ಕುದುರೆಮುಖ: ಹುಲಿ ಸಂರಕ್ಷಣಾ ಮೀಸಲು ವಲಯ

7

ಕುದುರೆಮುಖ: ಹುಲಿ ಸಂರಕ್ಷಣಾ ಮೀಸಲು ವಲಯ

Published:
Updated:

ನವದೆಹಲಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ‘ಹುಲಿ ಸಂರಕ್ಷಣಾ ಮೀಸಲು ವಲಯ’ ಎಂದು ಘೋಷಿಸಲು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಉದ್ದೇಶಿಸಿದ್ದು. ಅಗತ್ಯ ಪ್ರಸ್ತಾವನೆ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಹೇಳಿದೆ.ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರಿಗೆ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಜೈರಾಂ ರಮೇಶ್ ಮಂಗಳವಾರ ಬರೆದಿರುವ ಪತ್ರದಲ್ಲಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಣಾ ಮೀಸಲು ವಲಯ ಎಂದು ಘೊಷಿಸುವ ಸಂಬಂಧ ತಕ್ಷಣ ಪ್ರಸ್ತಾವನೆ ಕಳುಹಿಸುವಂತೆ ಕೇಳಿದ್ದಾರೆ.ಪಶ್ಚಿಮ ಘಟ್ಟದ ಅತೀ ದೊಡ್ಡ ಸಂರಕ್ಷಿತ ಪ್ರದೇಶವಾದ ಕುದುರೆಮುಖ ರಾಷ್ಟ್ರೀಯ ಉದ್ಯಾನವು ಜೀವ ವೈವಿಧ್ಯತೆಯ ಸೂಕ್ಷ್ಮ ವಲಯ. ನಿತ್ಯ ಹರಿದ್ವರ್ಣ ಕಾಡಿನಿಂದ ಕೂಡಿರುವ ಇದು  ಹುಲಿ, ಚಿರತೆ ಹಾಗೂ ಕಾಡು ನಾಯಿಗಳ ಆಶ್ರಯ ತಾಣ. ಅವನತಿಯ ಅಂಚಿನಲ್ಲಿರುವ ಅಪರೂಪದ 169 ಜಾತಿಯ ಹಕ್ಕಿಪಕ್ಷಿಗಳು ಈ ಪರಿಸರದಲ್ಲಿ ರಕ್ಷಣೆ ಪಡೆದಿವೆ.ಈ ಪರಿಸರದಲ್ಲಿ ಕಂಡುಬರುವ ಎಂಟು ವಿವಿಧ ಜಾತಿ ಪಕ್ಷಿಗಳು, 50 ಬಗೆ ‘ಸರಿಸೃಪ’ಗಳು ಮತ್ತು ಜಲ ಮತ್ತು ನೆಲದ ಮೇಲೆ ಜೀವಿಸಬಲ್ಲ 34 ಜಾತಿ ಹಕ್ಕಿಗಳು ಕುದುರೆಮುಖ ಅರಣ್ಯದಲ್ಲಿವೆ ಎಂದು  ವಿವರಿಸಿದ್ದಾರೆ.ಹುಲಿ ಸಂತಾನ ವೃದ್ಧಿ ದೃಷ್ಟಿಯಿಂದ ಸಮೃದ್ಧವಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವು  ಮಲ್ನಾಡ್- ಮೈಸೂರು. ಕುದುರೆಮುಖ- ಭದ್ರಾ ಹುಲಿ ವಲಯಗಳ ನಡುವಿದ್ದು ಮಹಾರಾಷ್ಟ್ರದ ಭೀಮಶಂಕರ್‌ವರೆಗೆ ವ್ಯಾಪಿಸಿದೆ. ಈ ಪ್ರದೇಶ ಹುಲಿ ಸಂತಾನ ವೃದ್ಧಿಗೆ ಪೂರಕವಾಗಿದೆ ಎಂಬ ಅಂಶ ಹಲವು ಅಧ್ಯಯನಗಳಿಂದ ಕಂಡುಬಂದಿದೆ ಎಂದು ರಮೇಶ್ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

2002ರ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಲಿ. (ಕೆಐಒಸಿಎಲ್) ಗಣಿಗಾರಿಕೆ ಚಟುವಟಿಕೆ ಸ್ಥಗಿತಗೊಳಿಸಿದೆ. ಇದಲ್ಲದೆ, ಇನ್ನು ಹಲವು ಪ್ರಮುಖ ಗಣಿಗಾರಿಕೆ ಚಟುವಟಿಕೆಗಳು 2005ರಿಂದ ನಿಂತಿದೆ.ಕುದುರೆಮುಖ ಉದ್ಯಾನದಲ್ಲಿರುವ ಗಣಿಗಾರಿಕೆಗೆ ಸಂಬಂಧಿಸಿದಂತೆ ಯಂತ್ರೋಪಕರಣಗಳು, ಮೂಲಸೌಲಭ್ಯಗಳನ್ನು ತೆರವು ಮಾಡಬೇಕಾಗಿದೆ. ಜೀವವೈವಿಧ್ಯತೆ ಸಂರಕ್ಷಣೆ ದೃಷ್ಟಿಯಿಂದ ಇದನ್ನು ಹುಲಿ ಸಂರಕ್ಷಣಾ ವಲಯ ಎಂದು ಘೋಷಣೆ ಮಾಡುವುದರಿಂದ ವನ್ಯಜೀವಿಗಳ ಉಳಿವಿಗಿರುವ ಎಲ್ಲ  ಬೆದರಿಕೆಗಳನ್ನು ನಿವಾರಿಸಬಹುದಾಗಿದೆ ಎಂದಿದ್ದಾರೆ.ಕಾಡುಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷದಿಂದಾಗಿ ಉದ್ಯಾನವನದಲ್ಲಿ ದುಡಿಮೆ ಅವಕಾಶಗಳು ಕಡಿಮೆ ಆಗಿವೆ. ಇದರಿಂದಾಗಿ ಸುಮಾರು 450 ಕುಟುಂಬಗಳು ಸ್ಥಳಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ. ಕಳೆದ ವರ್ಷ 12 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಹುಲಿ ಉದ್ಯಾನ ಎಂದು ಘೋಷಣೆ ಮಾಡುವುದರಿಂದ ಈ ಕುಟುಂಬಗಳ ಸ್ಥಳಾಂತರಕ್ಕೆ ಕೇಂದ್ರದ ನೆರವು ದೊರೆಯಲಿದೆ ಎಂದು ಪರಿಸರ ಸಚಿವರು ಸ್ಪಷ್ಟಪಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry