರು ಎನ್ನಲಾಗಿದೆ.ಕರ್ತವ್ಯಕ್ಕೆ ಹಾಜರಾದ ಜಯರಾಮಯ್ಯ, ಎಎಸ್‌ಐ ವರ್ತನೆ ಖಂಡಿಸಿದ್ದರಿಂದ ಸಿಟ್ಟಿಗೆದ್ದ ಗಂಗರಾಜು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹೆಡ್‌ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದರು. ಘಟನೆಯಲ್ಲಿ ಕನ್ನಡಕ ಒಡೆದು ಚೂರಾಗಿ, ಸಣ್ಣಪುಟ್ಟ ಗಾಯಗಾಳಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹೆಡ್‌ಕಾನ್‌ಸ್ಟೆಬಲ್ ಘಟನೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಕಳೆದ ಶುಕ್ರವಾರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿಕೊಂಡ ಮಹಿಳಾ ಎಎಸ್‌ಐ ಥಳಿಸಿದ್ದರು ಎನ್ನಲಾಗಿದೆ. ಈ ಘಟನೆಯಿಂದ ಮಹಿಳೆ ನಿಶ್ಯಕ್ತಳಾಗಿದ್ದು, ಗಾಬರಿಗೊಂಡ ಎಎಸ್‌ಐ ಮಹಿಳೆ ಸಂಬಂಧಿಕರೊಂದಿಗೆ ವಾಪಸ್ ಕಳುಹಿಸಿಕೊಟ್ಟಿದ್ದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಶಕ್ತ ಮಹಿಳೆ ಬೆಂಬಲಕ್ಕೆ ನಿಂತ ಸಂಬಂಧಿ ವಕೀಲರೊಬ್ಬರು ಮಹಿಳಾ ಆಯೋಗ, ದೃಶ್ಯ ಮಾಧ್ಯಮಗಳಿಗೆ ವಿಚಾರ ತಿಳಿಸಿದ್ದಾರೆ.

 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ, ಮಹಿಳಾ ಎಎಸ್‌ಐ ದೌರ್ಜನ್ಯದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸೂಕ್ತ ದೂರು ಬಾರದೆ ಕಾರಣ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿರುವ ಅಧಿಕಾರಿಗಳು, ಘಟನೆಗೆ ಸಂಬಂಧಿಸಿದಂತೆ ರಾಜಿ ಸಂಧಾನ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry