ಮಂಗಳವಾರ, ನವೆಂಬರ್ 12, 2019
28 °C

ಕುದುರೆಮುಖ ಮಳೆಕಾಡಿನಲ್ಲೂ ಬಿಸಿಲ ಝಳ: ಮರಗಿಡಕ್ಕೆ ಬೆಂಕಿ

Published:
Updated:

ಕಳಸ: ಹೆದ್ದಾರಿಯ ಉದ್ದಕ್ಕೂ ಕಂಡು ಬರುವ ಹುಲ್ಲು ಗಾವಲಿನಲ್ಲಿ ಇನ್ನೂ ಚಿಗುರು ಮೂಡದೆ ಒಣಗಿದ ಹುಲ್ಲು ಕಡ್ಡಿಗಳ ನೀರಸ ದೃಶ್ಯ, ಹೆದ್ದಾರಿಗೆ ಅಡ್ಡಡ್ಡಲಾಗಿ ಹರಿಯುವ ಹಳ್ಳ ತೊರೆಗಳಲ್ಲಿ ಜೀವಜಲವೇ ಇಲ್ಲ, ಅಲ್ಲಲ್ಲಿ ಬೆಂಕಿಗೆ ಆಹುತಿಯಾದ ಮರ- ಗಿಡಗಳು, ಜೊತೆಗೆ 35 ಡಿಗ್ರಿಗೂ ಅಧಿಕ ತಾಪಮಾನ ತಂದ ಬಿಸಿಗಾಳಿ. ಇದು ಬಯಲು ನಾಡಿನ ಯಾವುದೋ ಒಣಕಾಡಿನ ಚಿತ್ರಣ ಅಲ್ಲ. ಬದಲಿಗೆ ಸದಾ ಹಸಿರು ಮತ್ತು ನೀರಿನಿಂದ ಕೂಡಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಮಳೆ ಕೊರತೆ ಮತ್ತು ಉರಿಬಿಸಿಲಿನ ಕಾರಣಕ್ಕೆ ಉದ್ಭವ ವಾಗಿರುವ ದುಸ್ಥಿತಿ.ಪ್ರತಿವರ್ಷವೂ ಸುಮಾರು 300 ಅಂಗುಲದಷ್ಟು ಮಳೆ ಸುರಿಯುವ ಕುದುರೆಮುಖದ ಮಳೆ ಕಾಡುಗಳು ವಿಶ್ವದಲ್ಲೇ ವಿಶಿಷ್ಟ ಮತ್ತು ವೈವಿಧ್ಯಮಯ. ಇಲ್ಲಿನ ನಿತ್ಯಹರಿದ್ವರ್ಣ ಮರಗಿಡಗಳ ಜೊತೆಗೆ ಕಾಡೆಮ್ಮೆ, ಕಡವೆ, ಚಿರತೆ, ಹುಲಿ, ಕರಡಿ, ಕಾಳಿಂಗ ಸರ್ಪ ಮುಂತಾದ ಅಪರೂಪದ ಪ್ರಾಣಿಗಳು ಕೂಡ ಇಲ್ಲಿನ ಮಳೆಕಾಡಿನ ವಿಶೇಷ ಜೀವಿಗಳು.ವರ್ಷದ 12 ತಿಂಗಳು ಕೂಡ ಇಲ್ಲಿ ಹಳ್ಳ, ತೊರೆಗಳು ಹರಿಯುವ ಜೊತೆಗೆ ಹಚ್ಚಹಸುರಿನ ದರ್ಶನ ನೀಡುತ್ತವೆ. ಚಾರಣಪ್ರಿಯರಿಗೆ, ಪ್ರಕೃತಿ ಪ್ರೇಮಿಗಳಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಎಂದರೆ ಜಗತ್ತಿನ ಎಲ್ಲ ಜಂಜಾಟ ಮರೆತು ನಿಸರ್ಗದೊಂದಿಗೆ ಬೆರೆಯುವ ತಾಣ.ಕಳೆದ 4-5 ವರ್ಷಗಳಿಂದ ಮಲೆನಾಡಿನಲ್ಲೂ ಬದಲಾಗುತ್ತಿರುವ ಹವಾಮಾನ ಕುದುರೆಮುಖದ ಮಳೆಕಾಡಿನ ಮೇಲೂ ಅಲ್ಪ ಪ್ರಮಾಣದ ಪ್ರಭಾವ ಬೀರುತ್ತಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಏರುತ್ತಿರುವ ತಾಪಮಾನ ರಾಷ್ಟ್ರೀಯ ಉದ್ಯಾನದ ತಂಪಾದ ಹವಾಮಾನವನ್ನು ನಿಧಾನವಾಗಿ ಬಿಸಿಯಾಗಿಸುತ್ತಿದೆ.ಮಳೆ ಕೊರತೆ ಬತ್ತಿಸಿತು ಒರತೆ: ಕಳೆದ ಮಳೆಗಾಲದಲ್ಲಿ ವಾಡಿಕೆಗಿಂತ ಶೇ.30ಕ್ಕೂ ಕಡಿಮೆ ಮಳೆ ಆಗಿದೆ. ಆನಂತರ ಕುದುರೆಮುಖದ ವೈಶಿಷ್ಟ್ಯಕ್ಕೆ ವಿರುದ್ಧವಾಗಿ ಈ ಬೇಸಿಗೆಯಲ್ಲೂ ಮಳೆ ಅಪರೂಪ ಆಗಿದೆ.  ಪರಿಣಾಮವಾಗಿ ಉದ್ಯಾನದಲ್ಲಿ ಹರಿಯುವ ಅಸಂಖ್ಯ ಗುಪ್ತಗಾಮಿನಿಯರ ಪೈಕಿ ಈ ವರ್ಷ ಅನೇಕ  ಹಳ್ಳಗಳು ಬಹುತೇಕ ಬತ್ತಿವೆ.   ಉದ್ಯಾನದಲ್ಲಿ ಇರುವ ನೀರಿನ ಸೆಲೆಗಳು ಸೊರಗಿದ್ದರಿಂದ ವನ್ಯ ಮೃಗಗಳಿಗೆ ಕುಡಿಯುವ ನೀರಿನ ಲಭ್ಯತೆ ಮೊದಲಿನಷ್ಟು ಸಲೀಸು ಅಲ್ಲ. ಮಳೆ ಕೊರತೆಯಿಂದಾಗಿ ಉದ್ಯಾನದ ಹುಲ್ಲುಗಾವಲುಗಳಲ್ಲಿ ತೇವಾಂಶವೇ ಇಲ್ಲದೆ ಬಣ್ಣಗೆಟ್ಟಿದೆ. ಒಣ ಭೂಮಿಯು ಕೆಲವೆಡೆ ಕಾಡ್ಗಿಚ್ಚಿಗೂ ಅವಕಾಶ ಮಾಡಿದೆ. ರಸ್ತೆ ಬದಿ ಕಂಡು ಬರುತ್ತಿದ್ದ ಪ್ರಾಣಿಗಳು ಬಿಸಿಲಿನಿಂದಾಗಿ ಈಗ ದರ್ಶನ ನೀಡುವುದೇ ಅಪರೂಪ.  `ಕುದುರೆಮುಖ ಕಾಡಿನಲ್ಲಿ ಮಾರ್ಚ್, ಏಪ್ರಿಲ್‌ನಲ್ಲಿ ಮಳೆ ತಪ್ಪುತ್ತಲೇ ಇರಲಿಲ್ಲ. ಆದರೆ ಇಷ್ಟರ ಮಟ್ಟಿಗೆ ಮಳೆ ಕಡಿಮೆಯಾಗಿ ನೀರು ಬತ್ತಿರುವುದು ಮತ್ತು ಬಿಸಿ ಏರಿರುವುದು ಬಹುಶಃ ಇದೇ ಮೊದಲ ಸಲ...' ಎಂದು ಕುದುರೆಮುಖ ಉದ್ಯಾನದ ಬಗ್ಗೆ ವಿಪರೀತ ಪ್ರೀತಿಯೊಂದಿಗೆ ಇಲ್ಲಿನ ಪರಿಸರದಲ್ಲಿ ಆಗುತ್ತಿರುವ ಸ್ಥಿತ್ಯಂತರ ಗಮನಿಸುತ್ತಿರುವ ಪರಿಸರಪ್ರೇಮಿ ಪ್ರೇಮ್ ಸಾಗರ್ ಕಾರಕ್ಕಿ ಹೇಳುತ್ತಾರೆ.ಇಷ್ಟೆಲ್ಲಾ ಆತಂಕದ ನಡುವೆಯೂ ಸಮಾಧಾನದ ಸಂಗತಿ ಎಂದರೆ ಕುದುರೆಮುಖದ ಶೋಲಾ ಕಾಡು ಮತ್ತು ಮಳೆಕಾಡಿನ ಮೇಲೆ ಮಾತ್ರ ಮಳೆ ಕೊರತೆ ಮತ್ತು ಬಿಸಿಲು ಯಾವುದೇ ಪರಿಣಾಮ ಬೀರದೆ ಇರುವುದು. ಇಲ್ಲಿನ ನೂರಾರು ಜಾತಿಯ ಮರಗಳಲ್ಲಿ ಹಸಿರಿನ ಹೊದಿಕೆ ಮಾಮೂಲಿನಂತೆಯೇ ಇದೆ. ಮಳೆಗಾಲದಲ್ಲಿ ಹೀರಿಕೊಂಡ ನೀರಿನ ಆಧಾರದ ಮೇಲೆ ಅವು ಸುಡುಬಿಸಿಲಿನಲ್ಲೂ ನಳನಳಿಸುತ್ತಿವೆ.ವಿಪರ್ಯಾಸ ಎಂದರೆ ಈ ಬಾರಿಯೂ ಮಳೆಗಾಲದಲ್ಲಿ ಕಡಿಮೆ ಮಳೆಯ ಸಾಧ್ಯತೆಯ ಬಗ್ಗೆ ಅಧ್ಯಯನಗಳು ಮುನ್ಸೂಚನೆ ನೀಡಿವೆ. ಈ ಹಿನ್ನೆಲೆಯಲ್ಲಿ ಕುದುರೆಮುಖದ ಮುಂದಿನ ಬೇಸಿಗೆ ಇನ್ನಷ್ಟು ಬಿಸಿ ಮತ್ತು ಭಣಗುಡುವ ಹಳ್ಳ, ತೊರೆ , ಜಲಪಾತದಿಂದ ಕೂಡಲಿದೆಯೇ ಎಂಬ ಭಯ ಈಗಲೇ ಆರಂಭವಾಗಿದೆ.

 

ಪ್ರತಿಕ್ರಿಯಿಸಿ (+)