ಕುತೂಹಲ ಮೂಡಿಸಿದ ಎಸ್ಪಿ ಸಭೆ

7

ಕುತೂಹಲ ಮೂಡಿಸಿದ ಎಸ್ಪಿ ಸಭೆ

Published:
Updated:
ಕುತೂಹಲ ಮೂಡಿಸಿದ ಎಸ್ಪಿ ಸಭೆ

ಬೆಂಗಳೂರು: ಬಿಬಿಎಂಪಿಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಮತ್ತು ಗಾಂಧಿನಗರ ವಿಭಾಗಗಳಲ್ಲಿ ನಡೆದಿರುವ ಕಾಮಗಾರಿಗಳಲ್ಲಿನ ಅಕ್ರಮ ಪತ್ತೆಗೆ ತನಿಖೆ ನಡೆಸುತ್ತಿರುವ ಬಿಎಂಟಿಎಫ್‌ನ ಎಸ್ಪಿ ಅವರು ಪಾಲಿಕೆಯ ಕೆಲ ಕಾರ್ಯಪಾಲಕ ಎಂಜಿನಿಯರ್‌ಗಳು ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ಸಭೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.ಪಾಲಿಕೆ ಆಯುಕ್ತರ ಗಮನಕ್ಕೆ ತರದೇ ಅಧಿಕಾರಿಗಳ ಸಭೆ ನಡೆಸಿರುವುದಕ್ಕೆ ಪಾಲಿಕೆ ಆಡಳಿತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬಿಎಂಟಿಎಫ್ ವಿರುದ್ಧ ಕ್ರಮ ಜರುಗಿಸಲು ಆಡಳಿತ ಪಕ್ಷ ಚಿಂತನೆ ನಡೆಸಿದೆ.ಹಗರಣ ಕುರಿತು ತನಿಖೆ ನಡೆಸುತ್ತಿರುವ ಬಿಎಂಟಿಎಫ್ ತನಿಖಾಧಿಕಾರಿ ಎಸ್ಪಿ ಎಂ.ಬಿ. ಮಲ್ಲಿಕಾರ್ಜುನ ಸ್ವಾಮಿ ಅವರು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿರುವ ಸಭಾಂಗಣದಲ್ಲಿ ಮಂಗಳವಾರ ಸಂಜೆ ಹಲವು ವಿಭಾಗಗಳ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ಸಭೆ ನಡೆಸಿದ್ದಾರೆ. ಆದರೆ ಅಧಿಕಾರಿಗಳ ಸಭೆ ನಡೆಸುವ ಕುರಿತು ಎಸ್ಪಿ ಅವರು ಆಯುಕ್ತರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದ ಅಧಿಕಾರಿಗಳು ಮುಜುಗರಕ್ಕೆ ಒಳಗಾದಂತಾಗಿದೆ.`ಬಿಎಂಟಿಎಫ್ ತನಿಖೆಗೆ ಅಗತ್ಯವಾದ ಸಹಕಾರವನ್ನು ಪಾಲಿಕೆ ವತಿಯಿಂದ ನೀಡಲಾಗುತ್ತಿದೆ. ಆದರೆ ಬಿಎಂಟಿಎಫ್ ಎಸ್ಪಿ ಅವರು ನನ್ನ ಗಮನಕ್ಕೆ ತರದೇ ಅಧೀನ ಅಧಿಕಾರಿಗಳ ಸಭೆ ನಡೆಸಿರುವುದು ಸೂಕ್ತವಲ್ಲ. ಒಂದೊಮ್ಮೆ ಅಧಿಕಾರಿಗಳ ಸಭೆ ನಡೆಸುವುದಾದರೆ ಪಾಲಿಕೆ ಆಡಳಿತದ ಗಮನಕ್ಕೆ ತರುವಂತೆ ತಿಳಿಸಲಾಗಿದೆ~ ಎಂದು ಆಯುಕ್ತ ಸಿದ್ದಯ್ಯ `ಪ್ರಜಾವಾಣಿ~ಗೆ ತಿಳಿಸಿದರು.ಅಕ್ಷಮ್ಯ ಅಪರಾಧ: `ಬಿಎಂಟಿಎಫ್ ಸಂಸ್ಥೆಗೆ ಪಾಲಿಕೆ ಅಧಿಕಾರಿಗಳ ಸಭೆ ನಡೆಸುವ ಅಧಿಕಾರವಿಲ್ಲ. ಒಂದೊಮ್ಮೆ ಬಿಎಂಟಿಎಫ್ ಎಸ್ಪಿ ಅವರು ಮೇಯರ್ ಅಥವಾ ಆಯುಕ್ತರ ಗಮನಕ್ಕೆ ತರದೇ ಸಭೆ ನಡೆಸಿದ್ದರೆ ಅದು ಅಕ್ಷಮ್ಯ ಅಪರಾಧ. ಇದರಿಂದ ಅಧಿಕಾರಿಗಳು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಒಂದೊಮ್ಮೆ ಆಯುಕ್ತರ ಗಮನಕ್ಕೆ ತರದೆ ಸಭೆ ನಡೆಸಿದ್ದರೆ ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು~ ಎಂದು ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಹೇಳಿದರು.ಸಭೆ ನಡೆಸುವುದು ಸರಿಯಲ್ಲ: `ಆಯುಕ್ತರು ನೀಡಿದ ದೂರಿನ ಅನ್ವಯ ಬಿಎಂಟಿಎಫ್ ತನಿಖೆ ನಡೆಸಬಹುದು. ಆದರೆ ಅಧಿಕಾರಿಗಳ ಸಭೆ ನಡೆಸುವಂತಿಲ್ಲ~ ಎಂದು ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ತಿಳಿಸಿದರು.ಲೋಕಾಯುಕ್ತಕ್ಕೆ ವಹಿಸುವಂತೆ ಕೋರಿ ಪತ್ರ: ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗ ಸೇರಿದಂತೆ ಪಾಲಿಕೆಯ ಎಲ್ಲ 29 ವಿಭಾಗಗಳಲ್ಲಿ 2008-09ನೇ ಸಾಲಿನಿಂದ ಈವರೆಗೆ ನಡೆದಿರುವ ಕಾಮಗಾರಿಗಳ ಸತ್ಯಾಸತ್ಯತೆ ಪತ್ತೆಗಾಗಿ ಲೋಕಾಯುಕ್ತ ತನಿಖೆಗೆ ಒಪ್ಪಿಸಲು ಅನುಮತಿ ನೀಡುವಂತೆ ಆಯುಕ್ತ ಸಿದ್ದಯ್ಯ ನಗರಾಭಿವೃದ್ಧಿ ಇಲಾಖೆಗೆ ಗುರುವಾರ ಮತ್ತೊಂದು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry