ಕುಣಿಗಲ್ ಪುರಸಭೆ: ಗುತ್ತಿಗೆಗೆ ಜಟಾಪಟಿ

7

ಕುಣಿಗಲ್ ಪುರಸಭೆ: ಗುತ್ತಿಗೆಗೆ ಜಟಾಪಟಿ

Published:
Updated:

ಕುಣಿಗಲ್: ಎಸ್‌ಎಫ್‌ಐ ಯೋಜನೆಯಡಿ ರೂ. 90 ಲಕ್ಷ ವೆಚ್ಚದ ಸಿವಿಲ್ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ ಕೆಲ ಗುತ್ತಿಗೆದಾರರು ಬುಧವಾರ ಪುರಸಭಾ ಕಚೇರಿಗೆ ನುಗ್ಗಿ ಮುಖ್ಯಾಧಿಕಾರಿಗ ಜತೆ ವಾಗ್ವಾದ ನಡೆಸಿದರು.ಪಟ್ಟಣದ ವಿವಿಧ ವಾರ್ಡ್‌ಗಳ ಅಭಿವೃದ್ಧಿಗಾಗಿ ಸಿವಿಲ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಸಂಬಂಧ ನಡೆದಿರುವ ಟೆಂಡರ್ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗುತ್ತಿಗೆದಾರರ ಗುಂಪು, ಪಾದರದರ್ಶಕ ನೀತಿ ಅಳವಡಿಸದೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ದೂರಿದರು.ಜಾಹೀರಾತು ಪ್ರಕಟಗೊಂಡ ಪತ್ರಿಕೆ ವಿತರಣೆ ಆಗಿಲ್ಲ. ಟೆಂಡರ್ ಅರ್ಜಿ ಪಡೆಯಲು ಫೆ. 21ರ ಸಂಜೆ 3ರಿಂದ 5ಗಂಟೆ ತನಕ ಕಾಲಾವಕಾಶ ನಿಗದಿಗೊಳಿಸಿದ್ದು, ಅರ್ಜಿ ವಿತರಿಸಬೇಕಾದ ಮುಖ್ಯಾಧಿಕಾರಿ, ಪ್ರಭಾವಿ ಗುತ್ತಿಗೆದಾರರು ಹಾಗೂ ಪುರಸಭಾ ಸದಸ್ಯರೊಂದಿಗೆ ಶಾಮೀಲಾಗಿ ಅರ್ಜಿ ನೀಡುವ ಸಮಯಕ್ಕೆ ದಿಢೀರ್ ರಜೆ ಮೇಲೆ ತೆರಳಿದ್ದನ್ನು ಗುತ್ತಿಗೆದಾರರು ಖಂಡಿಸಿದರು.ಗುತ್ತಿಗೆದಾರರಾದ ಮಂಜಪ್ಪ, ಶಿವಲಿಂಗಯ್ಯ, ರಾಮಕೃಷ್ಣ, ನಾರಾಯಣ ಟೆಂಡರ್ ಪ್ರಕ್ರಿಯೆ ನಿಯಮ ಸಂಪೂರ್ಣವಾಗಿ ಗಾಳಿಗೆ ತೂರಿರುವುದರಿಂದ ಇದನ್ನು ರದ್ದುಗೊಳಿಸಿ ಮರು ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಆಗ್ರಹಿಸಿದರು.ಮಧ್ಯೆ ಪ್ರವೇಶಿಸಿದ ಪುರಸಭಾ ಸದಸ್ಯರು ಮತ್ತು ಗುತ್ತಿಗೆದಾರರಾಗಿರುವ ಕೆಲ ಪ್ರಭಾವಿಗಳು, ನಿಯಮಾನುಸಾರವಾಗಿಯೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಮರು ಟೆಂಡರ್ ಪ್ರಕ್ರಿಯೆಗೆ ಅವಕಾಶವಿಲ್ಲ ಎಂದು ಮುಖ್ಯಾಧಿಕಾರಿ ಬೆಂಬಲಕ್ಕೆ ನಿಂತರು. ಈ ಸಂದರ್ಭದಲ್ಲಿ ಗುತ್ತಿಗೆದಾರರು ಮತ್ತು ಪ್ರಭಾವಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸುವ ಹಂತಕ್ಕೆ ಹೋಯಿತು ಎನ್ನಲಾಗಿದೆ.ಹಿರಿಯ ಸದಸ್ಯರು ಮಾತುಕತೆ ನಡೆಸಿ ಅಸಮಾಧಾನಗೊಂಡಿದ್ದ ಗುತ್ತಿಗೆದಾರರು ಮತ್ತು ಪ್ರಭಾವಿ ಸದಸ್ಯರ ನಡುವೆ `ಒಳ ಒಪ್ಪಂದ~ ಮಾಡಿಸಿ, ಕಾಮಗಾರಿ ಗುತ್ತಿಗೆಯನ್ನು ಹೊಂದಾಣಿಕೆ ಮಾಡಿಕೊಂಡು ಹಂಚಿಕೊಳ್ಳುವ ನಿರ್ಣಯ ತೆಗೆದುಕೊಂಡ ಮೇರೆಗೆ ಪರಿಸ್ಥಿತಿ ಶಾಂತವಾಯಿತು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry