ಕುಣಿಯೋಣು ಬಾರಾ...

6

ಕುಣಿಯೋಣು ಬಾರಾ...

Published:
Updated:

ನರ್ತಿಸಲು ಬಾರದವರಿಗಾಗಿಯೇ ನೃತ್ಯ ಸ್ಪರ್ಧೆ ಏರ್ಪಡಿಸಿದರೆ ಹೇಗಿರುತ್ತದೆ? ಅದರಲ್ಲೂ ಸೆಲೆಬ್ರಿಟಿಗಳನ್ನು ಒಂದು ವೇದಿಕೆ ಮೇಲೆ ಕರೆತಂದು ಅವರಲ್ಲಿ ಹೆಜ್ಜೆ ಹಾಕುವ ಹುಮ್ಮಸ್ಸು ಮೂಡಿಸಿದರೆ? ‘ಬಿಗ್‌ಬಾಸ್’ ಮತ್ತು ‘ಇಂಡಿಯನ್’ ರಿಯಾಲಿಟಿ ಷೋಗಳ ಬಳಿಕ ಈ ಟೀವಿ ಕನ್ನಡ ಚಾನೆಲ್ ‘ತಕಧಿಮಿತ ಡ್ಯಾನ್ಸಿಂಗ್ ಸ್ಟಾರ್’ ಎಂಬ ಸೆಲೆಬ್ರಿಟಿಗಳ ನೃತ್ಯ ಸ್ಪರ್ಧೆ ಶುರುಮಾಡುತ್ತಿದೆ.ವಿವಿಧ ಕ್ಷೇತ್ರಗಳಲ್ಲಿ ಜನಪ್ರಿಯರಾಗಿರುವ ೧೨ ಸೆಲೆಬ್ರಿಟಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ನಿರ್ಮಾಪಕ, ನಟ ಸಿಹಿಕಹಿ ಚಂದ್ರು, ನರ್ಸ್ ಜಯಲಕ್ಷ್ಮಿ, ಗಾಯಕಿ ಶಮಿತಾ ಮಲ್ನಾಡ್, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಋಷಿಕುಮಾರ ಸ್ವಾಮಿ, ಕ್ರಿಕೆಟಿಗ ದೊಡ್ಡ ಗಣೇಶ್, ಸುನಾಮಿ ಕಿಟ್ಟಿ, ನಿರೂಪಕಿಯರಾದ ಅನುಪಮಾ, ನವ್ಯಾ, ಕುಮುದಾ, ಬಾಲನಟಿ ಸಾನಿಯಾ ಅಯ್ಯರ್, ನಟ ಚಂದನ್ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವವರು. ನಿರ್ದೇಶಕ ‘ಮಠ’ ಗುರುಪ್ರಸಾದ್, ನಟಿ ರಕ್ಷಿತಾ ಮತ್ತು ನಟ ಯೋಗೀಶ್ ಈ ಸ್ಪರ್ಧೆಯ ತೀರ್ಪುಗಾರರು. ಅಕುಲ್ ಬಾಲಾಜಿ ಮತ್ತು ಶ್ವೇತಾ ಪಂಡಿತ್ ನಿರೂಪಕರು.‘ಬಿಗ್‌ಬಾಸ್’ನ ಸ್ಪರ್ಧಾಳುಗಳನ್ನೇ ಈ ಸ್ಪರ್ಧೆಗೆ ಕರೆತರುವ ಉದ್ದೇಶವಿತ್ತು. ಅದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಆದರೆ ಜನರಿಗೆ ಚೆನ್ನಾಗಿ ಪರಿಚಯವಿರುವ ಸೆಲೆಬ್ರಿಟಿಗಳನ್ನೇ ಕರೆತರುವುದರಿಂದ ಅವರನ್ನು ತಲುಪುವುದು ಸುಲಭ ಎನ್ನುವ ಸಲುವಾಗಿ ಜನಪ್ರಿಯರನ್ನೇ ಈ ಸ್ಪರ್ಧೆಗೆ ಕರೆಯಿಸಲಾಗಿದೆ’ ಎಂದು ಈ ಟೀವಿ ಚಾನೆಲ್‌ನ ಪರಮೇಶ್ವರ ಗುಂಡ್ಕಲ್ ತಿಳಿಸಿದರು.‘ಇಲ್ಲಿ ಸೆಲೆಬ್ರಿಟಿಗಳು ಒಂಟಿಯಾಗಿ ನರ್ತಿಸುವುದಿಲ್ಲ. ಪ್ರತಿಯೊಬ್ಬ ಸ್ಪರ್ಧಿಗೂ ಪರಿಣಿತ ನೃತ್ಯಪಟುವೊಬ್ಬರು ಜೋಡಿಯಾಗಲಿದ್ದಾರೆ. ಹಾಗೆಯೇ ವೃತ್ತಿಪರ ನೃತ್ಯ ಸಂಯೋಜಕರಿಂದ ತರಬೇತಿಯನ್ನೂ ನೀಡಲಾಗುತ್ತದೆ’ ಎಂದು ಚಾನೆಲ್‌ನ ನಾನ್‌ಫಿಕ್ಷನ್ ವಿಭಾಗದ ಮುಖ್ಯಸ್ಥ ರಾಘವೇಂದ್ರ ಹುಣಸೂರು ತಿಳಿಸಿದರು.ಈ ರಿಯಾಲಿಟಿ ಷೋಅನ್ನು ಪ್ರಾಯೋಜಿಸುತ್ತಿರುವ ಎಂಟಿಎಸ್‌ನ ಕರ್ನಾಟಕ ವೃತ್ತದ ಸಿಇಒ ಶಂಕರ್ ಬಾಲಿ ಉಪಸ್ಥಿತರಿದ್ದರು. ‘ಡ್ಯಾನ್ಸಿಂಗ್ ಸ್ಟಾರ್’ ಜನವರಿ ೧೧ ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ ೯ ಗಂಟೆಗೆ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry