ಬುಧವಾರ, ಮೇ 19, 2021
27 °C

ಕುದುರೆಮುಖ: ಪ್ರವಾಸೋದ್ಯಮಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಪರಿಸರ ಪ್ರವಾಸೋದ್ಯಮ ಆರಂಭಿಸಲು ತೀವ್ರ ವಿರೋಧ ವ್ಯಕ್ತಪಡಿಸಿರುವ ವೈಲ್ಡ್‌ಲೈಫ್ ಫಸ್ಟ್ ಸಂಸ್ಥೆ, `ಆ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದರೆ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ' ಎಂದು ಎಚ್ಚರಿಸಿದೆ.ಈ ವಿಷಯವಾಗಿ ಸಂಸ್ಥೆಯ ಟ್ರಸ್ಟಿಗಳಾದ ಕೆ.ಎಂ. ಚಿನ್ನಪ್ಪ ಹಾಗೂ ಪ್ರವೀಣ ಭಾರ್ಗವ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. `ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ (ಕೆಐಒಸಿಎಲ್) ಸಂರಕ್ಷಿತ ಅರಣ್ಯದಲ್ಲಿ ನಡೆಸುತ್ತಿದ್ದ ಗಣಿಗಾರಿಕೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ತಡೆಯಲಾಗಿತ್ತು. ಗಣಿಗಾರಿಕೆ ಮೂಲಕ ಅರಣ್ಯಕ್ಕೆ ಸಾಕಷ್ಟು ಹಾನಿ ಮಾಡಿರುವ `ಕೆಐಒಸಿಎಲ್' ಈಗ ಆ ಸ್ಥಳದಲ್ಲಿ ವಿಲಾಸಿ ಪ್ರವಾಸೋದ್ಯಮ ನಡೆಸಲು ಹೊರಟಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.`ಸುಪ್ರೀಂ ಕೋರ್ಟ್ ಆದೇಶಕ್ಕೆ ಸಂಪೂರ್ಣ ವಿರುದ್ಧವಾಗಿ `ಕೆಐಒಸಿಎಲ್', ಸಂರಕ್ಷಿತ ಅರಣ್ಯದಲ್ಲಿ ಗಾಲ್ಫ್ ಕೋರ್ಸ್, ಹೆಲಿಪ್ಯಾಡ್, ಸಾಹಸ ಹಾಗೂ ಜಲ ಕ್ರೀಡೆ ಸೌಕರ್ಯ ಸೇರಿದಂತೆ ಐಷಾರಾಮಿ ವ್ಯವಸ್ಥೆಗಳನ್ನು ಮಾಡಲು ಹೊರಟಿದೆ' ಎಂದು ದೂರಿದ್ದಾರೆ.`ತಾನು ಈ ಹಿಂದೆ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶದಲ್ಲಿ `ಕೆಐಒಸಿಎಲ್' ಈಗ ಯಾವುದೇ ಕಾನೂನುಬದ್ಧ ಹಕ್ಕು ಹೊಂದಿಲ್ಲ. ಕಂಪೆನಿಗೆ ನೀಡಲಾಗಿದ್ದ ಗಣಿಗಾರಿಕೆ ಪರವಾನಗಿಯನ್ನು ಸರ್ಕಾರ ಎಂದಿಗೂ ನವೀಕರಣ ಮಾಡಿಲ್ಲ. 1999ರ ಜುಲೈ 24ರಂದು ಕೊನೆಗೊಂಡಿದ್ದ ಗಣಿ ಗುತ್ತಿಗೆಯನ್ನು ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳ ಮೇಲೆ 2005ರ ಡಿಸೆಂಬರ್ 31ರವರೆಗೆ ಮಾತ್ರ ಮುಂದುವರಿಸಿತ್ತು' ಎಂದು ವಿವರಿಸಿದ್ದಾರೆ.`ಕೋರ್ಟ್ ಆದೇಶದ ಪ್ರಕಾರ 2005ರ ಡಿಸೆಂಬರ್ 31ರ ಬಳಿಕ ಗಣಿಗಾರಿಕೆಗೆ ಒಳಗಾಗಿದ್ದ ಎಲ್ಲಾ 4,605 ಹೆಕ್ಟೇರ್ ಪ್ರದೇಶ ಸಾರ್ವಜನಿಕ ಸ್ವತ್ತಾಗಿದೆ. ಗಣಿಗಾರಿಕೆ ಪರವಾನಗಿ ಮುಗಿದು 14 ವರ್ಷಗಳಾಗಿದ್ದು, ಗಣಿ ಕೆಲಸ ಸ್ಥಗಿತಗೊಂಡು 8 ವರ್ಷಗಳು ಗತಿಸಿವೆ. ಇಷ್ಟೊಂದು ಕಾಲಾವಕಾಶ ಸಿಕ್ಕಿದ್ದರೂ ಸರ್ಕಾರ ಇದುವರೆಗೆ ಆ ಪ್ರದೇಶವನ್ನು ಏಕೆ ವಶಕ್ಕೆ ಪಡೆದಿಲ್ಲ' ಎಂದು ಪ್ರಶ್ನಿಸಿದ್ದಾರೆ.

`ಕೆಐಒಸಿಎಲ್‌ನ ಪರಿಸರ ಪ್ರವಾಸೋದ್ಯಮದ ಪ್ರಸ್ತಾವವನ್ನು 2006ರ ಡಿಸೆಂಬರ್ 15ರಂದು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಹೀಗಾಗಿ ಅದರ ಹೊಸ ಪ್ರಸ್ತಾವ ಕಾನೂನುಬಾಹಿರವಾಗಿದೆ. ಕೆಐಒಸಿಎಲ್ ಚಟುವಟಿಕೆಗಳಿಂದ ಅರಣ್ಯಕ್ಕೆ ್ಙ 139.15 ಕೋಟಿಯಷ್ಟು ಹಾನಿಯಾಗಿದ್ದು, ಮಹಾಲೆಕ್ಕಪಾಲರೇ ತಮ್ಮ ವರದಿಯಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ. ಕಂಪೆನಿಯಿಂದ ಅಷ್ಟೂ ಮೊತ್ತವನ್ನು ವಸೂಲು ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.`30 ವರ್ಷಗಳ ಗಣಿಗಾರಿಕೆಯಿಂದ ಬಳಲಿರುವ ಅರಣ್ಯಕ್ಕೆ ಸಂಪೂರ್ಣ ವಿಶ್ರಾಂತಿ ಬೇಕಿದ್ದು, ಅಲ್ಲಿ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡಬಾರದು' ಎಂದು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.