ಕುಣಿದ ಹೆಜ್ಜೆಗಳು: ನಲಿದ ಬೆರಳುಗಳು

7

ಕುಣಿದ ಹೆಜ್ಜೆಗಳು: ನಲಿದ ಬೆರಳುಗಳು

Published:
Updated:
ಕುಣಿದ ಹೆಜ್ಜೆಗಳು: ನಲಿದ ಬೆರಳುಗಳು

ಒಂಬತ್ತು ವರ್ಷದ ಆಗ್ನಿಕಾ ಅಜಯ್‌ಕುಮಾರ್ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನೃತ್ಯ ಸಂಭ್ರಮದಲ್ಲಿ ಅಮಿತೋತ್ಸಾಹ ಹಾಗೂ ಖಚಿತತೆಯಿಂದ ನರ್ತಿಸಿ ನೋಡುಗರ ಮನ ಮುದಗೊಳಿಸಿದಳು.

 

ಆ ಪುಟ್ಟ ಹುಡುಗಿ ತಾನು ಮಂಡಿಸಿದ ರಚನೆಗಳನ್ನು ಅನುಭವಿಸಿ ನರ್ತಿಸಿದ ಪರಿ ಮೆಚ್ಚತಕ್ಕದ್ದು. ಅಕ್ಷರಶಃ ಆಕೆ ಕುಣಿದಾಡಿದಳು. ಆಕೆಯ ಹೆಜ್ಜೆ ಗೆಜ್ಜೆಗಳು, ಹಸ್ತ ಮುಖಗಳು ಅರ್ಥಪೂರ್ಣವಾದ ಸಂವಹನಕ್ರಿಯೆಯಲ್ಲಿ ತೊಡಗಿಕೊಂಡವು.ಮೈಸೂರಿನ ಶ್ರೀನಿಮಿಷಾಂಬಾ ನೃತ್ಯಶಾಲೆಯ ನುರಿತ ಗುರು ಶ್ರೀಧರ್ ಜೈನ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ತರಬೇತಿ ಹೊಂದಿರುವ ಆಗ್ನಿಕಾ, ತನ್ನ ಗುರುಗಳ ದಕ್ಷತೆ ಪ್ರತಿಬಿಂಬಿಸುವಂತಹ ಪ್ರದರ್ಶನ ನೀಡಿದಳು.

 

ಆಕರ್ಷಕ ಮುಗುಳ್ನಗೆ, ಸಕ್ರಮ ನಯನ ಹಸ್ತ ಪಾದಗಳ ಚಲನೆಗಳು, ತನ್ಮಯ ಅಭಿನಯ ಮತ್ತು ಲಯ ವೈವಿಧ್ಯದ ಶ್ರೀಮಂತ ನೃತ್ತ ಪ್ರಶಂಸೆಗೆ ಪಾತ್ರವಾಯಿತು.

ಶಿವತಾಂಡವದ ರಭಸ ಚಲನೆಗಳಲ್ಲಿ ಸೊಗಸಿತ್ತು. ಹರಿಕುಣಿದಾ (ಮಲಯಮಾರುತ) ದೇವರನಾಮದಲ್ಲಿ ಬಾಲಕೃಷ್ಣನ ರೂಪ ಕಣ್ಣು, ಮನಸ್ಸಿಗೆ ಸಂತಸ ನೀಡಿತು.ನವರಸಗಳ ಪೋಷಣೆ ಮತ್ತು ಪ್ರಕಟಣೆಯಲ್ಲಿ ಆಕೆಯ ಅಭಿನಯ ಪ್ರೌಢಿಮೆ ರೋಚಕ. ರೂಪಮುಜೂಚಿ (ತೋಡಿ) ಪದವರ್ಣದ ಅನುವರ್ತನೆಯಲ್ಲಿ ನಯ ನಾಜೂಕಿನ ಅಡುವುಗಳು, ತಟ್ಟುಮೆಟ್ಟುಗಳು, ಲಯ ವಿವಿಧತೆಗಳು ಗಮನಾರ್ಹವಾಗಿದ್ದವು.

ಗುರು ಶ್ರೀಧರ್ ಜೈನ್ (ನಟುವಾಂಗ), ರಾಜೇಶ್ವರೀ ಪಂಡಿತ್ (ಗಾಯನ) ಮುಂತಾದವರ ಸಂಗೀತ ಸಹಕಾರ ಔಚಿತ್ಯಪೂರ್ಣವಾಗಿತ್ತು. ಮ್ಯಾಂಡೊಲಿನ್ ಮಾಂತ್ರಿಕ


ಕರ್ನಾಟಕ ಸಂಗೀತದ ಉತ್ಕೃಷ್ಟ ಹಾಗೂ ಉದಾತ್ತ ರೂಪ ಮತ್ತು ಅದರ ಕೇಳ್ಮೆ ಮನಸ್ಸಿಗೆ ಆನಂದವನ್ನು ಉಂಟು ಮಾಡುವಂತಹುದು. ಶ್ರೀಗುರುವಾಯೂರಪ್ಪನ್ ಭಜನಾಸಭಾ ಟ್ರಸ್ಟ್‌ನ ಆಶ್ರಯದಲ್ಲಿ 34ನೆ ವಾರ್ಷಿಕ ಗೋಕುಲಾಷ್ಟಮಿ ಉತ್ಸವದ ಪ್ರಯುಕ್ತ ಹೆಸರಾಂತ ಕಲಾವಿದರ ಗಾಯನ ವಾದನಗಳು ಎನ್‌ಜಿಇಎಫ್ ಬಡಾವಣೆಉನ್ನತಿ ಕೇಂದ್ರದಲ್ಲಿ ನಡೆಯುತ್ತಿದ್ದು ರಮ್ಯವಾದ ರಸಾನುಭವ ತುಂಬಿದ ಸಭೆಗಳನ್ನು ಸೆಳೆಯುತ್ತಿದೆ.ಮೌಲಿಕ ವಿದ್ವತ್ತು, ಚಿಕ್ಕಗಾತ್ರದ ವಾದ್ಯ ಮಾಂಡೋಲಿನ್ ಮೇಲೆ ಅಸಾಮಾನ್ಯ ಪ್ರಭುತ್ವ, ಅದ್ಭುತ ಲಯ ವೈವಿಧ್ಯಗಳ ಜೊತೆಗೆ ಶ್ರೋತೃಗಳ ಆಸಕ್ತಿಯನ್ನು ಹೇಗೆ ಪೋಷಿಸಿ ತಣಿಸಬಹುದೆಂಬ ಕಛೇರಿ ತಂತ್ರವನ್ನು ಸಾಧಿಸಿಕೊಂಡಿದ್ದಾರೆ ಯುವ ಮಾಂಡೋಲಿನ್ ಮಾಂತ್ರಿಕ ಯು.ಶ್ರೀನಿವಾಸ್.ಇಲ್ಲ ಅವರ ಕೈಬೆರಳುಗಳು ಅವರ ಪುಟ್ಟ ವಾದ್ಯದ ಮೇಲೆ ಕುಣಿದಾಡಿ ನಲಿದಾಡಿ ಭವ್ಯವಾದ ನಾದಲೋಕವನ್ನೇ ಸೃಷ್ಟಿಸಿದವು. ತಮ್ಮ ಎಂದಿನ ಶೈಲಿಯಲ್ಲಿ ಹಸನ್ಮುಖಿಗಳಾಗಿ ಪಕ್ಕವಾದ್ಯಗಾರರನ್ನು ತಮ್ಮಡನೆ ಸದಾ ಕೊಂಡೊಯ್ದು ಅನಂತ ನಾದತರಂಗಗಳನ್ನು ಎಬ್ಬಿಸಿದರು. ಹಂಸಧ್ವನಿ (ವಂದೇಜಗತ್‌ವಲ್ಲಭಂ) ಮತ್ತು ದೇವಗಾಂಧಾರಿ (ಕ್ಷೀರಸಾಗರ) ಶ್ರವಣ ಸುಖವನ್ನು ಚುರುಕುಗೊಳಿಸಿದ ನಿರೂಪಣೆಗಳಾದವು.ಆನಂದಭೈರವಿ ರಾಗ ಹಾಗೂ ಅದರಲ್ಲಿ ರಚಿತವಾಗಿರುವ ತ್ಯಾಗರಾಜರ ಘನಕೃತಿ `ತ್ಯಾಗರಾಜ ಯೋಗವೈಭವಂ~ ಶಾಸ್ತ್ರ ಸಂಪ್ರದಾಯ ಸಮ್ಮತವಾಗಿ ವೈಭವಿಸಿತು. ಕಾಮವರ್ಧಿನಿ ರಾಗ, ತಾನ ಮತ್ತು ಪಲ್ಲವಿಯಲ್ಲಿ ಕಲೆ ಮತ್ತು ತಂತ್ರಗಳ ಸಮ್ಮಿಳನವಾಗಿ ರಾಗಮಾಲಿಕಾ ವಿಸ್ತರಣೆ ರಂಜಿಸಿತು.ಗುರುಪ್ರಸನ್ನ ಅವರ ಖಂಜಿರವಾದನವೂ ಸೇರಿದಂತೆ ಹಿರಿಯ ಪಕ್ಕವಾದ್ಯಗಾರರ ಸಹಕಾರದೊಂದಿಗೆ ಅವರು ಸಾದರಪಡಿಸಿದ ಮೋಹನಕಲ್ಯಾಣಿ (ಆಡಿನೆಯೆ ಕಣ್ಣ), ಸಾಮ (ಅನ್ನಪೂರ್ಣೆ), ಹಿಂದುಸ್ತಾನಿ ಕಾಪಿ (ಆಡಿಸಿದಳೆಶೋದೆ) ಮತ್ತು ವಾಸಂತಿ ತಿಲ್ಲಾನ ಖುಷಿಕೊಟ್ಟವು.ಅಪೂರ್ವ ರಾಗ ದರ್ಶನ

ಇದೇ ಸಂಗೀತೋತ್ಸವದಲ್ಲಿ ತಮ್ಮ ವಿಶಿಷ್ಟ ಚಿತ್ರವೀಣಾ ವಾದನದ ಮೂಲಕ ಕೆಲವು ಅಪೂರ್ವ ರಾಗಗಳು ಮತ್ತು ಅಪರೂಪ ಕೃತಿಗಳ ದರ್ಶನವನ್ನು ಮಾಡಿಸಿದರು ಎನ್.ರವಿಕಿರಣ್ಚಿತ್ರವೀಣೆಯಲ್ಲಿ ಕರ್ನಾಟಕ ಸಂಗೀತದ ಸೊಬಗನ್ನು ಸೆರೆಹಿಡಿದು ರಸಿಕರ ಮನ ಈಗಾಗಲೇ ಗೆದ್ದಿರುವ ಅವರ ಅಂದಿನ ಕಛೇರಿಯೂ ನಿತ್ಯ ನವೀನತೆಯಿಂದ ಕಿವಿಗಳನ್ನು ತುಂಬಿತು. ಗುರ್ಜರಿ (ತ್ಯಾಗರಾಜರ ಅಪೂರ್ವ ಕತಿ ವರಾಲಂದುಕೊಮ್ಮನಿ), ಗರುಡಧ್ವನಿ (ತತ್ವಮರಿಯತರಮ), ವರಾಳಿ (ಕಾಮಾಕ್ಷಿ) ಮತ್ತು ಬಹುದಾರಿ (ಬ್ರೋವಭಾರಮ) ರಾಗಗಳ ಸೌಂದರ್ಯ, ಪ್ರಯೋಗ ಮತ್ತು ಪ್ರಸಾರದಲ್ಲಿನ ವಿಶಿಷ್ಟತೆಗಳನ್ನು ಅವರು ತೋರಿದರು.ಪ್ರಾಚೀನರಾಗ ದೇವಗಾಂಧಾರಿ (ಕ್ಷೀರಸಾಗರಶಯನ) ಮತ್ತು ಹಿಂದೋಳ (ಸಾಮಜವರಗಮನ) ಶಾಸ್ತ್ರೀಯತೆಯ ಸೊಗಡು ಮತ್ತು ಪ್ರವಾಹದ ವಿಶೇಷವನ್ನು ಪ್ರಕಟಿಸಿದರು. ಷಣ್ಮುಖಪ್ರಿಯ ರಾಗ, ತಾನ ಮತ್ತು ಪಲ್ಲವಿಯಲ್ಲಿ ಕಲೆ, ಸೌಂದರ್ಯ ಮತ್ತು ತಾಂತ್ರಿಕತೆ ಮೇಳೈಸಿದವು. ತುಂಗಾತೀರ, ಚೆನೇನೆಟ್ಲು (ಫರಜ್‌) ಮತ್ತು ನೀಮಾಟಲೇಮಾಯನುರಾ (ಪೂರ್ವಿಕಲ್ಯಾಣಿ) ಸಾಹಿತ್ಯಭಾವದಿಂದ ತುಂಬಿ ಬಂದಿತು.ಅಕ್ಕರೈ ಶುಭಲಕ್ಷ್ಮಿ (ಪಿಟೀಲು), ಪ್ರಸಾದ್ (ಮೃದಂಗ) ಮತ್ತು ರಾಮಾನುಜಂ (ಘಟ) ಉಪಯುಕ್ತವಾಗಿ ಸ್ಪಂದಿಸಿದರು.ಗಾಯನ ಕುಶಲತೆ

ಅಲ್ಲಿ ನಡೆದ ಮಲ್ಲಾಡಿ ಸೋದರರ (ಶ್ರೀರಾಮಪ್ರಸಾದ್ ಮತ್ತು ರವಿಕುಮಾರ್) ಗಾಯನ ಏಕರೂಪತೆ, ಗಾಯನ ಕುಶಲತೆ ಮತ್ತು ಲಯ ದಿಂದ ಗಮನ ಸೆಳೆಯಿತು. ಸಂದರ್ಭಕ್ಕೆ ತಕ್ಕಂತೆ ತಮ್ಮ ಕಛೇರಿಯನ್ನು ಯೋಜಿಸಿಕೊಂಡಿದ್ದು ವಿಶೇಷ.ಅದರಂತೆ ಅಂದು ರಾಘವೇಂದ್ರಸ್ವಾಮಿಗಳ ಆರಾಧನೆಯಾದ್ದರಿಂದ ಅವರನ್ನು ಕುರಿತಾದ `ಭಜ ಮಾನಸ ರಾಘವೇಂದ್ರಂ~ (ತಿಲ್ಲಂಗ್) ಭಜನೆಯನ್ನು ಭಾವಪೂರ್ಣವಾಗಿ ಕೇಳಿಸಿದರು. ಅಂತೆಯೇ ಅಂದು ಸ್ವಾತಂತ್ರ್ಯ ದಿವಸವಾದ್ದರಿಂದ ಭಾರತ ಮಾತೆಯ ಗುಣಗಾನ ಮಾಡುವ ಸಂಸ್ಕೃತ ರಚನೆ `ಇಯಂ ಸ್ವತಂತ್ರ ಭಾರತಿ~ (ರಾಗಮಾಲಿಕೆಯಲ್ಲಿ) ಹಾಡಿದ್ದು ಸಮಯೋಚಿತವಾಗಿತ್ತು.ರವಿ (ಪಿಟೀಲು), ಲಕ್ಷ್ಮೀನಾರಾಯಣರಾಜು (ಮೃದಂಗ) ಮತ್ತು ಎ.ಎಸ್.ಎನ್.ಸ್ವಾಮಿ (ಖಂಜರಿ) ಅವರ ಉತ್ಸಾಹವರ್ಧಕ ಸಹಕಾರ ಸಹಿತ ನಡೆದ ಈ ಸೋದರರ ಯುಗಳ ಗಾಯನದಲ್ಲಿ ಆರಭಿ (ನಾದಸುಧಾ ಸ್ವರಗಳೊಂದಿಗೆ), ಅಪರೂಪದ ಕಾಂತಾಮಣಿ ರಾಗ ಮತ್ತು ತ್ಯಾಗರಾಜರ `ಬಹುಮೂಲ್ಯ ಕತಿ ಪಾಲಿಂತುವೋ~ (ಆಲಾಪನೆ ಮತ್ತು ಸ್ವರಗಳು) ಮತ್ತು ಲಾಲಿಯೂಗವಯ್ಯ (ಕೇದಾರಗೌಳ) ಕರ್ಣಮನೋಹರವಾಗಿ ರೂಪುಗೊಂಡವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry