ಕುದುರೆಗಾಡಿ ಸ್ಪರ್ಧೆ ಕಾಲಕ್ಕೆ ಅವಘಡ: ಬಸನಗೌಡ ಯತ್ನಾಳಗೆ ಗಾಯ

7

ಕುದುರೆಗಾಡಿ ಸ್ಪರ್ಧೆ ಕಾಲಕ್ಕೆ ಅವಘಡ: ಬಸನಗೌಡ ಯತ್ನಾಳಗೆ ಗಾಯ

Published:
Updated:

ವಿಜಾಪುರ: ಕುದುರೆ ಗಾಡಿ (ಚಕ್ಕಡಿ) ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಸ್ಪರ್ಧಾಳುಗಳು ಏಕಾಏಕಿ ಚಕ್ಕಡಿ ಚಲಾಯಿಸಿದ್ದರಿಂದ ಕೇಂದ್ರದ ಮಾಜಿ ಸಚಿವ, ಜೆಡಿಎಸ್ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಗಾಯಗೊಂಡ ಘಟನೆ ಬುಧವಾರ ಇಲ್ಲಿ ನಡೆದಿದೆ.ಘಟನೆಯಲ್ಲಿ ಯತ್ನಾಳರ ಮೈಕೈಗೆ ಗಾಯವಾಗಿದ್ದು, ಹೆಚ್ಚಿನ ತೊಂದರೆ ಇಲ್ಲ. ಅವರು ಆರೋಗ್ಯದಿಂದ ಇದ್ದಾರೆ ಎಂದು ಅವರ ಸಹಾಯಕರು ತಿಳಿಸಿದ್ದಾರೆ.ಇಲ್ಲಿಯ ಟಕ್ಕೆಯಲ್ಲಿ ಬುಧವಾರ ಬೆಳಗ್ಗೆ ಕುದುರೆ ಗಾಡಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯನ್ನು ಉದ್ಘಾಟಿಸಲು ಯತ್ನಾಳರನ್ನು ಆಹ್ವಾನಿಸಲಾಗಿತ್ತು.ಚಕ್ಕಡಿಗಳನ್ನು ಸಾಲಾಗಿ ರಸ್ತೆಯ ಮೇಲೆ ನಿಲ್ಲಿಸಲಾಗಿತ್ತು. ಮೊದಲು ಯತ್ನಾಳರು ರಿಬ್ಬನ್ ಕಟ್ ಮಾಡುವುದು ಆ ನಂತರ ತೆಂಗಿನಕಾಯಿ ಒಡೆದ ನಂತರ ಸ್ಪರ್ಧೆ ಆರಂಭಿಸಬೇಕು ಎಂದು ಸ್ಪರ್ಧಾಳುಗಳಿಗೆ ಸೂಚಿಸಲಾಗಿತ್ತು.

`ಸಂಘಟಕರ ಸಲಹೆಯಂತೆ ಯತ್ನಾಳರು ಚಕ್ಕಡಿಗಳ ಎದುರು ನಿಂತು ರಿಬ್ಬನ್ ಕಟ್ ಮಾಡಿದರು.ಯತ್ನಾಳರೂ ಸೇರಿದಂತೆ ಎಲ್ಲರನ್ನೂ ಆಚೆಗೆ ಕಳಿಸಿದ ನಂತರ ತೆಂಗಿನ ಕಾಯಿ ಒಡೆಯಬೇಕಿತ್ತು. ಆದರೆ, ಯತ್ನಾಳರು ರಿಬ್ಬನ್ ಕಟ್ ಮಾಡಿದ ತಕ್ಷಣ ವ್ಯಕ್ತಿಯೊಬ್ಬ ತೆಂಗಿನಕಾಯಿ ಒಡೆದು ಬಿಟ್ಟ. ಸ್ಪರ್ಧೆಯಲ್ಲಿ ಜಯಗಳಿಸುವ ಉಮೇದಿನಲ್ಲಿದ್ದ ರೈತರು ತಮ್ಮ ಚಕ್ಕಡಿಯನ್ನು ಓಡಿಸಲಾರಂಭಿಸಿದರು. ಇದು ಈ ಘಟನೆಗೆ ಕಾರಣ~ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದರು.ಎದುರಿಗೆ ನಿಂತಿದ್ದ ಯತ್ನಾಳರಿಗೆ ಒಂದು ಚಕ್ಕಡಿ ಬಡಿಯಿತು. ಅವರು ಪುಟಿದು ಆಚೆ ಬಿದ್ದರು. ಮತ್ತೊಂದು ಚಕ್ಕಡಿ ಅವರ ಮೇಲೆ ಹಾಯಿತು. ಬಟ್ಟೆಗಳೆಲ್ಲ ಹರಿದವು.

ಚಕ್ಕಡಿಗಳು ಚಿಕ್ಕವಾಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ. ಚಿದಾನಂದ ಇಟ್ಟಂಗಿ ಹಾಗೂ ಇನ್ನೊಬ್ಬ ವ್ಯಕ್ತಿ ಘಟನೆಯಲ್ಲಿ ಗಾಯಗೊಂಡರು. `ನಾನು ಆರೋಗ್ಯವಾಗಿದ್ದು, ಬೆಂಬಲಿಗರು ಗಾಬರಿಪಡುವ ಅಗತ್ಯವಿಲ್ಲ~ ಎಂದು ಯತ್ನಾಳ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry