ಕುಣಿದು ಬಂದು ಅರಿವು ಮೂಡಿಸಿದ ಪೂಜಾ

7

ಕುಣಿದು ಬಂದು ಅರಿವು ಮೂಡಿಸಿದ ಪೂಜಾ

Published:
Updated:

ವಿಜಾಪುರ: ಕರ್ನಾಟಕ  ರಾಜ್ಯ ಏಡ್ಸ್ ಪ್ರತಿಬಂಧಕ ಸಂಸ್ಥೆಯ ಪ್ರಚಾರ ರಾಯಭಾರಿ, ಬೆಳ್ಳಿ ತೆರೆಯ ಬೆಡಗಿ ಪೂಜಾ ಗಾಂಧಿ ಸೋಮವಾರ ಇಲ್ಲಿಯ ವೇದಿಕೆಯಲ್ಲಿ ಹಾಡಿ ಕುಣಿದರೆ, ಶಾಪೇಟಿಯ ಕೆಲವರ ಮನೆಯ ಬಾಗಿಲಿಗೆ ತೆರಳಿ ಏಡ್ಸ್‌ನ ಅರಿವು ಮೂಡಿಸಿದರು.ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಸಹಯೋಗದಲ್ಲಿ ವಿಜಾಪುರ ಮತ್ತು ಬಸವನ ಬಾಗೇವಾಡಿ ತಾಲ್ಲೂಕುಗಳಲ್ಲಿ ಇದೇ 11ರ ವರೆಗೆ ಹಮ್ಮಿಕೊಂಡಿರುವ ಎಚ್.ಐ.ವಿ. ಬಗ್ಗೆ ಅರಿವು ಮೂಡಿಸುವ ವಿಶೇಷ ಆಂದೋಲನಕ್ಕೆ ಸೋಮವಾರ ಇಲ್ಲಿ ಚಾಲನೆ ನೀಡಿದರು.ಶಾಪೇಟಿ ಓಣಿಯ ಬೌರವ್ವ ಅವರ ಮನೆಗೆ ಹೋಗಿ, `ನಮಸ್ಕಾರ, ಊಟ ಆಯ್ತಾ? ಮಗಳು ಓದ್ತಾ ಇದ್ದಾಳಾ? ನಾನು ನಿಮಗೆ ಗೊತ್ತಾ? ನನ್ನ ಹೆಸರು ಪೂಜಾ ಗಾಂಧಿ, ನಾನು ಚಿತ್ರನಟಿ. ಮುಂಗಾರು ಮಳೆಯ ಪೂಜಾಗಾಂಧಿ~ ನಾನು ಏಡ್ಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಬಂದಿರುವೆ. ನಿಮಗೆ ಎಚ್.ಐ.ವಿ. ಏಡ್ಸ್ ಸೋಂಕಿನ ಬಗ್ಗೆ ಮಾಹಿತಿ ಗೊತ್ತಾ?  ಎಂದೆಲ್ಲ ಪ್ರಶ್ನಿಸಿದರು. ಕೆಲ ಮನೆಗಳಿಗೆ ತೆರಳಿ ಏಡ್ಸ್ ರೋಗದ ಬಗ್ಗೆ ಪಾಠ ಮಾಡಿದರು. ಕರಪತ್ರ ಹಂಚಿ, ಬಾಗಿಲಿಗೆ ಸ್ಟಿಕರ್ ಅಂಟಿಸಿದರು. ಸಮಾರಂಭ ನಡೆದ ಚಾಂದನಿ ಹಾಲ್‌ನ ವೇದಿಕೆಯಲ್ಲಿ ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ಮಾತು ಆರಂಭಿಸಿ, ಭಾಷಣಕ್ಕಿಂತ ಸಂವಾದಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ವಿದ್ಯಾರ್ಥಿಯನ್ನು ವೇದಿಕೆಗೆ ಬರಮಾಡಿಕೊಂಡು `ಏಡ್ಸ್ ಹೇಗೆ ಬರುತ್ತದೆ? ಏಡ್ಸ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳೇನು?~ ಎಂದು ಕೇಳುತ್ತ, ಅದಕ್ಕೆ ಉತ್ತರ ನೀಡಿದರು.ಅಶ್ವಿನಿ ನರ್ಸಿಂಗ್ ಶಾಲೆಯ ವಿದ್ಯಾರ್ಥಿನಿಯರೊಂದಿಗೆ `ಅನಿಸುತಿದೆ ಯಾಕೋ ಇಂದು... ನೀನೇನೆ ನನ್ನವಳೆಂದು...~, `ಕುಣಿದು ಕುಣಿದು ಬಾರೆ...~ ಹಾಡುಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರು.ತಮಾಷೆ ಮಾಡುತ್ತ, ವಾರೆ ನೋಟ ಬೀರುತ್ತ ಮಾತು ಮುಗಿಸಿದ ಪೂಜಾ, `ನನ್ನ ಮಾತು ನಿಮಗೆ ಅರ್ಥವಾಯಿತು ತಾನೆ?~ ಎಂದು ಕೇಳಿ ಅದನ್ನು ಖಚಿತಪಡಿಸಿಕೊಂಡರು!ನಾನು ಕುಮಾರಿ...: ಜಿ.ಪಂ. ಆರೋಗ್ಯ  ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ ಅವರು ತಮ್ಮ ಭಾಷಣದಲ್ಲಿ `ಶ್ರೀಮತಿ ಪೂಜಾ ಗಾಂಧಿ~ ಎಂದು ಕರೆಯುತ್ತಿದ್ದಂತೆ, `ನಾನು ಶ್ರೀಮತಿ ಅಲ್ಲಾರೀ. ನಾನು ಕುಮಾರಿ...ಕುಮಾರಿ~ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕುಮಾರಿ ಎಂದು ಕರೆಯಿಸಿಕೊಂಡು ಸಮಾಧಾನ ಪಟ್ಟುಕೊಂಡರು.

ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಮ್ಮ ಭಾಷಣದ ಆರಂಭದಲ್ಲಿ `ಕುಮಾರಿ ಪೂಜಾ ಗಾಂಧಿ ಅವರೇ~ ಎಂದು ಕರೆಯುತ್ತ, `ನೋಡಿ ಪೂಜಾ ಅವರೆ, ಕುಮಾರಿ ಎಂಬ ಪದವನ್ನು ನಾನು ಸರಿಯಾಗಿ ಹೇಳುತ್ತಿದ್ದೇನೆ~ ಎಂದು  ಹಾಸ್ಯ ಚಟಾಕಿ ಹಾರಿಸುತ್ತಿದ್ದಂತೆ ಪೂಜಾ ನಸುನಕ್ಕರು.ಸಾಂತ್ವನ ಹೇಳಿ:ಎಚ್.ಐ.ವಿ. ಬಾಧಿತ ಗಂಗಯ್ಯ ಹಿರೇಮಠ ಮಾತನಾಡಿ, `ನಮ್ಮನ್ನು ತಿರಸ್ಕಾರದಿಂದ ನೋಡಬೇಡಿ. ನಮಗೆ ಸಾಂತ್ವನದ ಮಾತುಗಳನ್ನಾಡಿದರೆ ಇನ್ನೂ ಹೆಚ್ಚು ದಿನ ಬದುಕುತ್ತೇವೆ. ಎಚ್.ಐ.ವಿ. ಸೋಂಕಿತರು ಕುಟುಂಬದ ಇತರ ಜನರೊಂದಿಗೆ ಬದುಕಿದರೆ, ಮತ್ತೊಬ್ಬರಿಗೆ ಏಡ್ಸ್ ಹರಡುತ್ತದೆ ಎಂಬುದು ತಪ್ಪು ಕಲ್ಪನೆ~`ನಾನು ನನ್ನ ಕುಟುಂಬ, ನನ್ನ ಮೊಮ್ಮಕ್ಕಳೊಂದಿಗೆ ಬದುಕುತ್ತಿದ್ದೇನೆ. ಅವರಿಗೆ ತುತ್ತು ತಿನಿಸುತ್ತೇನೆ. ನನ್ನ ಎಂಜಲನ್ನು ಮೊಮ್ಮಕ್ಕಳು ತಿನ್ನುತ್ತಿದ್ದಾರೆ. ಅವರನ್ನು ಅಪ್ಪಿ ಪ್ರೀತಿಯಿಂದ ಮುದ್ದಾಡುತ್ತೇನೆ. ಇದರಿಂದ ಯಾವುದೇ ತೊಂದರೆ ಇಲ್ಲ, ಆದರೆ ಎಚ್.ಐ.ವಿ. ಸೋಂಕಿತರ ರಕ್ತ ಮಾತ್ರ ಇತರರಿಗೆ ನೀಡಿದರೆ, ಈ ಸೋಂಕು ಹರಡುತ್ತದೆ.ಈ ಕುರಿತಂತೆ ಜನರಿಗೆ ಮಾಹಿತಿ ನೀಡುವುದು ಅವಶ್ಯವಿದೆ. ಆ ಮೂಲಕ ಎಲ್ಲ ಎಚ್.ಐ.ವಿ. ಬಾಧಿತರನ್ನು ಸಮಾಜದ ಮುಖ್ಯವಾಹಿನಿಯೊಂದಿಗೆ ಬದುಕಲು ಅವಕಾಶವಾಗುತ್ತದೆ~ ಎಂದು ಹೇಳಿದರು. ಜಿ.ಪಂ. ಸಿಇಒ ಎ.ಎನ್. ಪಾಟೀಲ, ಡಾ. ಲೀಲಾ ಸಂಪಿಗೆ, ಡಾ.ಆರ್.ಎಂ. ಸಜ್ಜನ, ಡಾ. ವಿಶ್ವನಾಥ ಗಲಗಲಿ, ಡಾ. ಹಡಗಲಿ, ಪೀಟರ್ ಅಲೆಕ್ಝಾಂಡರ್, ಎ.ಆರ್.ಟಿ. ಕೇಂದ್ರದ ರವಿ ಕಿತ್ತೂರ ಇತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry