ಕುತೂಹಲಕಾರಿ ಚಿತ್ರಗಳ ಫಸಲು

7
ಪಂಚರಂಗಿ

ಕುತೂಹಲಕಾರಿ ಚಿತ್ರಗಳ ಫಸಲು

Published:
Updated:

ಹೊಸ ವರ್ಷಕ್ಕೆ ಹಲವು ನಟ–ನಟಿಯರು ತಮ್ಮ ಸಂಕಲ್ಪ ಏನು ಎಂಬುದನ್ನು ಒಂದೆಡೆ ಹಂಚಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಬರಲಿರುವ ಸಿನಿಮಾ ಫಲಸಿನ ಲೆಕ್ಕಾಚಾರ. 2014ರಲ್ಲಿಯೂ ಜನ ಕಣ್ಣರಳಿಸಿ ಕಾದಿರುವ ಹಲವು ಹಿಂದಿ ಚಿತ್ರಗಳು ತೆರೆಕಾಣಲಿವೆ.ನೂರು ಕೋಟಿ ಗಳಿಕೆಯ ಮಾತು ಮುಖ್ಯವಾಗಿರುವ ಈ ಹೊತ್ತಲ್ಲಿ ಜನವರಿ, ಸಲ್ಮಾನ್‌ ಖಾನ್‌ ಅಭಿನಯದ ‘ಜೈ ಹೋ’ ಚಿತ್ರದ ಬಿಡುಗಡೆಗೆ ಸಾಕ್ಷಿಯಾಗಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ತಿಂಗಳ 24ರಂದು ಸಲ್ಮಾನ್‌ ಖಾನ್‌ ಸಿನಿಮಾ ತೆರೆಕಾಣಲಿದೆ.

ತಮ್ಮ ಭುಜಬಲ ಒಂದರಿಂದಲೇ ಕೋಟಿಗಟ್ಟಲೆ ಆದಾಯ ಗಳಿಸಬಲ್ಲ ಚಿತ್ರಗಳ ನಾಯಕ ಎನಿಸಿರುವ ಸಲ್ಮಾನ್‌ ಈ ಚಿತ್ರದಲ್ಲೂ ಹೊಡೆದಾಟದ ದೃಶ್ಯಗಳ ಮೂಲಕ ರಂಜಿಸಿದ್ದಾರೆ. ಚಿತ್ರದ ಟ್ರೈಲರ್‌ಗಳೇ ಅದಕ್ಕೆ ಪುಷ್ಟಿ ನೀಡುವಂತಿವೆ. ಸಲ್ಮಾನ್‌ ಸಹೋದರ ಸೊಹೇಲ್‌ ಖಾನ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಡ್ಯಾನಿ ಡೆನ್‌ಜೊಂಗ್ಪಾ ಈ ಚಿತ್ರದ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ.ಈ ವರ್ಷ ಸಲ್ಮಾನ್‌ ಖಾತೆಯ ಚಿತ್ರ ಇದೊಂದೇ ಅಲ್ಲ. ಜುಲೈ 27ರಂದು ‘ಕಿಕ್‌’ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈದ್‌ ಹಾಗೂ ಸಲ್ಮಾನ್‌ ಖಾನ್‌ ಅಭಿನಯದ ಸಿನಿಮಾ ಸಂಧಿಸಿದರೆ ಅವರ ಅಭಿಮಾನಿಗಳಿಗೆ ನಿಜಕ್ಕೂ ಹಬ್ಬವೇ. ಆ ಲೆಕ್ಕಾಚಾರದಲ್ಲಿ ತೆರೆಕಂಡ ‘ಏಕ್‌ ಥಾ ಟೈಗರ್‌’ 2012ರಲ್ಲಿ ಭಾರೀ ಹಣ ಗಳಿಸಿತ್ತು. ‘ಕಿಕ್‌’ ಕೂಡ ಅದೇ ರೀತಿ ಗಳಿಕೆ ದಾಖಲಿಸಲಿದೆ ಎಂಬುದು ಮಾರುಕಟ್ಟೆ ಪಂಡಿತರ ಲೆಕ್ಕಾಚಾರ.2013ರ ವರ್ಷದ ಕೊನೆಯಲ್ಲಿ ‘ಧೂಮ್‌ 3’ ಚಿತ್ರದ ಅಭಿನಯದಿಂದ ಗಮನಸೆಳೆದ ಅಮೀರ್‌ ಖಾನ್‌ ಈಗ ‘ಥ್ರೀ ಈಡಿಯಟ್ಸ್‌’ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ಗರಡಿಗೆ ಮರಳಿದ್ದಾರೆ. ಅವರ ನಿರ್ದೇಶನದ ‘ಪಿಕೆ’ ಚಿತ್ರದಲ್ಲಿ ಅಮೀರ್‌ ನಾಯಕ. ಚಿತ್ರದ ಕಥೆ ಏನೆಂಬುದು ಗುಟ್ಟಾಗಿದ್ದು, ಜೂನ್‌ 6ರಂದು ತೆರೆಕಾಣುವ ಸಾಧ್ಯತೆ ಇದೆ.‘ಚೆನ್ನೈ ಎಕ್ಸ್‌ಪ್ರೆಸ್‌’ ಹಿಂದಿ ಚಿತ್ರದ ಯಶಸ್ಸಿನ ನಂತರ ಶಾರುಖ್‌ ಖಾನ್‌ ನಿರ್ದೇಶಕಿ ಫರ್‍ಹಾ ಖಾನ್‌ ಆ್ಯಕ್ಷನ್‌/ಕಟ್‌ ಹೇಳಿರುವ ‘ಹ್ಯಾಪಿ ನ್ಯೂ ಇಯರ್‌’ನಲ್ಲಿ ತೊಡಗಿಕೊಂಡಿದ್ದಾರೆ. ಅದಲ್ಲದೆ ಯಶ್‌ರಾಜ್‌ ಫಿಲ್ಮ್ಸ್‌ ಬ್ಯಾನರ್‌ನ ‘ಫ್ಯಾನ್‌’ ಚಿತ್ರದಲ್ಲೂ ಅವರು ಬಣ್ಣ ಹಚ್ಚಲಿದ್ದಾರೆ. ‘ಬ್ಯಾಂಡ್‌ ಬಾಜಾ ಬಾರಾತ್‌’ ಚಿತ್ರ ನಿರ್ದೇಶಿಸಿದ್ದ ಮನೀಶ್‌ ಶರ್ಮ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.ಖಾನ್‌ತ್ರಯರ ಚಿತ್ರಗಳಲ್ಲದೆ ರಣಬೀರ್‌ ಕಪೂರ್‌, ರಣವೀರ್ ಸಿಂಗ್‌, ಸುಶಾಂತ್‌ ಸಿಂಗ್‌ ರಜ್‌ಪೂತ್‌ ತರಹದ ನಟರ ಚಿತ್ರಗಳೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದು, ಅವರ ಅಭಿನಯದ ಚಿತ್ರಗಳೂ ಈ ವರ್ಷ ಬಿಡುಗಡೆಯಾಗಲಿವೆ.‘ಧೇಡ್‌ ಇಷ್ಕಿಯಾ’, ‘ಗುಂಡೇ’, ‘ಬ್ಯಾಂಗ್‌ ಬ್ಯಾಂಗ್‌’, ‘ಬ್ಯೋಮ್‌ಕೇಶ್‌ ಬಕ್ಷಿ’, ‘ಬಾಂಬೆ ವೆಲ್ವೆಟ್‌’, ‘ಫ್ಯಾಂಟಮ್‌’, ‘ಸಿಂಗಂ 2’, ‘ಆ್ಯಕ್ಷನ್‌ ಜಾಕ್ಸನ್‌’, ‘ಭೂತ್‌ನಾಥ್‌ ರಿಟರ್ನ್ಸ್‌’, ‘ಗುಲಾಬ್‌ ಗ್ಯಾಂಗ್‌’, ‘ವೆಲ್‌ಕಮ್‌ ಬ್ಯಾಕ್‌’, ‘ಜಗ್ಗ ಜಾಸೂಸ್‌’, ‘ಹಮ್‌ಶಕಲ್‌’, ‘ದಾವತೆಇಶ್ಕ್‌’, ‘ಹಸೀ ತೋ ಫಸೀ’, ‘ಶಾದಿ ಕೆ ಸೈಡ್‌ ಎಫೆಕ್ಟ್ಸ್‌’, ‘ಮೈ ತೇರಾ ಹ್ಞೂಂ’ 2014ರಂದು ತೆರೆಕಾಣಲಿರುವ ಇತರೆ ಮುಖ್ಯ ಚಿತ್ರಗಳು.  z

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry